ಬೆಂಗಳೂರು : ಯಲಹಂಕ–ರಾಜಾನುಕುಂಟೆ ರಸ್ತೆಯಲ್ಲಿ ಸಂಭವಿಸಿದ ಭೀಕರ ಬೈಕ್ ಅಪಘಾತದಲ್ಲಿ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಮೃತರನ್ನು ವಚನ್ ಮತ್ತು ಕೃಷ್ಣತ್ ಎಂದು ಗುರುತಿಸಲಾಗಿದೆ. ಬೆಳಗಿನ ಜಾವ ಸುಮಾರು 3 ಗಂಟೆ ವೇಳೆಗೆ ನಾಲ್ಕು ರಸ್ತೆಗಳು ಸೇರುವ ಜಂಕ್ಷನ್ನಲ್ಲಿ ಈ ಅಪಘಾತ ಸಂಭವಿಸಿದೆ.
ರಾಯಲ್ ಎನ್ಫೀಲ್ಡ್ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಬೈಕ್ ಅಂಗಡಿಯ ಗೋಡೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ನಲ್ಲಿದ್ದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಅಪಘಾತದ ಬಳಿಕ ಸ್ಥಳೀಯರು ಅವೈಜ್ಞಾನಿಕ ರಸ್ತೆ ವಿನ್ಯಾಸದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಿರಿದಾದ ರಸ್ತೆ ನಿರ್ಮಿಸಿರುವುದೇ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಸ್ಥಳೀಯರು ಆರೋಪಿಸಿದ್ದು, ಇದೇ ರೀತಿಯ ಅಪಘಾತಗಳು ಮರುಕಳಿಸದಂತೆ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಯಲಹಂಕ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ಕುರಿತು ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ನಗದೇ ಕೊಡಿ, UPI ಪಾವತಿ ಸ್ವೀಕರಿಸಲ್ಲ : MDR ಶುಲ್ಕ ವಿರೋಧಿಸಿ ವರ್ತಕರ ಬೋರ್ಡ್.. ಗ್ರಾಹಕರಲ್ಲಿ ಆತಂಕ!



















