ಲಕ್ನೋ : ಉತ್ತರ ಪ್ರದೇಶದ ಮಹೋಬಾದಲ್ಲಿ ಕ್ಷುಲ್ಲಕ ವಿಚಾರಕ್ಕೆ ನಡೆದ ಜಗಳವೊಂದು ವಿಕೋಪಕ್ಕೆ ತಿರುಗಿ, ಪೆಟ್ರೋಲ್ ಬಂಕ್ ಎದುರೇ ಯುವಕನೊಬ್ಬನ ಮೇಲೆ ಕೊಡಲಿಯಿಂದ ಅತ್ಯಂತ ಭೀಕರವಾಗಿ ದಾಳಿ ನಡೆದಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.
ಕಾನ್ಪುರ-ಸಾಗರ್ ಹೆದ್ದಾರಿಯಲ್ಲಿರುವ ಚಂದೇಲ್ ಪೆಟ್ರೋಲ್ ಬಂಕ್ ಬಳಿ ನಡೆದ ಈ ಘಟನೆಯಲ್ಲಿ 28 ವರ್ಷದ ಜೈವೇಂದ್ರ ಸಿಂಗ್ ಅಲಿಯಾಸ್ ವಿಕ್ಕಿ ಎಂಬ ಯುವಕನ ಎರಡೂ ಕೈಗಳು ಮಣಿಕಟ್ಟಿನ ಭಾಗದಿಂದ ಸಂಪೂರ್ಣವಾಗಿ ಕತ್ತರಿಸಿ ಹೋಗಿದ್ದು, ಸದ್ಯ ಆತನ ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ.
ಇಂಧನ ತುಂಬಿಸುವಾಗ ಶುರುವಾದ ಜಗಳ
ಸಂತ್ರಸ್ತ ಯುವಕ ವಿಕ್ಕಿ ಮಂಗಳವಾರ ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಪೆಟ್ರೋಲ್ ಬಂಕ್‌ಗೆ ಇಂಧನ ತುಂಬಿಸಲು ಹೋಗಿದ್ದಾಗ ಈ ದುರಂತ ಸಂಭವಿಸಿದೆ. ಅಲ್ಲಿಗೆ ಬಂದ ಅಪರಿಚಿತರೊಂದಿಗೆ ಇಂಧನ ತುಂಬಿಸುವ ವಿಷಯದಲ್ಲಿ ಸಣ್ಣ ಮಾತಿನ ಚಕಮಕಿ ನಡೆದಿದ್ದು, ಅದು ತಕ್ಷಣವೇ ದೊಡ್ಡ ಜಗಳವಾಗಿ ಮಾರ್ಪಟ್ಟಿದೆ. ತೀವ್ರ ಆಕ್ರೋಶಗೊಂಡ ಆರೋಪಿಗಳು ತಮ್ಮ ಬಳಿಯಿದ್ದ ತೀಕ್ಷ್ಣವಾದ ಕೊಡಲಿಯಿಂದ ವಿಕ್ಕಿ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಹಿಂದಿನ ಯಾವುದೇ ಹಗೆತನವಿಲ್ಲದಿದ್ದರೂ ಕೇವಲ ಕ್ಷಣಿಕ ಕೋಪಕ್ಕೆ ಈ ಭೀಕರ ಕೃತ್ಯ ಎಸಗಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗನನ್ನು ಕಂಡು ತಾಯಿಯ ಆಕ್ರಂದನ
ಕೊಡಲಿ ಏಟಿನ ತೀವ್ರತೆಗೆ ವಿಕ್ಕಿಯ ಎರಡೂ ಕೈಗಳು ಕತ್ತರಿಸಿ ಬಿದ್ದಿರುವುದಲ್ಲದೆ, ಆತನ ಕಾಲು ಮತ್ತು ತಲೆಗೂ ಆಳವಾದ ಗಾಯಗಳಾಗಿದ್ದವು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಕುಟುಂಬಸ್ಥರು ವಿಕ್ಕಿಯ ಸ್ಥಿತಿಯನ್ನು ಕಂಡು ದಿಗ್ಭ್ರಮೆಗೊಂಡಿದ್ದಾರೆ. ತೀವ್ರ ಆಘಾತಕ್ಕೊಳಗಾದ ಆತನ ತಾಯಿ, ಮಗನ ದೇಹದಿಂದ ರಕ್ತ ಸೋರುವುದನ್ನು ತಡೆಯಲು ಕತ್ತರಿಸಿದ ಕೈಗಳನ್ನು ಮತ್ತು ತಲೆಯನ್ನು ಬಟ್ಟೆಯಿಂದ ಕಟ್ಟಿ ರಕ್ಷಿಸಲು ಯತ್ನಿಸಿದ ದೃಶ್ಯ ಮನಕಲಕುವಂತಿತ್ತು. ತಕ್ಷಣವೇ ಪೊಲೀಸರು ಹಾಗೂ ಸ್ಥಳೀಯರು ಸೇರಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಯುವಕನ ಸ್ಥಿತಿ ತೀರಾ ಗಂಭೀರವಾಗಿದ್ದು, ತಲೆ ಮತ್ತು ಕಾಲುಗಳಿಗೆ ತೀವ್ರವಾದ ಪೆಟ್ಟು ಬಿದ್ದಿರುವುದರಿಂದ ಪ್ರಾಥಮಿಕ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಜಿಲ್ಲಾ ಆಸ್ಪತ್ರೆಯ ವೈದ್ಯರಾದ ಡಾ. ಶಿಶುಪಾಲ್ ತಿಳಿಸಿದ್ದಾರೆ. ಈ ಘಟನೆಯ ಹಿಂದೆ ಸ್ಥಳೀಯ ರಾಜಕಾರಣಿಯೊಬ್ಬರ ಕೈವಾಡವಿದೆ ಎಂದು ಗಾಯಾಳುವಿನ ಕುಟುಂಬದವರು ಆರೋಪಿಸಿದ್ದಾರೆ. ಸದ್ಯ ಪೊಲೀಸರು ಪೆಟ್ರೋಲ್ ಬಂಕ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಓರ್ವ ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿ : 8.5 ಕೆಜಿ ತೂಕ ಇಳಿಕೆ, 2 ದಿನದಲ್ಲಿ ಜೀವಕ್ಕೇ ಕುತ್ತು : ವಾಂಗ್ಚುಕ್‌ಗೆ ಬಲವಂತದ ಆಹಾರ ನೀಡಲು ಕೋರಿ ಹೈಕೋರ್ಟ್‌ಗೆ ಅರ್ಜಿ!


















