ಮುಂಬೈ: ಭಾರತ ಮತ್ತು ಇಸ್ರೇಲ್ ನಡುವಿನ ಸಾಂಸ್ಕೃತಿಕ ಬಾಂಧವ್ಯ ಮತ್ತೊಂದು ಐತಿಹಾಸಿಕ ಮೈಲಿಗಲ್ಲಿಗೆ ಸಾಕ್ಷಿಯಾಗುತ್ತಿದ್ದು, ಮರಾಠಾ ಸಾಮ್ರಾಜ್ಯದ ಸಾರ್ವಭೌಮ ಛತ್ರಪತಿ ಶಿವಾಜಿ ಮಹಾರಾಜರ ಭವ್ಯ ಪ್ರತಿಮೆಯೊಂದನ್ನು ಇಸ್ರೇಲ್‌ನಲ್ಲಿ ಸ್ಥಾಪಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಮುಂಬೈನಲ್ಲಿರುವ ಇಸ್ರೇಲ್‌ನ ಕಾನ್ಸುಲ್ ಜನರಲ್ ಯಾನಿವ್ ರೇವಾಚ್ ಅವರು ಇತ್ತೀಚೆಗೆ ನಡೆದ ‘ಶಿವ ರಾಜ್ಯಾಭಿಷೇಕ ದಿನ’ದ ಸಂದರ್ಭದಲ್ಲಿ ಈ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ. ಇಸ್ರೇಲ್‌ನ ಪ್ರಮುಖ ನಗರವೊಂದರಲ್ಲಿ ಈ ಸ್ಮಾರಕವನ್ನು ಪ್ರತಿಷ್ಠಾಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಯೋಜನೆಯು ಕೇವಲ ಒಂದು ಸಾಮಾನ್ಯ ಪ್ರತಿಮೆ ಸ್ಥಾಪನೆಯಲ್ಲ, ಬದಲಿಗೆ ಭಾರತ ಮತ್ತು ಇಸ್ರೇಲ್ ದೇಶಗಳ ನಾಗರಿಕರ ನಡುವೆ ದೀರ್ಘಕಾಲೀನ ಸಾಂಸ್ಕೃತಿಕ ಸಂಬಂಧವನ್ನು ಬೆಸೆಯುವ ಮಹತ್ವಾಕಾಂಕ್ಷಿ ಸೇತುವೆಯಾಗಿದೆ ಎಂದು ಯಾನಿವ್ ರೇವಾಚ್ ಬಣ್ಣಿಸಿದ್ದಾರೆ. ಭಾರತದಲ್ಲಿ ಛತ್ರಪತಿ ಶಿವಾಜಿ ಮಹಾರಾಜರಿಗೆ ಇರುವ ಅಪಾರ ಗೌರವ ಮತ್ತು ಪ್ರಭಾವವನ್ನು ನಾವು ಚೆನ್ನಾಗಿ ಬಲ್ಲೆವು ಎಂದಿರುವ ಅವರು, ಭಾರತೀಯರು ಇಸ್ರೇಲ್‌ನ ರಾಷ್ಟ್ರೀಯ ನಾಯಕರನ್ನು ಗೌರವಿಸುವಂತೆಯೇ, ಇಸ್ರೇಲ್‌ನ ಜನರಿಗೂ ಶಿವಾಜಿ ಮಹಾರಾಜರ ವೀರಗಾಥೆ ಹಾಗೂ ಸಾಧನೆಗಳ ಬಗ್ಗೆ ಅರಿವು ಮೂಡಿಸುವುದು ಈ ಉಪಕ್ರಮದ ಮುಖ್ಯ ಉದ್ದೇಶ ಎಂದು ಹೇಳಿದ್ದಾರೆ. ಮಹಾರಾಷ್ಟ್ರ ಮತ್ತು ಇಸ್ರೇಲ್‌ನಲ್ಲಿ ವಾಸಿಸುತ್ತಿರುವ ಭಾರತೀಯ ಯಹೂದಿ ಸಮುದಾಯದ ನಡುವಿನ ಐತಿಹಾಸಿಕ ನಂಟನ್ನು ನೆನೆಯುತ್ತಾ, ಈ ಸ್ಮಾರಕವು ಉಭಯ ದೇಶಗಳ ಸ್ನೇಹದ ಸಂಕೇತವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರ ಸರ್ಕಾರದಿಂದ ತಾಂತ್ರಿಕ, ಕಲಾತ್ಮಕ ಸಹಕಾರ
ಶಿವಾಜಿ ಮಹಾರಾಜರ ಇತಿಹಾಸ ಮತ್ತು ಘನತೆಗೆ ತಕ್ಕಂತೆ ಈ ಸ್ಮಾರಕವನ್ನು ಅತ್ಯಂತ ಭವ್ಯವಾಗಿ ರೂಪಿಸಲು ಇಸ್ರೇಲ್ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಐತಿಹಾಸಿಕ ಉಲ್ಲೇಖಗಳು, ಕಲಾತ್ಮಕ ವಿನ್ಯಾಸ ಹಾಗೂ ರಚನೆಯ ಕುರಿತು ಸಹಕಾರ ನೀಡುವಂತೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಲ್ಲಿ ಇಸ್ರೇಲ್ ರಾಜತಾಂತ್ರಿಕರು ವಿನಂತಿಸಿದ್ದರು. ಇಸ್ರೇಲ್‌ನ ಈ ಪ್ರಸ್ತಾಪಕ್ಕೆ ಮುಖ್ಯಮಂತ್ರಿಗಳು ತಕ್ಷಣವೇ ಒಪ್ಪಿಗೆ ಸೂಚಿಸಿದ್ದು, ಅಗತ್ಯವಿರುವ ಎಲ್ಲಾ ರೀತಿಯ ತಾಂತ್ರಿಕ ಮತ್ತು ಕಲಾತ್ಮಕ ಮಾರ್ಗದರ್ಶನವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಂತಸ
ಇಸ್ರೇಲ್ ಸರ್ಕಾರದ ಈ ನಿರ್ಧಾರವನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ (ಟ್ವಿಟರ್) ಮೂಲಕ ತಮ್ಮ ಸಂತಸ ಹಂಚಿಕೊಂಡಿರುವ ಅವರು, “ಇದು ಅತ್ಯಂತ ಹೆಮ್ಮೆಯ ಹಾಗೂ ಮಹತ್ವದ ಸುದ್ದಿಯಾಗಿದೆ. ಶಿವ ರಾಜ್ಯಾಭಿಷೇಕ ದಿನದ ಶುಭ ಸಂದರ್ಭದಲ್ಲಿ ಇಸ್ರೇಲ್ ಕಾನ್ಸುಲ್ ಜನರಲ್ ಯಾನಿವ್ ರೇವಾಚ್ ಅವರು ಮಾಡಿರುವ ಈ ಐತಿಹಾಸಿಕ ಪ್ರಕಟಣೆಗೆ ಮಹಾರಾಷ್ಟ್ರದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು. ಇಸ್ರೇಲ್‌ನಲ್ಲಿ ಶಿವಾಜಿ ಮಹಾರಾಜರ ಭವ್ಯ ಪ್ರತಿಮೆ ಸ್ಥಾಪಿಸುವ ಈ ಐತಿಹಾಸಿಕ ಕಾರ್ಯಕ್ಕೆ ಮಹಾರಾಷ್ಟ್ರ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ. ಜೈ ಭವಾನಿ, ಜೈ ಶಿವಾಜಿ!” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ಬೆಂಗಳೂರಲ್ಲಿ ರಾಶಿ ರಾಶಿ ಜಿಲೆಟಿನ್ ಕಡ್ಡಿಗಳಿದ್ದ ಬಾಕ್ಸ್‌ಗಳು ಪತ್ತೆ – ರಾಜಧಾನಿಯಲ್ಲಿ ಮತ್ತೆ ಆತಂಕ!



















