ಬೆಂಗಳೂರು : ಮ್ಯಾಟ್ರಿಮೋನಿ ಆಪ್ ಮೂಲಕ ಪರಿಚಯವಾಗಿ ಎರಡನೇ ಮದುವೆಯಾಗುವುದಾಗಿ ನಂಬಿಸಿ ವ್ಯಕ್ತಿಯೋರ್ವನಿಗೆ ಸುಮಾರು ₹2.5 ಲಕ್ಷ ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಸಮಾಜ್ ಸಾಥಿ (Samaj Saathi) ಆಪ್‌ನಲ್ಲಿ ಪರಿಚಯವಾದ ಮಹಿಳೆ ಪ್ರೀತಿ, ಮದುವೆ ಹಾಗೂ ಭವಿಷ್ಯದ ಜೀವನದ ಕನಸು ತೋರಿಸಿ ಹಂತ ಹಂತವಾಗಿ ಹಣ ಪಡೆದು ಕೊನೆಗೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿರುವ ಆರೋಪ ಕೇಳಿಬಂದಿದೆ.
ಮಂಡ್ಯ ಮೂಲದ ನಾಗೇಶ್ ಎಂಬುವರಿಗೆ ಸುಮಾರು ಎರಡು ತಿಂಗಳ ಹಿಂದೆ ಸಮಾಜ್ ಸಾಥಿ ಆಪ್ ಮೂಲಕ ಬೆಂಗಳೂರಿನ ನಿವಾಸಿ ರೇಖಾ ಎಂಬ ಮಹಿಳೆ ಪರಿಚಯವಾಗಿದ್ದಳು. ಇಬ್ಬರೂ ಎರಡನೇ ಮದುವೆ ಕುರಿತು ಮಾತುಕತೆ ನಡೆಸಿದ್ದು, ಮದುವೆಗೆ ಸಿದ್ಧತೆ ಕೂಡ ಆರಂಭಿಸಿದ್ದರು ಎನ್ನಲಾಗಿದೆ. ಇದೇ ವೇಳೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ಬಳಿ ತನ್ನ ಜಮೀನು ಇದ್ದು, ಅದಕ್ಕೆ ತಂತಿ ಬೇಲಿ ಹಾಕಿಸಬೇಕಿದೆ ಎಂದು ಹೇಳಿ ರೇಖಾ ಮೊದಲಿಗೆ ಒಂದು ಲಕ್ಷ ರೂಪಾಯಿ ಹಣ ಪಡೆದಿದ್ದಳು.
ನಂತರ ತನ್ನ ಚಿನ್ನಾಭರಣಗಳು ಬ್ಯಾಂಕ್‌ನಲ್ಲಿ ಅಡಮಾನದಲ್ಲಿದ್ದು, ಅವು ಹರಾಜಿಗೆ ಬಂದಿವೆ. ಅವುಗಳನ್ನು ಬಿಡಿಸಿಕೊಳ್ಳಲು ತುರ್ತಾಗಿ ಹಣ ಬೇಕಾಗಿದೆ ಎಂದು ಹೇಳಿ ಮತ್ತೆ ಹಣ ಕೇಳಿದ್ದಳು. ರೇಖಾ ಕಳುಹಿಸಿದ ಬೇರೆ ಬೇರೆ ಮೊಬೈಲ್ ಸಂಖ್ಯೆಗಳ ಮೂಲಕ ನಾಗೇಶ್ ಫೋನ್‌ಪೇ ಸೇರಿದಂತೆ ಆನ್‌ಲೈನ್ ವರ್ಗಾವಣೆಯ ಮೂಲಕ ಹಣ ಕಳುಹಿಸಿದ್ದಾರೆ. ಹೀಗೆ ವಿವಿಧ ಕಾರಣಗಳನ್ನು ಹೇಳುತ್ತಾ ಒಟ್ಟು ಸುಮಾರು ₹2.5 ಲಕ್ಷ ಹಣ ಪಡೆದುಕೊಂಡಿರುವ ಆರೋಪ ಕೇಳಿಬಂದಿದೆ.
ಕೆಲ ದಿನಗಳ ಬಳಿಕ ರೇಖಾಳ ವರ್ತನೆ ಬಗ್ಗೆ ನಾಗೇಶ್‌ಗೆ ಅನುಮಾನ ಶುರುವಾಗಿದ್ದು, ಪ್ರಶ್ನೆ ಮಾಡಿದಾಗ ಆಕೆ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಸಂಪರ್ಕ ಕಡಿತಗೊಳಿಸಿದ್ದಾಳೆ. ಬಳಿಕ ತಾನು ಮೋಸ ಹೋಗಿರುವುದು ಅರಿತ ನಾಗೇಶ್ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ದೂರು ದಾಖಲಿಸಿಕೊಂಡಿರುವ ಬ್ಯಾಡರಹಳ್ಳಿ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಇದೇ ಮಹಿಳೆ ಇದೇ ರೀತಿಯಲ್ಲಿ ಇನ್ನೂ ಹಲವರಿಗೆ ವಂಚನೆ ಮಾಡಿರುವ ಸಾಧ್ಯತೆಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದು, ಆರೋಪಿ ರೇಖಾಳ ಪತ್ತೆಗೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ : NABARD ಫೈನಾನ್ಶಿಯಲ್ ಸರ್ವಿಸಸ್ ಸಂಸ್ಥೆಯಲ್ಲಿ ನೇಮಕಾತಿ : ಈ ಕೂಡಲೇ ಅರ್ಜಿ ಸಲ್ಲಿಸಿ



















