ಬೆಂಗಳೂರು:ನಮ್ಮ ಮೆಟ್ರೊ ದೇಶದಲ್ಲೇ ಎರಡನೇ ಸ್ಥಾನಕ್ಕೇರಲು ಸಜ್ಜಾಗಿದೆ. ಗುಲಾಬಿ ಮಾರ್ಗದ ಮೆಟ್ರೊ ಉದ್ಘಾಟನೆಗೆ ಪ್ರಧಾನಿ ಮೋದಿ ಬರುವ ನಿರೀಕ್ಷೆ ಇದೆ. ಇದರಿಂದ ಬೆಂಗಳೂರು ಮೆಟ್ರೊ ಜಾಲ 103.6 ಕಿ.ಮೀ.ಗೆ ವಿಸ್ತರಣೆಯಾಗಲಿದೆ. ಬೆಂಗಳೂರು ಮೆಟ್ರೊ ಮುಂಬೈಯನ್ನು ಹಿಂದಿಕ್ಕಿ ದೇಶದಲ್ಲೇ 2ನೇ ಸ್ಥಾನಕ್ಕೇರಲಿದೆ. ದೆಹಲಿ-ಎನ್ಸಿಆರ್ 416 ಕಿ.ಮೀ. ಮೆಟ್ರೊ ಜಾಲದೊಂದಿಗೆ ಮೊದಲ ಸ್ಥಾನದಲ್ಲಿದೆ. ಮುಂಬೈ-ನವಿ ಮುಂಬೈ ಮೆಟ್ರೊ ಜಾಲ 101.4 ಕಿ.ಮೀ. ಜಾಲ ಹೊಂದಿದೆ.
ಸದ್ಯ 96.10 ಕಿ.ಮೀ. ಮೆಟ್ರೊ ಜಾಲದೊಂದಿಗೆ ಬೆಂಗಳೂರಿಗೆ 3ನೇ ಸ್ಥಾನವಿದೆ. ಗುಲಾಬಿ ಮಾರ್ಗದ 7.5 ಕಿ.ಮೀ. ಎತ್ತರಿಸಿದ ವಿಭಾಗ ಸದ್ಯ ಸಂಚಾರಕ್ಕೆ ಸಜ್ಜಾಗಿದೆ. ಗುಲಾಬಿ ಮಾರ್ಗ ಉದ್ಘಾಟನೆಗೆ ಪ್ರಧಾನಿ ಕಚೇರಿಗೆ ಸಿಎಂ ಪತ್ರ ಬರೆದಿದ್ದಾರೆ. ಮೆಟ್ರೊ ಮಾರ್ಗದ ಅಂತಿಮ ಸುರಕ್ಷತಾ ಪರಿಶೀಲನೆಯಲ್ಲಿ 36 ನ್ಯೂನತೆಗಳು ಪತ್ತೆಯಾಗಿದ್ದವು. ನ್ಯೂನತೆ ಸರಿಪಡಿಸಿ ಸಿಎಂಆರ್ಎಸ್ಗೆ ಬಿಎಂಆರ್ಸಿಎಲ್ ಪಾಲನಾ ವರದಿ ಸಲ್ಲಿಸಿದೆ.



















