ಬೆಂಗಳೂರು : ಮೈಸೂರು ರಸ್ತೆಯ ಬಿಡಿಎ ಅಪಾರ್ಟ್‌ಮೆಂಟ್ ಮುಂಭಾಗ ಎರಡು ಬೈಕ್‌ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಬೈಕ್ ಸವಾರ ಮೃತಪಟ್ಟಿದ್ದು, ಯುವತಿಯೊಬ್ಬಳು ಗಂಭೀರವಾಗಿ ಗಾಯಗೊಂಡಿದ್ದಾಳೆ.
ನಿನ್ನೆ ರಾತ್ರಿ ಸುಮಾರು 8.30ಕ್ಕೆ ಈ ದುರ್ಘಟನೆ ನಡೆದಿದೆ. ಮೃತರನ್ನು ವೆಂಕಟೇಶ್ (27) ಎಂದು ಗುರುತಿಸಲಾಗಿದ್ದು, ಚಂದನ (21) ಎಂಬ ಯುವತಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಾರ್ಡ್‌ವೇರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವೆಂಕಟೇಶ್ ಅವರು ಹಿಂಬದಿಯಿಂದ ಬೈಕ್‌ನಲ್ಲಿ ಬರುತ್ತಿದ್ದ ವೇಳೆ, ಮುಂದೆ ತೆರಳುತ್ತಿದ್ದ ಚಂದನ ಅವರು ಇದ್ದಕ್ಕಿದ್ದಂತೆ ಬೈಕ್‌ನ್ನು ಎಡಭಾಗಕ್ಕೆ ತಿರುಗಿಸಿದ್ದಾರೆ ಎನ್ನಲಾಗಿದೆ. ಇದರಿಂದ ವೆಂಕಟೇಶ್ ಅವರ ಬೈಕ್ ಯುವತಿಯ ಬೈಕ್‌ಗೆ ಡಿಕ್ಕಿ ಹೊಡೆದಿದೆ.
ಅಪಘಾತದ ವೇಳೆ ವೆಂಕಟೇಶ್ ಅವರು ಹೆಲ್ಮೆಟ್ ಧರಿಸಿರಲಿಲ್ಲ. ಡಿಕ್ಕಿಯ ಪರಿಣಾಮ ತಲೆಗೆ ಗಂಭೀರ ಗಾಯವಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡ ಚಂದನ ಅವರಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಕೆಂಗೇರಿ ಸಂಚಾರ ಪೊಲೀಸ್ ಠಾಣೆನಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಆಂಬ್ಯುಲೆನ್ಸ್‌ಗೂ ದಾರಿ ಬಿಡದೆ ವ್ಹೀಲಿಂಗ್ ಮಾಡ್ತಾ ಪುಂಡರ ಹುಚ್ಚಾಟ!



















