ನವದೆಹಲಿ : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸಲ್ಲಿಸಿರುವ ಹೊಸ ಜಾಮೀನು ಅರ್ಜಿ ಇಂದು (ಏ.4) ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 2025ರ ಆಗಸ್ಟ್ 14ರಂದು ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ದರ್ಶನ್ ಹಾಗೂ ಇತರ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ರದ್ದುಗೊಳಿಸಿತ್ತು. ಆದರೆ, ಎಂಟು ತಿಂಗಳು ಕಳೆದರೂ ಸಾಕ್ಷಿಗಳ ವಿಚಾರಣೆ ಪೂರ್ಣಗೊಳ್ಳದ ಕಾರಣ ದರ್ಶನ್ ಪರ ವಕೀಲರು ಸುಪ್ರೀಂಕೋರ್ಟ್‌ಗೆ ಹೊಸ ರಿಟ್ ಅರ್ಜಿ ಸಲ್ಲಿಸಿದ್ದು, ಜಾಮೀನಿಗೆ ಮನವಿ ಮಾಡಿದ್ದಾರೆ.
ಎಂಟು ತಿಂಗಳು ಕಳೆದರೂ ಸಾಕ್ಷಿಗಳ ವಿಚಾರಣೆ ಮುಕ್ತಾಯವಾಗಿಲ್ಲ. 273 ಸಾಕ್ಷಿಗಳ ಪೈಕಿ ಕೇವಲ 15 ಸಾಕ್ಷಿಗಳ ವಿಚಾರಣೆಯಷ್ಟೇ ಮುಗಿದಿದೆ. ಇದೇ ರೀತಿಯಾದರೆ ವಿಚಾರಣೆ ಮುಗಿಯಲು ಹಲವು ವರ್ಷಗಳೇ ಬೇಕಾಗುತ್ತದೆ. ಹೀಗಾಗಿ, ದರ್ಶನ್‌ಗೆ ಜಾಮೀನು ಮಂಜೂರು ಮಾಡಬೇಕು ಎಂದು ದರ್ಶನ್ ಪರ ವಕೀಲರು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ನ್ಯಾಯಮೂರ್ತಿ ಪರ್ದೀವಾಲ ನೇತೃತ್ವದ ಪೀಠದಲ್ಲಿ ಅರ್ಜಿಯ ವಿಚಾರಣೆ ನಡೆಯಲಿದೆ.
ಸುಪ್ರೀಂ ಕೋರ್ಟ್ ಬಳಿ ಕಷ್ಟ ಹೇಳಿಕೊಂಡ ದರ್ಶನ್!?
ನಟ ದರ್ಶನ್ ಜಾಮೀನಿಗಾಗಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಕಷ್ಟ ಹೇಳಿಕೊಂಡಿದ್ದು, ಜೈಲಿನಲ್ಲಿ ತಮಗಾಗುತ್ತಿರುವ ಹತ್ತು ಹಲವು ಸಮಸ್ಯೆಗಳನ್ನು ಬಿಚ್ಚಿಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಮಾಧ್ಯಮವೊಂದು ವರದಿ ಮಾಡಿದ್ದು, ನಟ ದರ್ಶನ್ ಅವರು ಪರಪ್ಪನ ಅಗ್ರಹಾರದಲ್ಲಿ ಜೈಲಿನಲ್ಲಿ ತಮಗೆ ಎದುರಾಗುತ್ತಿರುವ ಸಮಸ್ಯೆಗಳನ್ನು ಅವರು ಎಳೆಎಳೆಯಾಗಿ ವಿವರಿಸಿದ್ದಾರೆ. ದೀರ್ಘಕಾಲದ ಜೈಲುವಾಸದಿಂದ ವೃತ್ತಿ ಜೀವನಕ್ಕೆ ತೊಂದರೆ ಆಗಿದೆ. ಸಾಕ್ಷಿಗಳ ವಿಚಾರಣೆ ವಿಳಂಬ ಆಗುತ್ತಿದೆ ಎಂದು ಕೂಡ ಅವರು ಹೇಳಿದ್ದಾರೆ ಎನ್ನಲಾಗಿದೆ.
ಜೈಲಿನಲ್ಲಿ ಸಹ-ಕೈದಿಗಳಿಂದ ಬೆದರಿಕೆ ಹಾಕಲಾಗುತ್ತಿದೆ. ತಮ್ಮನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ನಿಯಮ ಮೀರಿ ತಮ್ಮನ್ನು ಕ್ವಾರಂಟೈನ್ ಸೆಲ್ನಲ್ಲಿಡಲಾಗಿದೆ. ಇದರಿಂದ ಮಾನಸಿಕವಾಗಿ, ದೈಹಿಕವಾಗಿ ಹಾನಿಕಾರಕ ಪರಿಣಾಮವಾಗುತ್ತಿದೆ ಎಂದು ಜಾಮೀನು ಅರ್ಜಿಯಲ್ಲಿ ದರ್ಶನ್ ಅವರು ಕಷ್ಟ ಹೇಳಿಕೊಂಡಿದ್ದಾರೆ.
ಇದಲ್ಲದೆ ಜೈಲಿನಲ್ಲಿ ಸಹ-ಕೈದಿಗಳು ನಿಂದನೆ, ಮೂದಲಿಸುವುದು ಸೇರಿ ಹಲವು ರೀತಿ ಪ್ರಚೋದನೆ ನೀಡುತ್ತಿದ್ದಾರೆ. ಜೈಲಿನಲ್ಲಿ ಇತರೆ ಕೈದಿಗಳಿಗಿಂತ ತಾರತಮ್ಯ ಮಾಡಲಾಗುತ್ತಿದೆ. ಕುಟುಂಬದವರ ಭೇಟಿಗೆ ಸಮಾನ ಸಮಯ ನೀಡುತ್ತಿಲ್ಲ. ಆಹಾರ, ಬಟ್ಟೆ, ಹಾಸಿಗೆ ಪಡೆಯಲೂ ಬಿಡುತ್ತಿಲ್ಲ. ಜೈಲು ಸೆಲ್ನ ಕಾರಿಡಾರ್ನಲ್ಲಿ ಮಾತ್ರ ವಾಕ್ ಮಾಡಲು ಬಿಡುತ್ತಿದ್ದಾರೆ. ಬೆನ್ನು ನೋವಿದ್ದರೂ ಕೇವಲ 2-3 ಮಾತ್ರ ಫಿಸಿಯೋಥೆರಪಿ ಮಾಡಲಾಗಿದೆ ಎಂದು ಜಾಮೀನು ಅರ್ಜಿಯಲ್ಲಿ ತಿಳಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ದಾವಣಗೆರೆ ಬೈ ಎಲೆಕ್ಷನ್ ಫಲಿತಾಂಶ – ಮತ ಎಣಿಕೆ ಆರಂಭ.. ಯಾರಿಗೆ ಮುನ್ನಡೆ?



















