ಬೆಂಗಳೂರು : ಮಂಡ್ಯ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಕೆನೆರಹಿತ ಹಾಲಿನ ಪುಡಿ ದಾಸ್ತಾನಿನಲ್ಲಿ 54.925 ಮೆಟ್ರಿಕ್ ಟನ್ ಕೊರತೆ, 60 ಸಾವಿರ ಕೆಜಿ ಹಾಲಿನ ಪುಡಿ ಸಾಗಣೆ ದಾಖಲೆಗಳಲ್ಲಿ ವ್ಯತ್ಯಾಸ ಹಾಗೂ ಕಲಬೆರಕೆ ಆರೋಪ ಕೇಳಿಬಂದಿರುವ ಪ್ರಕರಣ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ಪ್ರಕರಣವನ್ನು ಸ್ಥಳೀಯ ಪೊಲೀಸ್ ಠಾಣೆಯ ತನಿಖೆಗೆ ಮಾತ್ರ ಸೀಮಿತಗೊಳಿಸದೆ, ವಿಶೇಷ ತನಿಖಾ ತಂಡ ರಚಿಸಿ ಸಂಪೂರ್ಣ ತನಿಖೆ ನಡೆಸುವಂತೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ. ತನಿಖೆಯಲ್ಲಿ ಯಾವುದೇ ರಾಜಕೀಯ ಅಥವಾ ಆಡಳಿತಾತ್ಮಕ ಪ್ರಭಾವಕ್ಕೆ ಅವಕಾಶ ನೀಡಬಾರದು ಎಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಮದ್ದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿರುವ ಅಂಶಗಳನ್ನು ಉಲ್ಲೇಖಿಸಿರುವ ದಿನೇಶ್ ಕಲ್ಲಹಳ್ಳಿ, ಪ್ರಕರಣ ಕೇವಲ ಇಬ್ಬರು ಅಧಿಕಾರಿಗಳ ಕರ್ತವ್ಯಲೋಪಕ್ಕೆ ಸೀಮಿತವಾಗಿಲ್ಲ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಅಥವಾ ಸಹಕಾರ ಸಂಸ್ಥೆಗೆ ಸೇರಿದ ಪ್ರಮುಖ ವಾಣಿಜ್ಯ ದಾಸ್ತಾನು, ಗೋದಾಮಿನಿಂದ ಹಾಲಿನ ಪುಡಿ ಹೊರ ಸಾಗಿರುವ ವಿಧಾನ, ಇನ್‌ವಾಯ್ಸ್, ವಾಹನಗಳ ಬಳಕೆ, ಸ್ಟಾಕ್ ದಾಖಲೆ ನಿರ್ವಹಣೆ ಹಾಗೂ ಗುಣಮಟ್ಟ ನಿಯಂತ್ರಣ ವ್ಯವಸ್ಥೆಯಲ್ಲಿನ ವೈಫಲ್ಯ ಸೇರಿದಂತೆ ಹಲವು ಅಂಶಗಳ ಬಗ್ಗೆ ಸಮಗ್ರ ತನಿಖೆ ಅಗತ್ಯವಿದೆ ಎಂದು ಹೇಳಿದ್ದಾರೆ.
ಎಫ್‌ಐಆರ್‌ನಲ್ಲಿ M/s Master Insulation INC. ಗೋದಾಮು-1ರಲ್ಲಿ 2026ರ ಮಾರ್ಚ್ 31ರ ಅಂತ್ಯಕ್ಕೆ 54.925 ಮೆಟ್ರಿಕ್ ಟನ್ ಹಾಲಿನ ಪುಡಿ ಕೊರತೆಯಾಗಿರುವುದಾಗಿ ಉಲ್ಲೇಖಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೆ, ಗೋದಾಮಿನಿಂದ 60,000 ಕೆಜಿ ಹಾಲಿನ ಪುಡಿಯನ್ನು ಹರಿಯಾಣದ Ganga Foodsಗೆ ಕಳುಹಿಸಲಾಗಿದ್ದರೂ, ಸಂಬಂಧಿತ ಸ್ಟಾಕ್ ಪುಸ್ತಕದಲ್ಲಿ ಅದನ್ನು ಸರಿಯಾಗಿ ದಾಖಲಿಸಿಲ್ಲ ಎಂಬ ಆರೋಪವೂ ದಾಖಲಾಗಿದೆ. ಈ ಸಾಗಣೆಗೆ ಸಂಬಂಧಿಸಿದ ಇನ್‌ವಾಯ್ಸ್, ಖರೀದಿ ಆದೇಶ ಹಾಗೂ ವಾಹನಗಳ ವಿವರಗಳನ್ನೂ ತನಿಖೆಯ ವ್ಯಾಪ್ತಿಗೆ ತರಬೇಕು ಎಂದು ದಿನೇಶ್ ಕಲ್ಲಹಳ್ಳಿ ಆಗ್ರಹಿಸಿದ್ದಾರೆ.
ಇದರ ಜೊತೆಗೆ ಹಾಲಿನ ಪುಡಿಯ ಮಾದರಿಗಳ ಪರೀಕ್ಷೆಯಲ್ಲೂ ಗಂಭೀರ ಅಂಶಗಳು ಪತ್ತೆಯಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಗೋದಾಮಿನಿಂದ ಒಕ್ಕೂಟಕ್ಕೆ ವರ್ಗಾಯಿಸಲಾದ ಹಾಲಿನ ಪುಡಿಯ ಮಾದರಿಗಳಲ್ಲಿ ಕಲಬೆರಕೆಯ ಅನುಮಾನ ವ್ಯಕ್ತವಾಗಿದ್ದು, 129 ಬ್ಯಾಗ್‌ಗಳು ಬಳಸಲು ಯೋಗ್ಯವಲ್ಲ ಎಂದು ಪರೀಕ್ಷೆಯಲ್ಲಿ ಕಂಡುಬಂದಿದೆ. ನಂತರ ಒಟ್ಟು 144 ಬ್ಯಾಗ್‌ಗಳ ಕುರಿತು ಗಂಭೀರ ಗುಣಮಟ್ಟದ ಸಮಸ್ಯೆ ಉಲ್ಲೇಖಿಸಲಾಗಿದೆ. ಮಂಡ್ಯ FSSAI ಅಧಿಕಾರಿಗಳ ವರದಿಯಲ್ಲಿಯೂ ಗೋದಾಮಿನಲ್ಲಿ ಉಳಿದಿದ್ದ ಹಾಲಿನ ಪುಡಿಯ ಬಹುಪಾಲು ಕಲಬೆರಕೆಯಾಗಿರುವ ಕುರಿತು ವರದಿ ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹೀಗಾಗಿ 54.925 ಮೆಟ್ರಿಕ್ ಟನ್ ದಾಸ್ತಾನು ಕೊರತೆ ಹೇಗೆ ಉಂಟಾಯಿತು, 60 ಸಾವಿರ ಕೆಜಿ ಹಾಲಿನ ಪುಡಿಯನ್ನು ಯಾರ ನಿರ್ದೇಶನದ ಮೇರೆಗೆ ಹೊರಕ್ಕೆ ಕಳುಹಿಸಲಾಯಿತು, ಇನ್‌ವಾಯ್ಸ್ ಮತ್ತು ವಾಹನಗಳನ್ನು ಯಾರು ವ್ಯವಸ್ಥೆ ಮಾಡಿದರು, ನೈಜ ಸಾಗಣೆಯನ್ನು ಸ್ಟಾಕ್ ಪುಸ್ತಕದಲ್ಲಿ ಏಕೆ ದಾಖಲಿಸಲಾಗಲಿಲ್ಲ ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯಬೇಕಿದೆ ಎಂದು ದಿನೇಶ್ ಕಲ್ಲಹಳ್ಳಿ ಹೇಳಿದ್ದಾರೆ. ಅದೇ ರೀತಿ ಹಾಲಿನ ಪುಡಿಯಲ್ಲಿ ಕಲಬೆರಕೆ ಯಾವ ಹಂತದಲ್ಲಿ ನಡೆದಿದೆ, ಯಾರ ನಿಯಂತ್ರಣದಲ್ಲಿದ್ದಾಗ ನಡೆದಿದೆ ಹಾಗೂ ಗೋದಾಮು ನಿರ್ವಾಹಕರು, ಅಧಿಕಾರಿಗಳು, ಖರೀದಿದಾರರು ಅಥವಾ ಇತರ ಮಧ್ಯವರ್ತಿಗಳ ಪಾತ್ರವಿದೆಯೇ ಎಂಬುದನ್ನೂ ತನಿಖೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಇಷ್ಟೊಂದು ಪ್ರಮಾಣದ ದಾಸ್ತಾನು ಕೊರತೆ, ಹಾಲಿನ ಪುಡಿ ಸಾಗಣೆ ಮತ್ತು ಗುಣಮಟ್ಟದ ಸಮಸ್ಯೆಗಳು ನಡೆದಿದ್ದರೂ ಮಂಡ್ಯ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟ ಉನ್ನತ ಅಧಿಕಾರಿಗಳ ಗಮನಕ್ಕೆ ಇದು ಬಾರದಿರುವುದು ಹೇಗೆ ಎಂಬುದನ್ನೂ ತನಿಖೆ ಮಾಡಬೇಕಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಅಧ್ಯಕ್ಷರು, ಸದಸ್ಯರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಕರ್ತವ್ಯ, ಮೇಲ್ವಿಚಾರಣೆ ಮತ್ತು ಘಟನೆಗಳ ಕುರಿತು ಅವರಿಗೆ ಪೂರ್ವ ಮಾಹಿತಿ ಇತ್ತೇ ಎಂಬುದನ್ನು ಸಭಾ ನಡಾವಳಿ, ಕಡತಗಳು, ವರದಿಗಳು ಹಾಗೂ ಇತರ ದಾಖಲೆಗಳ ಆಧಾರದಲ್ಲಿ ಪರಿಶೀಲಿಸಬೇಕು ಎಂದು ಆಗ್ರಹಿಸಲಾಗಿದೆ.
ತನಿಖೆ ಮುಂದುವರಿದಂತೆ ಇತರ ಪ್ರಭಾವಿ ವ್ಯಕ್ತಿಗಳು, ಮಧ್ಯವರ್ತಿಗಳು ಅಥವಾ ರಾಜಕೀಯ ಸಂಪರ್ಕ ಹೊಂದಿರುವ ವ್ಯಕ್ತಿಗಳ ಪಾತ್ರ ಹೊರಬರುವ ಸಾಧ್ಯತೆಯನ್ನೂ ಪರಿಶೀಲಿಸಬೇಕು ಎಂದು ದಿನೇಶ್ ಕಲ್ಲಹಳ್ಳಿ ಮನವಿಯಲ್ಲಿ ತಿಳಿಸಿದ್ದಾರೆ. ಯಾರಾದರೂ ತನಿಖೆಯ ಮೇಲೆ ಪ್ರಭಾವ ಬೀರುವ ಅಥವಾ ಸಾಕ್ಷ್ಯ ಮತ್ತು ದಾಖಲೆಗಳನ್ನು ಬದಲಾಯಿಸುವ ಸಾಧ್ಯತೆ ಇದೆಯೇ ಎಂಬುದನ್ನೂ ತನಿಖಾ ಸಂಸ್ಥೆ ಪರಿಶೀಲಿಸಬೇಕು ಎಂದು ಹೇಳಿದ್ದಾರೆ. ಹೀಗಾಗಿ ಪ್ರಕರಣದ ವ್ಯಾಪ್ತಿ, ಸಹಕಾರ ಸಂಸ್ಥೆಯ ಆಸ್ತಿಗೆ ಸಂಬಂಧಿಸಿದ ಹಣಕಾಸು ಪರಿಣಾಮ, ದಾಖಲೆಗಳಲ್ಲಿನ ವ್ಯತ್ಯಾಸ ಮತ್ತು ಆಹಾರ ಪದಾರ್ಥದ ಕಲಬೆರಕೆ ಆರೋಪಗಳನ್ನು ಪರಿಗಣಿಸಿ, ಪ್ರಸ್ತುತ ಸ್ಥಳೀಯ ಪೊಲೀಸ್ ತನಿಖೆಯ ಜೊತೆಗೆ ಸ್ವತಂತ್ರ ಹಾಗೂ ಸಮಗ್ರ SIT ತನಿಖೆ ನಡೆಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದಿನೇಶ್ ಕಲ್ಲಹಳ್ಳಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಜಿಲ್ಲಾ ನಗರಾಭಿವೃದ್ಧಿ ಕೋಶದಲ್ಲಿ 48 ಪೌರ ಕಾರ್ಮಿಕರ ನೇಮಕಾತಿ : ಹೀಗೆ ಅರ್ಜಿ ಸಲ್ಲಿಸಿ



















