ಬೆಂಗಳೂರು : ರಾಜ್ಯ ಕಾಂಗ್ರೆಸ್‌ನಲ್ಲಿ ಸಚಿವ ಸಂಪುಟ ವಿಸ್ತರಣೆ ಬಳಿಕ ಅಸಮಾಧಾನದ ಹೊಗೆ ಜೋರಾಗಿದ್ದು, ಸಚಿವ ಸ್ಥಾನ ಕೈತಪ್ಪಿದ 20ಕ್ಕೂ ಹೆಚ್ಚು ಶಾಸಕರು ಪಕ್ಷದ ವಿರುದ್ಧವೇ ಅಸಮಾಧಾನ ಹೊರಹಾಕುತ್ತಿದ್ದಾರೆ. ಕೆಲವೆಡೆ ಕಾರ್ಯಕರ್ತರ ಪ್ರತಿಭಟನೆ, ತುರ್ತು ಸಭೆಗಳು ಹಾಗೂ ರಾಜೀನಾಮೆ ಎಚ್ಚರಿಕೆಗಳು ಕಾಂಗ್ರೆಸ್ ವರಿಷ್ಠರು ಹಾಗೂ ಸಿಎಂ ಡಿಕೆಶಿಗೆ ಹೊಸ ತಲೆನೋವಾಗಿ ಪರಿಣಮಿಸಿವೆ.
ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಕರಾವಳಿ ಭಾಗಕ್ಕೆ ಸಚಿವ ಸ್ಥಾನ ಸಿಗದಿರುವುದಕ್ಕೆ ಸಂಬಂಧಿಸಿದಂತೆ ಹಲವು ಶಾಸಕರು ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂಡಾಯ ಶಮನಕ್ಕೆ ತೀವ್ರ ಕಸರತ್ತು ನಡೆಸುತ್ತಿದ್ದಾರೆ.
ಸಚಿವ ಸ್ಥಾನ ಕೈತಪ್ಪಿದವರಿಗೆ ಪಕ್ಷದಲ್ಲಿ ಪ್ರಮುಖ ಹುದ್ದೆಗಳು, ನಿಗಮ–ಮಂಡಳಿಗಳ ಅಧ್ಯಕ್ಷ ಸ್ಥಾನಗಳು ಹಾಗೂ ಜವಾಬ್ದಾರಿಗಳನ್ನು ನೀಡುವ ಮೂಲಕ ಅಸಮಾಧಾನ ತಣಿಸಲು ನಾಯಕರು ಪ್ರಯತ್ನಿಸುತ್ತಿದ್ದಾರೆ. “ರಾಜೀನಾಮೆ ಕೊಡೋರು ಕೊಡಿ” ಎಂಬ ಸಂದೇಶದ ಜೊತೆಗೆ ಭಿನ್ನಮತ ಶಮನದ ರಾಜಕೀಯವೂ ನಡೆಯುತ್ತಿದೆ.
ಇನ್ನೊಂದೆಡೆ ನೂತನ ಸಚಿವರಿಗೆ ಖಾತೆ ಹಂಚಿಕೆಯೂ ಕಾಂಗ್ರೆಸ್‌ಗೆ ಮತ್ತೊಂದು ಸವಾಲಾಗಿ ಪರಿಣಮಿಸಿದೆ. ಕೆಲ ಹಳೆಯ ಸಚಿವರು ತಮ್ಮ ಹಿಂದಿನ ಖಾತೆಗಳನ್ನೇ ಮುಂದುವರಿಸಬೇಕು ಎಂದು ಪಟ್ಟು ಹಿಡಿದಿದ್ದರೆ, ನೂತನ ಸಚಿವರೂ ತಮಗೆ ಇಷ್ಟದ ಇಲಾಖೆಗಳಿಗಾಗಿ ಲಾಬಿ ನಡೆಸುತ್ತಿದ್ದಾರೆ.
ಸಿದ್ದರಾಮಯ್ಯ ಸಂಪುಟದಲ್ಲಿದ್ದ ಬಹುತೇಕ ಸಚಿವರಿಗೆ ಹಳೆಯ ಖಾತೆಗಳನ್ನೇ ನೀಡುವ ಚಿಂತನೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಲ್ಲಿದೆ ಎನ್ನಲಾಗಿದೆ. ಶಾಸಕರ ಹಿರಿತನ, ಜಾತಿ ಸಮೀಕರಣ, ಪ್ರಾದೇಶಿಕ ಸಮತೋಲನ ಹಾಗೂ ರಾಜಕೀಯ ವರ್ಚಸ್ಸನ್ನು ಆಧಾರವಾಗಿಟ್ಟುಕೊಂಡು ಖಾತೆ ಹಂಚಿಕೆ ಮಾಡುವ ಕುರಿತು ನಾಯಕರು ಚರ್ಚೆ ನಡೆಸುತ್ತಿದ್ದಾರೆ.
ಈ ನಡುವೆ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಸಚಿವರಿಗೆ ಜಿಲ್ಲೆಗಳ ಉಸ್ತುವಾರಿ ನೀಡಿ ಅಧ್ಯಯನಕ್ಕೆ ಕಳುಹಿಸಿರುವ ಸರ್ಕಾರ, ಖಾತೆ ಹಂಚಿಕೆಯಲ್ಲೂ ಯಾವುದೇ ಹೊಸ ಬಂಡಾಯ ಭುಗಿಲೆದ್ದಂತೆ ಆಗದಂತೆ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಖಾತೆ ಹಂಚಿಕೆ ಪೂರ್ಣಗೊಂಡ ಬಳಿಕವೂ ಅಸಮಾಧಾನ ಸ್ಫೋಟಗೊಳ್ಳುವ ಸಾಧ್ಯತೆಯನ್ನು ಮನಗಂಡು ಕಾಂಗ್ರೆಸ್ ನಾಯಕತ್ವ ಅತ್ಯಂತ ಜಾಗರೂಕತೆಯಿಂದ ಮುಂದುವರಿಯುತ್ತಿದೆ.
ಇದನ್ನೂ ಓದಿ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ


















