ಮುಂಬೈ: ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ – 2026) ಚುನಾವಣೆಗೂ ಮುನ್ನ ಮಹಾರಾಷ್ಟ್ರ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಠಾಕ್ರೆ ಕುಟುಂಬದ ಸಹೋದರರಾದ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ನಡುವಿನ ಮೈತ್ರಿ ಅಧಿಕೃತಗೊಂಡಿದೆ.
ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಈ ವಿಷಯವನ್ನು ಖಚಿತಪಡಿಸಿದ್ದು, ಉಭಯ ನಾಯಕರ ನಡುವೆ “ಮನೋಮಿಲನ” (ಹೃದಯಗಳ ಬೆಸುಗೆ) ಏರ್ಪಟ್ಟಿದೆ ಎಂದು ಹೇಳಿದ್ದಾರೆ.

ಮೈತ್ರಿಗೆ ಕಾರಣವೇನು?
ಇತ್ತೀಚೆಗೆ ಮಹಾರಾಷ್ಟ್ರದ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಹಿಂದಿ ಭಾಷೆಯನ್ನು ಹೇರಿಕೆ ಮಾಡುವ ಸರ್ಕಾರದ ನಿರ್ಧಾರದ ವಿರುದ್ಧ ಇಬ್ಬರೂ ಸಹೋದರರು ಒಟ್ಟಾಗಿ ಧ್ವನಿ ಎತ್ತಿದ್ದರು. ಆ ಕ್ಷಣದಲ್ಲೇ ಈ “ಮನೋಮಿಲನ” ಸಂಭವಿಸಿತ್ತು ಎಂದು ಸಂಜಯ್ ರಾವತ್ ತಿಳಿಸಿದ್ದಾರೆ. ಕಳೆದ ರಾತ್ರಿ ಸೀಟು ಹಂಚಿಕೆ ಪ್ರಕ್ರಿಯೆಗೆ ಅಂತಿಮ ಸ್ಪರ್ಶ ನೀಡಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಸೀಟು ಹಂಚಿಕೆ ವಿವರ:
ನಾಸಿಕ್, ಪುಣೆ, ಕಲ್ಯಾಣ್-ಡೊಂಬಿವಲಿ ಮತ್ತು ಮೀರಾ-ಭಯಂದರ್ ಪಾಲಿಕೆಗಳ ಸೀಟು ಹಂಚಿಕೆ ಮಾತುಕತೆ ಪೂರ್ಣಗೊಂಡಿದೆ. ಮುಂಬೈ ಪಾಲಿಕೆಗೆ ಸಂಬಂಧಿಸಿದಂತೆ, ಎರಡೂ ಪಕ್ಷಗಳ ಕಾರ್ಯಕರ್ತರ ಭಾವನೆಗಳನ್ನು ಗೌರವಿಸಿ ಸೀಟುಗಳನ್ನು ಹಂಚಿಕೆ ಮಾಡಲಾಗುತ್ತಿದೆ. ವರದಿಗಳ ಪ್ರಕಾರ, ಶಿವಡಿ (Sewri)ಯಲ್ಲಿ ಎರಡು ಸ್ಥಾನಗಳಲ್ಲಿ ಠಾಕ್ರೆ ಬಣ (ಯುಬಿಟಿ) ಮತ್ತು ಒಂದು ಸ್ಥಾನದಲ್ಲಿ ಎಂಎನ್‌ಎಸ್ ಸ್ಪರ್ಧಿಸಲು ಒಮ್ಮತ ಮೂಡಿದೆ. ಭಾಂಡುಪ್‌ನ ವಾರ್ಡ್ ನಂ. 114ರ ಬಗ್ಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯವಿದ್ದು, ಅದನ್ನು ಬಗೆಹರಿಸಲಾಗುತ್ತಿದೆ.
ಬಿಜೆಪಿ ಮೈತ್ರಿಗೆ ಟಾಂಗ್:
ಈ ಸಂದರ್ಭದಲ್ಲಿ ಮಹಾಯುತಿ ಮೈತ್ರಿಕೂಟವನ್ನು ಪ್ರಶ್ನಿಸಿರುವ ರಾವತ್, “ಏಕನಾಥ್ ಶಿಂಧೆ ಮತ್ತು ಬಿಜೆಪಿ ನಡುವಿನ ಮೈತ್ರಿ ಏಕೆ ಇನ್ನೂ ಅಂತಿಮವಾಗಿಲ್ಲ? ಅಜಿತ್ ಪವಾರ್ ಮತ್ತು ಬಿಜೆಪಿ ಮೈತ್ರಿ ಘೋಷಣೆ ಏಕೆ ತಡವಾಗುತ್ತಿದೆ?” ಎಂದು ಕೇಳಿದ್ದಾರೆ. ಸದ್ಯ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಜೊತೆಗೆ ಮಾತುಕತೆ ನಡೆಯುತ್ತಿದ್ದು, ಕಾಂಗ್ರೆಸ್ ಜೊತೆಗಿನ ಅಧಿಕೃತ ಮಾತುಕತೆ ಮುಕ್ತಾಯವಾಗಿದೆ ಎಂದು ರಾವತ್ ತಿಳಿಸಿದ್ದಾರೆ. ಇಬ್ಬರು ಠಾಕ್ರೆ ಸಹೋದರರು ಒಂದಾಗಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ತಿರುವಿಗೆ ಕಾರಣವಾಗಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಹಿಂದೂ ಮಹಿಳೆಯ ಸೆರಗು ಎಳೆಯುವ ಧೈರ್ಯ ನಿಮಗಿದೆಯೇ? : ನಿತೀಶ್ ಕುಮಾರ್‌ಗೆ ಜಾವೇದ್ ಅಖ್ತರ್ ಪ್ರಶ್ನೆ



















