ಬೆಂಗಳೂರು : ನಗರದ ಬಸವಗುಡಿಯ ಕೆ.ಆರ್. ರಸ್ತೆಯಲ್ಲಿ ಪೈಪ್‌ಲೈನ್ ಕಾಮಗಾರಿ ಬಳಿಕ ಸರಿಯಾಗಿ ರಸ್ತೆ ಮುಚ್ಚದೇ ಬಿಟ್ಟಿದ್ದರಿಂದ ಬಿಎಂಟಿಸಿ ಬಸ್ ರಸ್ತೆ ಗುಂಡಿಗೆ ಸಿಲುಕಿದ ಘಟನೆ ನಡೆದಿದೆ. ಪದ್ಮನಗರದಿಂದ ಕೆ.ಆರ್. ಮಾರ್ಕೆಟ್ ಕಡೆಗೆ ತೆರಳುತ್ತಿದ್ದ KA57 F 0827 ಸಂಖ್ಯೆಯ ಬಿಎಂಟಿಸಿ ಬಸ್ ಈ ಅವಘಡಕ್ಕೆ ಒಳಗಾಗಿದೆ.
ಪೈಪ್‌ಲೈನ್ ಕಾಮಗಾರಿ ನಡೆಸಿದ ಬಳಿಕ ಮಣ್ಣು ಮತ್ತು ಜಲ್ಲಿ ಹಾಕಿ ಸಿಬ್ಬಂದಿ ತೆರಳಿದ್ದರಿಂದ ರಸ್ತೆ ದುರ್ಬಲಗೊಂಡಿತ್ತು. ಬಸ್ ಸಂಚರಿಸುತ್ತಿದ್ದ ವೇಳೆ ರಸ್ತೆ ಕುಸಿದು ಬಸ್‌ನ ಹಿಂಬದಿ ಹಾಗೂ ಮುಂಭಾಗದ ಎರಡೂ ಚಕ್ರ ಗುಂಡಿಗೆ ಸಿಲುಕಿದೆ.
ಘಟನೆ ನಡೆದ ತಕ್ಷಣವೇ ಕಂಡಕ್ಟರ್ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಬಸ್‌ನಿಂದ ಇಳಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಮತ್ತು ಎಲ್ಲ ಪ್ರಯಾಣಿಕರೂ ಸುರಕ್ಷಿತರಾಗಿದ್ದಾರೆ.
ಘಟನೆ ಕುರಿತು ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದರೂ ತಕ್ಷಣ ಸ್ಪಂದನೆ ಸಿಗಲಿಲ್ಲ ಎನ್ನಲಾಗಿದೆ. ರಸ್ತೆ ಮಧ್ಯೆಯೇ ಬಸ್ ನಿಂತ ಪರಿಣಾಮ ಕೆ.ಆರ್. ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡುವಂತಾಯಿತು.
ಸ್ಥಳೀಯರು ಕಾಮಗಾರಿ ನಡೆಸಿದ ಬಳಿಕ ರಸ್ತೆ ಸರಿಯಾಗಿ ಮರುಸ್ಥಾಪನೆ ಮಾಡದಿರುವುದೇ ಈ ಅವಘಡಕ್ಕೆ ಕಾರಣ ಎಂದು ಆರೋಪಿಸಿದ್ದು, ಸಂಬಂಧಪಟ್ಟ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತು!



















