ಮುಂಬೈ : ದಿವಂಗತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಮತ್ತು ಮಹಾರಾಷ್ಟ್ರದ ಮಾಜಿ ಗೃಹ ಸಚಿವ, ಎನ್ಸಿಪಿ (ಎಸ್ಪಿ) ನಾಯಕ ಅನಿಲ್ ದೇಶ್ಮುಖ್ಗೆ ಭಾರಿ ಸಂಕಷ್ಟ ಎದುರಾಗಿದೆ. ನ್ಯಾಯಕ್ಕಾಗಿ ಹೋರಾಡುತ್ತಿರುವ ತಮ್ಮ ಪ್ರಯತ್ನವನ್ನು ರಾಜಕೀಯ ಪ್ರೇರಿತ ಎಂದು ಬಿಂಬಿಸಿ ತಮಗೆ ಮಾನಹಾನಿ ಉಂಟುಮಾಡಿದ್ದಾರೆ ಎಂದು ಆರೋಪಿಸಿ ದಿಶಾ ಸಾಲಿಯಾನ್ ಅವರ ತಂದೆ ಸತೀಶ್ ಸಾಲಿಯಾನ್ ಅವರು ಈ ಇಬ್ಬರೂ ನಾಯಕರಿಗೆ 500 ಕೋಟಿ ರೂಪಾಯಿಗಳ ಕಾನೂನು ನೋಟಿಸ್ ಕಳುಹಿಸಿದ್ದಾರೆ.
ನ್ಯಾಯಕ್ಕಾಗಿ ಹೋರಾಟದ ಹಾದಿತಪ್ಪಿಸಿದ ಆರೋಪ
2020ರ ಜೂನ್ 8ರಂದು ಮುಂಬೈನ ಮಾಲಡ್ ಪ್ರದೇಶದ ಕಟ್ಟಡವೊಂದರಿಂದ ಬಿದ್ದು ದಿಶಾ ಸಾಲಿಯಾನ್ (28) ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಆರಂಭದಲ್ಲಿ ಇದನ್ನು ಆಕಸ್ಮಿಕ ಸಾವು ಎಂದು ಪರಿಗಣಿಸಲಾಗಿದ್ದರೂ, ನಂತರ ಸತೀಶ್ ಸಾಲಿಯಾನ್ ಅವರು ಮುಂಬೈ ಹೈಕೋರ್ಟ್ ಮೆಟ್ಟಿಲೇರಿ ಮರು ತನಿಖೆಗೆ ಆಗ್ರಹಿಸಿದ್ದರು.
ತಮ್ಮ ಮಗಳನ್ನು ಸಾಮೂಹಿಕವಾಗಿ ಅತ್ಯಾಚಾರಗೈದು ಕೊಲೆ ಮಾಡಲಾಗಿದೆ ಎಂಬುದು ಅವರ ಆರೋಪ. ಆದರೆ, ತಮ್ಮ ಮಗಳ ಗ್ಯಾಂಗ್ ರೇಪ್ ಹಾಗೂ ಕೊಲೆ ಪ್ರಕರಣದಲ್ಲಿ ಕಾನೂನುಬದ್ಧ ತನಿಖೆಯನ್ನು ಕೋರುತ್ತಿರುವ ಒಬ್ಬ ತಂದೆಯನ್ನು, ರಾಜಕೀಯ ದುರುದ್ದೇಶಕ್ಕಾಗಿ ನ್ಯಾಯಾಂಗ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ವ್ಯಕ್ತಿಯಂತೆ ಬಿಂಬಿಸಲಾಗಿದೆ ಎಂದು ನೋಟಿಸ್ನಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಸಿಬಿಐ ಈಗಾಗಲೇ ತಮಗೆ ಕ್ಲೀನ್ ಚಿಟ್ ನೀಡಿದೆ ಎಂದು ಆದಿತ್ಯ ಠಾಕ್ರೆ ಸುಳ್ಳು ಪ್ರಚಾರ ಮಾಡಿದ್ದಾರೆ ಎಂದೂ ಸಾಲಿಯಾನ್ ಆರೋಪಿಸಿದ್ದಾರೆ.
ಬಹಿರಂಗ ಕ್ಷಮೆಯಾಚನೆಗೆ ಪಟ್ಟು
ಆದಿತ್ಯ ಠಾಕ್ರೆ ಮತ್ತು ಅನಿಲ್ ದೇಶ್ಮುಖ್ ಅವರು ಮಾಡಿದ ಸುಳ್ಳು ಮತ್ತು ಆಧಾರರಹಿತ ಆರೋಪಗಳಿಂದ ತಮ್ಮ ಗೌರವಕ್ಕೆ ಭಂಗ ಬಂದಿದೆ ಎಂದು ಸಾಲಿಯಾನ್ ಹೇಳಿದ್ದಾರೆ. ಆದ್ದರಿಂದ, ಎಲ್ಲಾ ಪ್ರಮುಖ ಮುದ್ರಣ, ದೃಶ್ಯ ಮತ್ತು ಡಿಜಿಟಲ್ ಮಾಧ್ಯಮ ವೇದಿಕೆಗಳಲ್ಲಿ ಬೇಷರತ್ತಾಗಿ ಬಹಿರಂಗ ಕ್ಷಮೆಯಾಚಿಸಬೇಕು ಹಾಗೂ ಕನಿಷ್ಠ 3 ನಿಮಿಷಗಳ ವೀಡಿಯೊ ಕ್ಷಮೆಯಾಚನೆಯನ್ನು ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಪೋಸ್ಟ್ ಮಾಡಬೇಕು ಎಂದು ನೋಟಿಸ್ನಲ್ಲಿ ಆಗ್ರಹಿಸಲಾಗಿದೆ.
ಆರೋಪಗಳನ್ನು ನಿರಾಕರಿಸಿದ ಆದಿತ್ಯ ಠಾಕ್ರೆ
ಈ ನಡುವೆ, ಸಿಬಿಐ ತನ್ನ ಎಫ್ಐಆರ್ನಲ್ಲಿ ತಮ್ಮ ಹೆಸರನ್ನು ಸೇರಿಸಿದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಆದಿತ್ಯ ಠಾಕ್ರೆ, “ನಾನು ದಿಶಾ ಸಾಲಿಯಾನ್ ಅವರನ್ನು ಎಂದಿಗೂ ಭೇಟಿಯಾಗಿಲ್ಲ, ಆಕೆಯ ಪರಿಚಯವೂ ನನಗಿರಲಿಲ್ಲ. ಕಳೆದ 6 ವರ್ಷಗಳಿಂದ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ನನ್ನ ಹೆಸರನ್ನು ಈ ದುರಂತ ಘಟನೆಗೆ ಎಳೆದು ತಂದು ನನ್ನ ಚಾರಿತ್ರ್ಯ ವಧೆ ಮಾಡಲು ರಾಜಕೀಯ ದುರುದ್ದೇಶದಿಂದ ಯತ್ನಿಸಲಾಗುತ್ತಿದೆ,” ಎಂದು ‘ಎಕ್ಸ್’ (X) ವೇದಿಕೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಸದ್ಯ ಸಿಬಿಐ ಕೊಲೆ ಮತ್ತು ಕ್ರಿಮಿನಲ್ ಪಿತೂರಿ ಪ್ರಕರಣ ದಾಖಲಿಸಿಕೊಂಡು ಮರು ತನಿಖೆಯನ್ನು ಚುರುಕುಗೊಳಿಸಿದೆ.
ಇದನ್ನೂ ಓದಿ : ಐಸಿಸಿ ಟಿ20 ರ್ಯಾಂಕಿಂಗ್ನಲ್ಲಿ ಅಭಿಷೇಕ್ ಶರ್ಮಾ ಭರ್ಜರಿ ಏರಿಕೆ ; ನಂ.1 ಪಟ್ಟದತ್ತ ಭಾರತದ ಸ್ಫೋಟಕ ಬ್ಯಾಟರ್!



















