ಮುಂಬೈ : ಪ್ರಸಿದ್ಧ ರಿಯಾಲಿಟಿ ಶೋ ಹಿಂದಿ ‘ಬಿಗ್ ಬಾಸ್ 20’ ರ ‘ವೀಕೆಂಡ್ ಕಾ ವಾರ್’ ಸಂಚಿಕೆಯಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಆನ್‌ಲೈನ್ ಟ್ರೋಲಿಗರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೋ ಸ್ಪರ್ಧಿ ಸ್ಕೌಟ್ ಅವರಿಗೆ ಕಿವಿಮಾತು ಹೇಳುವ ಸಂದರ್ಭದಲ್ಲಿ ತಮ್ಮ ಸ್ವಂತ ಜೀವನದ ಉದಾಹರಣೆ ನೀಡಿದ ಸಲ್ಮಾನ್ ಖಾನ್, ತಮ್ಮ ವಯಸ್ಸು, ದೇಹದ ತೂಕ ಮತ್ತು ನೋಟವನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ಟ್ರೋಲ್ ಮಾಡುತ್ತಿರುವವರಿಗೆ ನೇರ ಸವಾಲೆಸೆದರು. ಅಷ್ಟೇ ಅಲ್ಲದೆ, ವೇದಿಕೆಯಲ್ಲೇ ತಮ್ಮ ಶರ್ಟ್ ಹಾಗೂ ಹ್ಯಾಟ್ ತೆಗೆದು, ತಮ್ಮ ದೇಹದಾರ್ಢ್ಯವನ್ನು ಪ್ರದರ್ಶಿಸಿದ ಅವರು “ಸಾಧ್ಯವಾದರೆ ಈಗ ಟ್ರೋಲ್ ಮಾಡಿ” ಎಂದು ಸವಾಲು ಹಾಕಿದರು.
ವೈಯಕ್ತಿಕ ದಾಳಿ, ಬಾಡಿ ಶೇಮಿಂಗ್ ವಿರುದ್ಧ ಕಿಡಿಕಾರಿದ ನಟ
ಟ್ರೋಲ್ ಮಾಡುವವರ ಮನಸ್ಥಿತಿಯನ್ನು ಪ್ರಶ್ನಿಸಿದ 60 ವರ್ಷದ ನಟ, “ಕಮೆಂಟ್ ಮಾಡುವ ಮುನ್ನ ಪ್ರತಿಯೊಬ್ಬರೂ ಒಮ್ಮೆ ಕನ್ನಡಿ ನೋಡಿಕೊಳ್ಳಿ. ನಿಮ್ಮ ಶರೀರ, ನಿಮ್ಮ ಮುಖ ಮತ್ತು ನಿಮ್ಮ ಹೆತ್ತವರ ಆರೋಗ್ಯವನ್ನು ಒಮ್ಮೆ ಗಮನಿಸಿ ನಂತರ ಬೇರೆಯವರ ಬಗ್ಗೆ ಮಾತನಾಡಿ,” ಎಂದು ಖಾರವಾಗಿ ಪ್ರತಿಕ್ರಿಯಿಸಿದರು. ತಮಗಾಗಿ ಅಥವಾ ಇತರ ನಟರ ಆರೋಗ್ಯದ ಕುರಿತು ಕಾಳಜಿ ವ್ಯಕ್ತಪಡಿಸುವುದರಲ್ಲಿ ಅರ್ಥವಿದೆ, ಆದರೆ ಸಾಯಿ ಮಂಜ್ರೇಕರ್, ವರುಣ್ ಧವನ್ ಅಥವಾ ಚಲನಚಿತ್ರ ರಂಗದ ಕಲಾವಿದರನ್ನು ಹೀಗಳೆಯುವುದು ಅಸಹ್ಯಕರ ನಡವಳಿಕೆ ಎಂದು ಅವರು ವ್ಯಾಖ್ಯಾನಿಸಿದರು. ಇದೇ ವೇಳೆ ತಮ್ಮ ಬೋಳು ತಲೆಯ ಬಗ್ಗೆ ಬಂದ ಟೀಕೆಗಳಿಗೆ ಸ್ಪಷ್ಟನೆ ನೀಡಿ, ಅದು ಚಿತ್ರವೊಂದರ ಲುಕ್ ಹಾಗೂ ಇತ್ತೀಚೆಗೆ ನಿಧನರಾದ ಆಪ್ತ ಸ್ನೇಹಿತನ ನೆನಪಿಗಾಗಿ ಮಾಡಿಕೊಂಡಿದ್ದು ಎಂದು ತಿಳಿಸಿದರು.
ಮಹಿಳೆಯರ ಆತ್ಮಗೌರವಕ್ಕೆ ಧಕ್ಕೆ
ಟ್ರೋಲಿಗರ ಅಸಭ್ಯ ಭಾಷೆಯು ಅವರ ಬೆಳೆದ ವಾತಾವರಣ ಮತ್ತು ಸಂಸ್ಕಾರವನ್ನು ತೋರಿಸುತ್ತದೆ ಎಂದ ಸಲ್ಮಾನ್, ಅಂತಹ ಕೀಳು ಮನಸ್ಥಿತಿಯ ಜನರನ್ನು ‘ಪರಾವಲಂಬಿಗಳು’ (ಪ್ಯಾರಾಸೈಟ್ಸ್) ಎಂದು ಕರೆದರು. ಇದೇ ವೇಳೆ ಚಿತ್ರರಂಗದ ಮಹಿಳೆಯರ ಫೋಟೋಗಳನ್ನು ಸೆರೆಹಿಡಿಯುವಾಗ ಪಾಪರಾಜಿಗಳು ತೋರುವ ಅತಿಯಾದ ಹಾಗೂ ಕಿರುಕುಳಕಾರಿ ವರ್ತನೆಯನ್ನು ಅವರು ಕಟುವಾಗಿ ಟೀಕಿಸಿದರು. ನಟಿಯರ ಅಸಹಜ ಭಂಗಿಗಳ ಫೋಟೋಗಳನ್ನು ತೆಗೆಯುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಇಂತಹ ಅನಗತ್ಯ ನಡೆಗಳನ್ನು ಸಹಿಸದೆ ಮಹಿಳೆಯರು ಮತ್ತು ನಟಿಯರು ನೇರವಾಗಿ ಸ್ಥಳದಲ್ಲೇ ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ : ಮುಂಬೈನಲ್ಲಿ ಭೀಕರ ಅಪಘಾತ : ಮೇಲ್ಸೇತುವೆಯಿಂದ ಕೆಳಕ್ಕೆ ಬಿದ್ದು ಪಲ್ಟಿಯಾದ ಕಾರು.. 3 ಬಲಿ!



















