ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ‘ದಿ ಟಾಕ್ಸಿಕ್‘ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿಕೆಯಾಗಿದೆ. ಈ ಹಿಂದೆ ಮಾರ್ಚ್ 19ಕ್ಕೆ ಚಿತ್ರ ಬಿಡುಗಡೆಗೆ ದಿನಾಂಕ ನಿಗಧಿಯಾಗಿತ್ತು. ಬಳಿಕ ಮಧ್ಯಪ್ರಾಚ್ಯದಲ್ಲಿನ ಯುದ್ಧದ ಕಾರಣದಿಂದ ಸಿನಿಮಾ ಬಿಡುಗಡೆ ದಿನಾಂಕವನ್ನು ಜೂನ್ 4ಕ್ಕೆ ಮುಂದೂಡಿಕೆ ಮಾಡಲಾಗಿತ್ತು. ಇದೀಗ ಮತ್ತೆ ಚಿತ್ರದ ದಿನಾಂಕ ಮುಂದೂಡಿಕೆಯಾಗಿರುವ ಮಾಹಿತಿಯನ್ನು ನಟ ಯಶ್ ಶೇರ್ ಮಾಡಿಕೊಂಡಿದ್ದಾರೆ.
ಟಾಕ್ಸಿಕ್ ಚಿತ್ರವನ್ನ ಮುಂದಕ್ಕೆ ಹಾಕಿರೋ ರಾಕಿಂಗ್ ಸ್ಟಾರ್ ಯಶ್, ಅಭಿಮಾನಿಗಳಿಗೆ ಒಂದು ಪತ್ರ ಬರೆದಿದ್ದಾರೆ. ”ನಾವು ಕೆಲವು ಸಿನಿಮಾಗಳನ್ನು ಮಾಡುತ್ತೇವೆ, ಆದರೆ ಮತ್ತೆ ಕೆಲವು ಸಿನಿಮಾಗಳು ನಾವು ಚಿತ್ರರಂಗವನ್ನು ಏಕೆ ಇಷ್ಟಪಟ್ಟೆವು ಎಂಬುದನ್ನು ನೆನಪಿಸುತ್ತವೆ. ‘ಟಾಕ್ಸಿಕ್’ ಅಂತಹ ಒಂದು ಪಯಣ. ಸಿನೆಮಾಕಾನ್‌ನಲ್ಲಿ ನಮ್ಮ ಚಿತ್ರವನ್ನು ಪ್ರದರ್ಶಿಸಿದಾಗ ಸಿಕ್ಕ ಅಭೂತಪೂರ್ವ ಜಾಗತಿಕ ಪ್ರತಿಕ್ರಿಯೆಯು, ಈ ಚಿತ್ರವು ವಿಶ್ವದಾದ್ಯಂತ ತನ್ನ ಪೂರ್ಣ ಸಾಮರ್ಥ್ಯದೊಂದಿಗೆ ತಲುಪಬೇಕು ಎಂಬ ನಮ್ಮ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿದೆ.

’ಟಾಕ್ಸಿಕ್’ ಸಿದ್ಧವಾಗಿದೆ. ಸದ್ಯ ನಾವು ಜಾಗತಿಕ ವಿತರಣೆ ಮತ್ತು ಸಹಭಾಗಿತ್ವದ ಕಾರ್ಯಗಳಲ್ಲಿ ತೊಡಗಿದ್ದೇವೆ. ಈ ಹಿನ್ನೆಲೆಯಲ್ಲಿ, ನಾವು ಚಿತ್ರದ ಬಿಡುಗಡೆಯ ಸಮಯವನ್ನು ಮರುಹೊಂದಿಸಲು ನಿರ್ಧರಿಸಿದ್ದೇವೆ. ಈ ಮೊದಲು ಘೋಷಿಸಿದಂತೆ ಜೂನ್.4ರಂದು ಸಿನಿಮಾ ಬಿಡುಗಡೆಯಾಗುವುದಿಲ್ಲ, ಬದಲಾಗಿ ಜಾಗತಿಕ ಮಾರುಕಟ್ಟೆಗೆ ಪೂರಕವಾದ ದಿನಾಂಕದಂದು ವಿಶ್ವದಾದ್ಯಂತ ತೆರೆಕಾಣಲಿದೆ. ‘ಟಾಕ್ಸಿಕ್’ ಶೀಘ್ರದಲ್ಲೇ ನಿಮ್ಮ ಹತ್ತಿರದ ಚಿತ್ರಮಂದಿರಗಳಿಗೆ ಬರಲಿದೆ.
ಭಾರತೀಯ ಚಿತ್ರರಂಗವು ಜಾಗತಿಕ ವೇದಿಕೆಯಲ್ಲಿ ತನ್ನ ಧ್ವನಿಯನ್ನು ಬಲವಾಗಿ ಕೇಳಿಸುತ್ತಿರುವ ಈ ಸಮಯದಲ್ಲಿ, ಗುಣಮಟ್ಟವನ್ನು ಹೆಚ್ಚಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಒಬ್ಬ ನಟ ಮತ್ತು ನಿರ್ಮಾಪಕನಾಗಿ, ನಮ್ಮ ಸಿನಿಮಾ ಜಾಗತಿಕ ಮಟ್ಟದಲ್ಲಿ ಅಂದುಕೊಂಡ ಪ್ರಭಾವವನ್ನು ಬೀರುವಂತೆ ಮಾಡಲು ಈ ಸಮಯವನ್ನು ತೆಗೆದುಕೊಳ್ಳುತ್ತಿದ್ದೇನೆ. ಇದು ಭಾರತೀಯ ಚಿತ್ರರಂಗಕ್ಕೆ ನಾನು ನೀಡುವ ಸಣ್ಣ ಕೊಡುಗೆ ಎಂದು ಭಾವಿಸುತ್ತೇನೆ.
ಪ್ರತಿಯೊಂದು ಹಂತದಲ್ಲೂ ನಿಮ್ಮ ಬೆಂಬಲ ನನ್ನೊಂದಿಗಿದೆ, ಅದಕ್ಕಾಗಿ ನಾನು ಚಿರಋಣಿ. ಕೆಲವು ಕಥೆಗಳು ತಾಳ್ಮೆಯನ್ನು ಬಯಸುತ್ತವೆ, ಕೆಲವು ಪಯಣಗಳು ಅದನ್ನು ಕೇಳುತ್ತವೆ. ನಿಮ್ಮ ಸಂಭ್ರಮಕ್ಕೆ ಸಕ್ಕತ್ ಸಿನಿಮಾ ನೀಡುವುದಾಗಿ ನಾವು ಭರವಸೆ ನೀಡುತ್ತೇವೆ — ಇದು ಭಾರತೀಯ ಚಿತ್ರರಂಗ ಹೆಮ್ಮೆಪಡುವಂತಹ ಕ್ಷಣವಾಗಲಿದೆ ಎಂದು ರಾಕಿಂಗ್ ಸ್ಟಾರ್ ಯಶ್ ತಿಳಿಸಿದ್ಧಾರೆ.
ಇದನ್ನೂ ಓದಿ : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ನೇಮಕಾತಿ : ಈ ಜಿಲ್ಲೆಯವರಿಗಿದು ಗುಡ್ ನ್ಯೂಸ್!



















