ಬೆಂಗಳೂರು : ಐಪಿಎಲ್ 2026ರ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದಿರುವ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಇಡೀ ಕ್ರಿಕೆಟ್ ಲೋಕದ ಗಮನ ಸೆಳೆದಿದ್ದಾರೆ. ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಈಗಾಗಲೇ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರುವ ಅವರು, 6 ಪಂದ್ಯಗಳಲ್ಲಿ 41.00 ಸರಾಸರಿ ಮತ್ತು 236.53 ರ ಅತಿ ವೇಗದ ಸ್ಟ್ರೈಕ್ ರೇಟ್‌ನಲ್ಲಿ 246 ರನ್ ಗಳಿಸಿದ್ದಾರೆ. ಜಸ್ಪ್ರೀತ್ ಬುಮ್ರಾ ಮತ್ತು ಜೋಶ್ ಹ್ಯಾಜಲ್‌ವುಡ್‌ರಂತಹ ವಿಶ್ವದರ್ಜೆಯ ಬೌಲರ್‌ಗಳನ್ನು ಲೀಲಾಜಾಲವಾಗಿ ಎದುರಿಸುತ್ತಿರುವ ಈ ಬಾಲಕನ ಆಟ ಕಂಡು ಮಾಜಿ ಕ್ರಿಕೆಟಿಗರು ದಂಗಾಗಿದ್ದಾರೆ.
ಸಚಿನ್ ತೆಂಡೂಲ್ಕರ್‌ಗೆ ಹೋಲಿಸಿದ ಕೆ. ಶ್ರೀಕಾಂತ್
ಟೀಮ್ ಇಂಡಿಯಾದ ಮಾಜಿ ನಾಯಕ ಮತ್ತು ಮಾಜಿ ಮುಖ್ಯ ಆಯ್ಕೆಗಾರ ಕೆ. ಶ್ರೀಕಾಂತ್ ಅವರು ವೈಭವ್ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. 1989ರಲ್ಲಿ 16ನೇ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸಚಿನ್ ತೆಂಡೂಲ್ಕರ್ ಇಂದು ಕ್ರಿಕೆಟ್ ದೇವರಾಗಿದ್ದಾರೆ. ಅದೇ ರೀತಿ, 15ರ ಹರೆಯದಲ್ಲೇ ಅದ್ಭುತ ಪ್ರೌಢಿಮೆ ಮೆರೆಯುತ್ತಿರುವ ವೈಭವ್ ಸೂರ್ಯವಂಶಿ ಕ್ರಿಕೆಟ್ ಲೋಕದ ಮುಂದಿನ ‘ಅರೆದೇವತೆ’ (Demigod) ಆಗಬಲ್ಲರು ಎಂದು ಭವಿಷ್ಯ ನುಡಿದಿದ್ದಾರೆ. “ಈ ಹುಡುಗ ಅಸಾಧಾರಣ ಪ್ರತಿಭಾವಂತ, ಆತ ಬೌಲರ್ ಯಾರೆಂದು ಚಿಂತಿಸದೆ ಮೊದಲ ಎಸೆತದಲ್ಲೇ ಬುಮ್ರಾಗೆ ಸಿಕ್ಸರ್ ಬಾರಿಸುವ ಧೈರ್ಯ ಹೊಂದಿದ್ದಾನೆ,” ಎಂದು ಶ್ರೀಕಾಂತ್ ಬಣ್ಣಿಸಿದ್ದಾರೆ.
ತಕ್ಷಣವೇ ಟೀಮ್ ಇಂಡಿಯಾಗೆ ಆಯ್ಕೆ ಮಾಡಲು ಸಲಹೆ
ವೈಭವ್ ಅವರನ್ನು ತಕ್ಷಣವೇ ಭಾರತ ತಂಡಕ್ಕೆ ಆಯ್ಕೆ ಮಾಡಬೇಕು ಎಂದು ಶ್ರೀಕಾಂತ್ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಅವರಿಗೆ ಸಲಹೆ ನೀಡಿದ್ದಾರೆ. “ಆತನಿಗೆ ಸಮಯ ನೀಡೋಣ, ಸ್ಥಿರತೆ ಕಾಯ್ದುಕೊಳ್ಳಲಿ ಎಂದು ಕಾಯುವ ಅವಶ್ಯಕತೆಯಿಲ್ಲ. ಆತನೊಬ್ಬ ಅಪ್ರತಿಮ ಪ್ರತಿಭೆ (Prodigy), ತಕ್ಷಣವೇ ರಾಷ್ಟ್ರೀಯ ತಂಡಕ್ಕೆ ಸೇರಿಸಿಕೊಳ್ಳಬೇಕು,” ಎಂದು ಒತ್ತಾಯಿಸಿದ್ದಾರೆ. ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಕೂಡ ವೈಭವ್ ಅವರ ಬ್ಯಾಟ್ ಸ್ವಿಂಗ್ ಮತ್ತು ಸಂಯಮವನ್ನು ಕೊಂಡಾಡಿದ್ದು, ಅವರು ಭಾರತೀಯ ಕ್ರಿಕೆಟ್‌ನ ಭವಿಷ್ಯದ ತಾರೆ ಎಂದು ಹೇಳಿದ್ದಾರೆ. ಜೂನ್‌ನಲ್ಲಿ ನಡೆಯಲಿರುವ ಅಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ವೈಭವ್‌ಗೆ ಅವಕಾಶ ಸಿಗುತ್ತದೆಯೇ ಎಂಬುದು ಈಗ ಕುತೂಹಲ ಮೂಡಿಸಿದೆ.
ಇದನ್ನೂ ಓದಿ ; ಕಸ ಹಾಕಿ ಬರ್ತೀನಿ ಎಂದು ಹೋದ ಪತ್ನಿ ಪ್ರಿಯಕರನೊಟ್ಟಿಗೆ ಜೂಟ್!



















