ಬೆಂಗಳೂರು : ಬಿಡದಿ ಟೌನ್ಶಿಪ್ ಕುರಿತ ಸರ್ವೆಗೆ ಹೋಗಿದ್ದ ಅಧಿಕಾರಿಗಳ ಮೇಲೆ ರೈತರು ಹಲ್ಲೆ ನಡೆಸಿದ ವಿಚಾರವಾಗಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ಬಿಡದಿಯಲ್ಲಿ ಅಧಿಕಾರಿಗಳಿಗೆ ತೊಂದರೆ ಆಗಿದೆ, ಅಧಿಕಾರಿಗಳಿಗೆ ಹೊಡೆಯೋದು ಬೇಡ, ತಪ್ಪು ಮಾಡಿದ್ದರೆ ನನಗೆ ಹೊಡೆಯಲಿ ಹೊಡೆಸಿಕೊಳ್ತೀನಿ ಎಂದು ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೇಕಾದ್ರೆ ನನಗೆ ಪೊರಕೆಯಲ್ಲಿ ಹೊಡೀರಿ, ಹೊಡೆಸಿಕೊಳ್ತೀನಿ, ಅಧಿಕಾರಿಗಳಿಗೆ ಹೊಡೆಯುವುದು ಬೇಡ. ಬಿಡದಿಯಲ್ಲಿ ನಡೆದ ಘಟನೆ ಮನಸ್ಸಿಗೆ ನೋವಾಗಿದೆ. ರಾಜಕೀಯ ಪ್ರೇರಿತ ಕುಮ್ಮಕ್ಕಿನಿಂದ ಅಧಿಕಾರಿಗಳಿಗೆ ತೊಂದರೆ ನೀಡಿದ್ದಾರೆ. ರೈತರನ್ನು ತಪ್ಪು ದಾರಿಗೆ ಎಳೆಯುವ ಸಂಚು ನಡೆಯುತ್ತಿದೆ. ಎಲ್ಲರ ಮನಸ್ಸಿಗೆ ನೋವುಂಟು ಮಾಡುವುದು ನನಗೆ ಇಷ್ಟವಿಲ್ಲ ಎಂದು ಸಿಎಂ ಹೇಳಿದ್ದಾರೆ.
ಈ ಯೋಜನೆ ನನ್ನ ಕನಸಿನ ಪ್ರಾಜೆಕ್ಟ್ ಅಲ್ಲ. ಇದು ನನ್ನ ಕನಸಿನ ಯೋಜನೆ ಎಂದು ಯಾವತ್ತೂ ಹೇಳಿಲ್ಲ. ನಾನು ಅದಕ್ಕೆ ಶಂಕುಸ್ಥಾಪನೆ ಸಹ ನೆರವೇರಿಸಿಲ್ಲ. ಈ ಯೋಜನೆಯ ಪಿತಾಮಹ ಆಗಲು ಸಹ ನನಗೆ ಇಷ್ಟವಿಲ್ಲ. ಹಿರಿಯರು ನೀಡಿದ ಮಾರ್ಗದರ್ಶನದ ಪ್ರಕಾರ ಮುನ್ನಡೆಯುವ ಕೆಲಸ ಮಾತ್ರ ಮಾಡುತ್ತಿದ್ದೇನೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಸಿಎಂ ಡಿಕೆಶಿ ಕುಟುಕಿದ್ದಾರೆ.
ಹಿಂದಿನ ಯೋಜನೆಯನ್ನು ಮುಂದುವರೆಸಿಕೊಂಡು ಹೋಗಿ ಎಂದು ಹೇಳಿದ್ದೇನೆ. ನಾನು ಹುಟ್ಟು ರೈತನ ಮಗ. ರೈತನ ಶ್ರಮದ ಬಗ್ಗೆ ನನಗೆ ವೈಯಕ್ತಿಕ ಅನುಭವಿದೆ. ನಾನು ಸಿಎಂ ಅಗಿರುವುದು ಕೆಲವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಅವರಿಗೆ ನಿದ್ರೆ ಬರುತ್ತಿಲ್ಲ. ನನ್ನನ್ನು ಜೈಲಿಗೆ ಕಳುಹಿಸಲು ಎಷ್ಟು ವರ್ಷದಿಂದ ಸಂಚು ಮಾಡುತ್ತಿದ್ದಾರೆ ಎಂದು ಎಲ್ಲರಿಗೂ ತಿಳಿದಿದೆ ಎಂದು ಹೇಳಿದ್ದಾರೆ.
ಡಿಕೆಶಿ ಜೈಲಿಗೆ ಹೋಗುವ ದಿನ ಬಂದೇ ಬರುತ್ತದೆ ಎಂದು ಕುಮಾರಣ್ಣ ಅವರು ಇಂದೂ ಹೇಳಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಜೈಲೇನು ನನಗೆ ಹೊಸದಲ್ಲ, ನಾನು ಜೈಲಿಗೆ ಹೋಗಲು ಹೇಗೆ ಸಂಚು ಮಾಡಿದ್ರು ಎಂದು ಇನ್ನೊಂದು ದಿನ ಹೇಳ್ತೇನೆ. ಡಿಕೆಶಿ ಜೈಲಿಗೆ ಹೋಗುವ ಸಮಯ ಹೆಚ್ಚುದಿನ ಇಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ನಾನು ಹೆಚ್ಚು ಮಾತಾಡಲ್ಲ, ವಿಧಿ ಇಲ್ಲ. ಈ ವಯಸ್ಸಲ್ಲಿ ಗಾಂಧಿ ಪ್ರತಿಮೆ ಮುಂದೆ ಬಂದು ಅವರ ಮನಸ್ಸು ನೋಯಿಸೋ ಮನಸ್ಸು ನನಗಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ರೀನಾ, ಕಿರಣ್, ಗೌರಿ ಯಾರೂ ಮತಾಂತರಗೊಂಡಿಲ್ಲ – ‘ಲವ್ ಜಿಹಾದ್’ ಆರೋಪ ತಿರಸ್ಕರಿಸಿದ ಅಮೀರ್ ಖಾನ್!



















