ಮೈಸೂರು : ಇಟ್ಟಿಗೆಗೂಡು ಕುಸಿದು ಮೂವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಬೂದಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟವರನ್ನು ರಾಜೇಶ್ (32), ನಾಗರಾಜು (35) ಮತ್ತು ನಾರಾಯಣ್ (40) ಎಂದು ಗುರುತಿಸಲಾಗಿದೆ. ಮೃತರು ಬೂದಳ್ಳಿ ಗ್ರಾಮದ ನಿವಾಸಿಗಳಾಗಿದ್ದು, ಸಿದ್ದರಾಜು ಎಂಬುವರಿಗೆ ಸೇರಿದ ಇಟ್ಟಿಗೆಗೂಡಿನಲ್ಲಿ ಕೆಲಸ ಮಾಡುತ್ತಿದ್ದರು.
ಇಟ್ಟಿಗೆಗೂಡನ್ನು ತೆರವುಗೊಳಿಸುವ ವೇಳೆ ಏಕಾಏಕಿ ಇಟ್ಟಿಗೆಗೂಡು ಕುಸಿದು ಮೂವರೂ ಅದರಡಿ ಸಿಲುಕಿದ್ದಾರೆ. ಸ್ಥಳೀಯರು ರಕ್ಷಿಸಲು ಹರಸಾಹಸಪಟ್ಟರೂ, ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಘಟನಾ ಸ್ಥಳಕ್ಕೆ ಟಿ. ನರಸೀಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಮಳೆ ಅಬ್ಬರಕ್ಕೆ ತೀರ್ಥಹಳ್ಳಿಯಲ್ಲಿ ದುರಂತ – ಮನೆ ಮೇಲೆ ಗುಡ್ಡ ಕುಸಿದು ಒಂದೇ ಕುಟುಂಬದ ಮೂವರು ದುರ್ಮರಣ!



















