ಬೆಂಗಳೂರು : ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿರುವ ಪ್ರಮುಖ ನಿಲ್ದಾಣಗಳಲ್ಲಿ ಒಂದಾದ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣವನ್ನು (ಏ.4) ಸೋಮವಾರ ಬೆಳಿಗ್ಗೆ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ವಿದ್ಯುತ್ ವ್ಯತ್ಯಯದಿಂದಾಗಿ ಮೆಟ್ರೋ ನಿಲ್ದಾಣದ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಕಾರಣ, ರೈಲುಗಳು ಸದ್ಯಕ್ಕೆ ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ನಿಲ್ಲುವುದಿಲ್ಲ. ಹೀಗಾಗಿ, ಪ್ರಯಾಣಿಕರು ತಮ್ಮ ಪ್ರಯಾಣವನ್ನು ಅದಕ್ಕೆ ತಕ್ಕಂತೆ ಯೋಜಿಸಿಕೊಳ್ಳಬೇಕು ಎಂದು ಬಿಎಂಆರ್‌ಸಿಎಲ್ ತನ್ನ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯ ಮೂಲಕ ಮಾಹಿತಿ ನೀಡಿದೆ. ವಿದ್ಯುತ್ ಪೂರೈಕೆ ಸಹಜ ಸ್ಥಿತಿಗೆ ಬಂದ ತಕ್ಷಣ ನಿಲ್ದಾಣದ ಕಾರ್ಯಾಚರಣೆ ಪುನರಾರಂಭವಾಗಲಿದೆ ಎಂದು ತಿಳಿಸಲಾಗಿದೆ.
ವಾರದ ಮೊದಲ ದಿನವೇ ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ರೈಲು ನಿಲುಗಡೆ ಸ್ಥಗಿತಗೊಂಡಿರುವುದು ಕಚೇರಿಗೆ ತೆರಳುವ ಉದ್ಯೋಗಿಗಳು ಮತ್ತು ಸಾರ್ವಜನಿಕರಿಗೆ ಸ್ವಲ್ಪ ಮಟ್ಟಿನ ಅನಾನುಕೂಲತೆಯನ್ನುಂಟು ಮಾಡಿದೆ. ಈ ಅನಿವಾರ್ಯ ತೊಂದರೆಗೆ ಬಿಎಂಆರ್‌ಸಿಎಲ್ ವಿಷಾದ ವ್ಯಕ್ತಪಡಿಸಿದೆ.
ಇದನ್ನೂ ಓದಿ : ಜೀವರಾಜ್ ಈಗ ಶೃಂಗೇರಿಗೆ ನೂತನ MLA.. ‘ಶಾಸಕ’ ಪ್ರಮಾಣಪತ್ರ ಪಡೆದ ಬಿಜೆಪಿ ನಾಯಕ!



















