ಬೆಂಗಳೂರು : ಬೆಂಗಳೂರು ಉತ್ತರ ತಾಲೂಕಿನ ತೋಟದಗುಡ್ಡದಹಳ್ಳಿಯಲ್ಲಿ ಮನಕಲಕುವ ಘಟನೆ ನಡೆದಿದೆ. ಕುಡಿತದ ಚಟ ಬಿಡುವಂತೆ ಪೋಷಕರು ಬುದ್ಧಿವಾದ ಹೇಳಿದ್ದರಿಂದ ಮನನೊಂದಿದ್ದ 18 ವರ್ಷದ ಯುವಕ ದೇವರಾಜ್ ಎಂಬಾತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ದೇವರಾಜ್, ಕಟ್ಟಡ ಕಾರ್ಮಿಕರಾಗಿರುವ ಶಾಂತಪ್ಪ ಮತ್ತು ಭೀಮವ್ವ ದಂಪತಿಯ ಪುತ್ರನಾಗಿದ್ದು, ಸುಮಾರು ಹತ್ತು ವರ್ಷಗಳ ಹಿಂದೆ ಯಾದಗಿರಿ ಜಿಲ್ಲೆಯಿಂದ ಬೆಂಗಳೂರಿಗೆ ವಲಸೆ ಬಂದ ಈ ಕುಟುಂಬ ತೋಟದಗುಡ್ಡದಹಳ್ಳಿಯಲ್ಲಿ ನೆಲೆಸಿತ್ತು.
ಪಿಯುಸಿ ಓದುತ್ತಿದ್ದ ವೇಳೆ ದೇವರಾಜ್ ಕಾಲೇಜಿಗೆ ನಿಯಮಿತವಾಗಿ ಹೋಗದೆ ಕುಡಿತದ ಚಟಕ್ಕೆ ಒಳಗಾಗಿದ್ದ ಎನ್ನಲಾಗಿದೆ. ಈ ವಿಚಾರವಾಗಿ ಪೋಷಕರು ಆಗಾಗ ಬುದ್ಧಿವಾದ ಹೇಳುತ್ತಿದ್ದರು. ಇದೇ ಕಾರಣಕ್ಕೆ ಮನನೊಂದಿದ್ದ ಆತ, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಸೀಲಿಂಗ್ ಕಂಬಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ತಂದೆ ಶಾಂತಪ್ಪ ಅವರು ಮಧ್ಯಾಹ್ನ ಊಟಕ್ಕೆ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಘಟನಾ ಸಂಬಂಧ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಯ ನಿಖರ ಕಾರಣ ಕುರಿತು ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಕಲಬುರಗಿಯಲ್ಲಿ ಭೀಕರ ಅಪಘಾತ : ಬೈಕ್‌ನಲ್ಲಿ ತ್ರಿಬಲ್ ರೈಡ್ ಹೋದವರು ಸ್ಥಳದಲ್ಲೇ ಸಾವು!


















