ಬೆಂಗಳೂರು : ನಗರದ ವರ್ತೂರು ಸಮೀಪದ ಬೆಳಗೆರೆಯ ಜಲಮಂಡಳಿಯ (BWSSB) ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ ನಡೆದ ಭೀಕರ ಅವಘಡದಲ್ಲಿ ಇಬ್ಬರು ಕಾರ್ಮಿಕರು ಟ್ಯಾಂಕ್‌ಗೆ ಬಿದ್ದು ನಾಪತ್ತೆಯಾಗಿದ್ದು, ಅವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಮತ್ತೊಬ್ಬ ಕಾರ್ಮಿಕನನ್ನು ರಕ್ಷಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿನ್ನೆ ಸಂಜೆ ಸುಮಾರು 5 ರಿಂದ 6 ಗಂಟೆಯ ನಡುವೆ ಈ ದುರ್ಘಟನೆ ನಡೆದಿದೆ. ಘಟಕದ ತ್ಯಾಜ್ಯ ನೀರು ಸಂಸ್ಕರಣಾ ಟ್ಯಾಂಕ್‌ನ ಮೂರು ಗೇಟ್‌ಗಳ ದುರಸ್ತಿ ಕಾರ್ಯ ನಡೆಯುತ್ತಿದ್ದ ವೇಳೆ ಮೂವರು ಕಾರ್ಮಿಕರು ಸುಮಾರು 40 ಅಡಿ ಆಳದ ಟ್ಯಾಂಕ್‌ಗೆ ಆಯತಪ್ಪಿ ಬಿದ್ದಿದ್ದಾರೆ ಎನ್ನಲಾಗಿದೆ.
ಪ್ರಾಣಾಪಾಯದಿಂದ ಪಾರಾದ ಕಾರ್ಮಿಕ ಕಾರ್ತಿಕ್ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಮಿಳುನಾಡು ಮೂಲದ ಎಂಜಿನಿಯರ್ ಅಗಿಲನ್ ಮೋಹನ್ (ಅಖಿಲೇಶ್) ಹಾಗೂ ಬಿಹಾರ ಮೂಲದ ಬ್ರಜೇಶ್ ಕುಮಾರ್ ಟ್ಯಾಂಕ್‌ನಲ್ಲಿ ನಾಪತ್ತೆಯಾಗಿದ್ದಾರೆ.
ಟ್ಯಾಂಕ್‌ನಲ್ಲಿ ಸುಮಾರು 10 ಅಡಿಗೂ ಹೆಚ್ಚು ತ್ಯಾಜ್ಯ ನೀರು ತುಂಬಿಕೊಂಡಿರುವುದರಿಂದ ಹಾಗೂ ನೀರಿನ ಹರಿವು ಹೆಚ್ಚಿರುವ ಕಾರಣ ಶೋಧ ಕಾರ್ಯಕ್ಕೆ ಅಡಚಣೆಯಾಗಿದೆ. ಮೃತದೇಹಗಳ ಪತ್ತೆಗಾಗಿ ಹಗ್ಗಕ್ಕೆ ಗ್ರ್ಯಾಪಲ್ ನೆಲ್ ಕಟ್ಟಿ ಟ್ಯಾಂಕ್ ಒಳಗೆ ಹುಡುಕಾಟ ನಡೆಸಲಾಗುತ್ತಿದೆ.
ಟ್ಯಾಂಕ್‌ನಲ್ಲಿರುವ ತ್ಯಾಜ್ಯ ನೀರನ್ನು ಸಂಪೂರ್ಣವಾಗಿ ಹೊರಹಾಕದೆ ಮೃತದೇಹಗಳ ಪತ್ತೆ ಕಷ್ಟಕರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ, ಎನ್‌ಡಿಆರ್‌ಎಫ್ ತಂಡ ಹಾಗೂ ವರ್ತೂರು ಪೊಲೀಸರು ಭೇಟಿ ನೀಡಿ ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಕಾರ್ಮಿಕರು ಸಮರ್ಪಕ ಸುರಕ್ಷತಾ ಸಾಧನಗಳನ್ನು ಬಳಸದೇ ಟ್ಯಾಂಕ್‌ಗೆ ಇಳಿದಿರುವ ಸಾಧ್ಯತೆ ಇದ್ದು, ಈ ಕುರಿತು ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅವಘಡದ ನಿಖರ ಕಾರಣದ ಬಗ್ಗೆ ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಮರಕ್ಕೆ ಕಾರು ಡಿಕ್ಕಿಯಾಗಿ ಚಾಲಕ ಸ್ಥಳದಲ್ಲೇ ಸಾವು!


















