ವಾಷಿಂಗ್ಟನ್: ಅಮೆರಿಕ ಮತ್ತು ಕೆನಡಾ ನಡುವಿನ ಸುದೀರ್ಘ ವ್ಯಾಪಾರ ಸಂಬಂಧದಲ್ಲಿ ಇದೀಗ ತೀವ್ರ ಬಿಕ್ಕಟ್ಟು ಎದುರಾಗಿದೆ. ಕೆನಡಾದ ಉತ್ಪನ್ನಗಳ ಮೇಲೆ ಶೇಕಡಾ 50ರಷ್ಟು ಆಮದು ಸುಂಕ (ಟ್ಯಾರಿಫ್) ವಿಧಿಸಲು ಟ್ರಂಪ್ ಆಡಳಿತ ನಿರ್ಧರಿಸಿದ ಬೆನ್ನಲ್ಲೇ ಉಭಯ ದೇಶಗಳ ನಡುವಿನ ವ್ಯಾಪಾರ ಮಾತುಕತೆ ಮುರಿದುಬಿದ್ದಿದೆ. ಅಮೆರಿಕದ ಕೊನೆಯ ಕ್ಷಣದ ಪ್ರಸ್ತಾಪಗಳನ್ನು “ಅನ್ಯಾಯ ಮತ್ತು ಆರ್ಥಿಕ ವಿರೋಧಿ” ಎಂದು ಕರೆದಿರುವ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ, ಈ ದ್ವಿಪಕ್ಷೀಯ ವ್ಯಾಪಾರ ಮಾತುಕತೆಗಳನ್ನೇ ಅಮಾನತುಗೊಳಿಸಿದ್ದಾರೆ.
20 ಶತಕೋಟಿ ಡಾಲರ್ ಮೌಲ್ಯದ ಸರಕುಗಳ ಮೇಲೆ ಸುಂಕ ಭೀತಿ
ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್ ಅವರ ಹೇಳಿಕೆಯ ಪ್ರಕಾರ, ಈ ಮುಂಚೆ ಒಪ್ಪಿಕೊಂಡಿದ್ದ ಷರತ್ತುಗಳಿಗೆ ಕೆನಡಾ ಬದ್ಧವಾಗಿಲ್ಲ ಮತ್ತು ಹೊಸ ಬೇಡಿಕೆಗಳನ್ನು ಮುಂದಿಡುತ್ತಿದೆ. ಪರಿಣಾಮವಾಗಿ, ಕೆನಡಾದಿಂದ ಅಮೆರಿಕಕ್ಕೆ ರಫ್ತಾಗುವ ಹಾಕಿ ಸ್ಟಿಕ್‌ಗಳಿಂದ ಹಿಡಿದು ವೈದ್ಯಕೀಯ ಉಪಕರಣಗಳವರೆಗಿನ ಸುಮಾರು 20 ಶತಕೋಟಿ ಡಾಲರ್ ಮೌಲ್ಯದ ಸರಕುಗಳ ಮೇಲೆ ಶೇ.50ರಷ್ಟು ಸುಂಕ ಬೀಳಲಿದೆ. ಇದು ಕೆನಡಾ ಪ್ರತಿ ವರ್ಷ ಅಮೆರಿಕಕ್ಕೆ ರಫ್ತು ಮಾಡುವ ಶೇಕಡಾ 5 ರಷ್ಟು ಸರಕುಗಳ ಮೇಲೆ ನೇರ ಪರಿಣಾಮ ಬೀರಲಿದೆ.
ಅಮೆರಿಕದ ನಡೆಗೆ ಮಾರ್ಕ್ ಕಾರ್ನಿ ಖಂಡನೆ
ಉಭಯ ದೇಶಗಳ ನಡುವಿನ ಮಾತುಕತೆ ಮುರಿದಿಬಿದ್ದ ನಂತರ ಪ್ರತಿಕ್ರಿಯಿಸಿದ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ, ಅಮೆರಿಕ ಕೊನೆಯ ಕ್ಷಣದಲ್ಲಿ ತಂದ ಬದಲಾವಣೆಗಳು ಸ್ವೀಕಾರಾರ್ಹವಲ್ಲ ಮತ್ತು ಯಾವುದೇ ಒಪ್ಪಂದದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತಿವೆ ಎಂದು ಕಿಡಿಕಾರಿದ್ದಾರೆ. ಅಮೆರಿಕದ ಸುಂಕಗಳಿಂದ ಕೆನಡಾದ ಉದ್ಯಮಿಗಳು ಮತ್ತು ಕಾರ್ಮಿಕರಿಗೆ ಉಂಟಾಗುವ ನಷ್ಟವನ್ನು ಸರಿದೂಗಿಸಲು ಶೀಘ್ರದಲ್ಲೇ ಹೆಚ್ಚುವರಿ ನೆರವು ನೀಡಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ಐತಿಹಾಸಿಕ ಬಾಂಧವ್ಯಕ್ಕೆ ಬಿದ್ದ ಹೊಡೆತ
ವರ್ಷಕ್ಕೆ ಸುಮಾರು 880 ಶತಕೋಟಿ ಡಾಲರ್ ಮೌಲ್ಯದ ವ್ಯಾಪಾರ ನಡೆಸುವ ಮತ್ತು 5,525 ಮೈಲಿಗಳ ಸುರಕ್ಷಿತ ಗಡಿಯನ್ನು ಹಂಚಿಕೊಳ್ಳುವ ಇಬ್ಬರು ನಿಕಟ ಮಿತ್ರರ ನಡುವಿನ ಸಂಬಂಧ ಈಗ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ತಲುಪಿದೆ. ಅಮೆರಿಕದ ಗ್ರಾಹಕರಿಗೂ ಈ ಸುಂಕದ ಬಿಸಿ ತಟ್ಟಲಿದ್ದು, ಸರಕುಗಳ ಬೆಲೆ ತೀವ್ರ ಏರಿಕೆಗೆ ಕಾರಣವಾಗಬಹುದು. ಡೊನಾಲ್ಡ್ ಟ್ರಂಪ್ ಅವರ ಈ ಕಟ್ಟುನಿಟ್ಟಿನ ವ್ಯಾಪಾರ ನೀತಿಯು ಕೆನಡಾ ಜನತೆಯಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.



















