ಮುಂಬೈ : ನಕಲಿ ಹಾಲಿನ ಉತ್ಪನ್ನ ಹಾಗೂ ಕಲಬೆರಕೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇವುಗಳಿಗೆ ಕಡಿವಾಣ ಹಾಕಲು ಮಹಾರಾಷ್ಟ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಹಾಲಿನ ಕೊಬ್ಬಿನ ಬದಲು ತರಕಾರಿ ಎಣ್ಣೆ ಹಾಗೂ ಸಸ್ಯಜನ್ಯ ಕೊಬ್ಬು ಬಳಸಿ ತಯಾರಿಸಲಾಗುವ ‘ಅನಲಾಗ್’ ಅಥವಾ ನಾನ್-ಡೈರಿ ಪನೀರ್‌ನ ತಯಾರಿಕೆ, ಸಂಸ್ಕರಣೆ, ಸಂಗ್ರಹಣೆ, ಸಾಗಣೆ ಮತ್ತು ಮಾರಾಟವನ್ನು ರಾಜ್ಯಾದ್ಯಂತ ಸಂಪೂರ್ಣವಾಗಿ ನಿಷೇಧಿಸಿ ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ. ಆಹಾರ ಸುರಕ್ಷತಾ ಆಯುಕ್ತ ತುಕಾರಾಂ ಮುಂಧೆ ಅವರು ಈ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದ್ದು, ಛತ್ತೀಸ್‌ಗಢದ ನಂತರ ಇಂತಹ ನಿರ್ಬಂಧ ಹೇರಿದ ದೇಶದ ಎರಡನೇ ರಾಜ್ಯವಾಗಿ ಮಹಾರಾಷ್ಟ್ರ ಹೊರಹೊಮ್ಮಿದೆ. ಗ್ರಾಹಕರಿಗೆ ಅಸಲಿ ಪನೀರ್ ಹೆಸರಿನಲ್ಲಿ ನಕಲಿ ಉತ್ಪನ್ನ ನೀಡಿ ವಂಚಿಸುವುದನ್ನು ತಡೆಯುವುದು ಈ ಕ್ರಮದ ಮುಖ್ಯ ಉದ್ದೇಶವಾಗಿದೆ.
6 ತಿಂಗಳ ಜೈಲು, 1 ಲಕ್ಷ ದಂಡ: ಸಾವು ಸಂಭವಿಸಿದರೆ ಜೀವಾವಧಿ ಶಿಕ್ಷೆ!
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಅಡಿಯಲ್ಲಿ ಈ ಹೊಸ ನಿಯಮವನ್ನು ಜಾರಿಗೆ ತರಲಾಗಿದ್ದು, ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದೆ. ಈ ನಿಷೇಧ ಆದೇಶವನ್ನು ಮೀರಿದರೆ ಗರಿಷ್ಠ 6 ತಿಂಗಳ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ.ವರೆಗೆ ದಂಡ ವಿಧಿಸಲು ಅವಕಾಶವಿದೆ. ಒಂದೊಮ್ಮೆ ಇಂತಹ ನಕಲಿ ಅಥವಾ ಸುರಕ್ಷಿತವಲ್ಲದ ಆಹಾರ ಪದಾರ್ಥಗಳ ಸೇವನೆಯಿಂದ ಯಾವುದೇ ಜೀವಹಾನಿ ಸಂಭವಿಸಿದರೆ, ಜವಾಬ್ದಾರರಾದವರಿಗೆ ಜೀವಾವಧಿ ಶಿಕ್ಷೆ ಹಾಗೂ ಕನಿಷ್ಠ 10 ಲಕ್ಷ ರೂ. ದಂಡ ವಿಧಿಸಲಾಗುವುದು ಎಂದು ಆಹಾರ ಮತ್ತು ಔಷಧ ಆಡಳಿತ ಮಂಡಳಿ (FDA) ಎಚ್ಚರಿಸಿದೆ.
ಗೋದಾಮುಗಳಲ್ಲಿ ಸಾವಿರಾರು ಕೆಜಿ ನಕಲಿ ಪನೀರ್ ಪತ್ತೆ
ಕಳೆದ ಕೆಲವು ತಿಂಗಳುಗಳಿಂದ ಮಹಾರಾಷ್ಟ್ರದಾದ್ಯಂತ ನಕಲಿ ಹಾಗೂ ಕೃತಕ ಡೈರಿ ಉತ್ಪನ್ನಗಳ ವಿರುದ್ಧ ಬೃಹತ್ ಕಾರ್ಯಾಚರಣೆ ನಡೆಯುತ್ತಿದೆ. ಇತ್ತೀಚೆಗೆ ಪುಣೆಯ ಮಂಜರಿ ಖುರ್ದ್‌ನಲ್ಲಿರುವ ಗೋದಾಮೊಂದರ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು, ಸುಮಾರು 1,400 ಕೆಜಿ ನಕಲಿ ಪನೀರ್, 1,800 ಕೆಜಿ ಸ್ಕಿಮ್ಡ್ ಮಿಲ್ಕ್ ಪೌಡರ್, 400 ಕೆಜಿ ಜಿಎಂಎಸ್ ಪೌಡರ್ ಹಾಗೂ 718 ಲೀಟರ್ ಪಾಮ್ ಆಯಿಲ್ ಅನ್ನು ಜಪ್ತಿ ಮಾಡಿದ್ದರು. ಕೇವಲ ಅಗ್ಗದ ಪರ್ಯಾಯ ವಸ್ತುಗಳನ್ನು ಬಳಸಿ ಪನೀರ್ ತಯಾರಿಸುತ್ತಿದ್ದ ಜಾಲಗಳನ್ನು ಬಯಲಿಗೆಳೆದ ಬೆನ್ನಲ್ಲೇ, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಈ ಕಠಿಣ ನಿಷೇಧವನ್ನು ಜಾರಿಗೆ ತಂದಿದೆ.
ಇದನ್ನೂ ಓದಿ : ದುಬೈನಲ್ಲಿ 20 ನಿಮಿಷಗಳಲ್ಲಿ 7 ಭೀಕರ ಸ್ಫೋಟ : ಇರಾನ್-ಅಮೆರಿಕ ಸಂಘರ್ಷದ ನಡುವೆಯೇ ಘಟನೆ



















