ಬೆಂಗಳೂರು : ಕ್ರಿಕೆಟ್ ಜಗತ್ತಿನ ಅತ್ಯಂತ ಪ್ರತಿಷ್ಠಿತ ಹಾಗೂ ಹಳೆಯ ಸೆಣಸಾಟವಾಗಿರುವ ‘ಆ್ಯಶಸ್’ ಸರಣಿಯ (Ashes Series) ಪಂದ್ಯವೊಂದನ್ನು ಭಾರತದಲ್ಲಿ ಆಯೋಜಿಸುವ ಕುರಿತು ಇತ್ತೀಚೆಗೆ ಭಾರಿ ಚರ್ಚೆಗಳು ನಡೆಯುತ್ತಿದ್ದವು. ಈ ಊಹಾಪೋಹಗಳಿಗೆ ಮೂಲ ಕಾರಣ ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆಯ (Cricket Australia – CA) ಮುಖ್ಯ ಕಾರ್ಯನಿರ್ವಾಹಕ (CEO) ಟಾಡ್ ಗ್ರೀನ್‌ಬರ್ಗ್ ಅವರು ಬಿಬಿಸಿಗೆ ನೀಡಿದ್ದ ಸಂದರ್ಶನವಾಗಿತ್ತು.
ಸಂದರ್ಶನದಲ್ಲಿ ಅವರು, ಭಾರತದ ನೆಲದಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯವನ್ನಾಡುವ ಸಾಧ್ಯತೆಗಳ ಬಗ್ಗೆ ಸುಳಿವು ನೀಡಿದ್ದರು. “ನಾವು ಎಲ್ಲಾ ಆಯ್ಕೆಗಳನ್ನು ಪರಿಗಣಿಸಲು ಮುಕ್ತರಾಗಿದ್ದೇವೆ” ಎಂಬ ಅವರ ಹೇಳಿಕೆಯು, ಕ್ರಿಕೆಟ್ ಆಸ್ಟ್ರೇಲಿಯಾ ಭವಿಷ್ಯದಲ್ಲಿ ಭಾರತದಲ್ಲಿ ಟೆಸ್ಟ್ ಪಂದ್ಯ ಆಡಲು ಉತ್ಸುಕವಾಗಿದೆ ಎಂಬ ಅರ್ಥವನ್ನು ಕಲ್ಪಿಸಿತ್ತು. ಆದರೆ, ಪ್ರಸ್ತುತ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಈ ಬದ್ಧವೈರಿಗಳ ಕಾಳಗ ಭಾರತದಲ್ಲಿ ನಡೆಯುವ ಯಾವುದೇ ಸಾಧ್ಯತೆಗಳು ಸದ್ಯಕ್ಕಿಲ್ಲ.
ಆ್ಯಶಸ್ ಆಯೋಜನೆಯ ಯೋಜನೆ ಇಲ್ಲ ಎಂದ ಆಸ್ಟ್ರೇಲಿಯನ್ ಮೀಡಿಯಾ
ಟಾಡ್ ಗ್ರೀನ್‌ಬರ್ಗ್ ಅವರ ಹೇಳಿಕೆಯು ಸುದ್ದಿ ಮಾಡುತ್ತಿದ್ದಂತೆಯೇ, ಮುಂಬರುವ ಬಿಗ್ ಬ್ಯಾಷ್ ಲೀಗ್‌ನ (BBL) ಉದ್ಘಾಟನಾ ಪಂದ್ಯವನ್ನು ಭಾರತದ ಚೆನ್ನೈನಲ್ಲಿ ಆಯೋಜಿಸಲು ಕ್ರಿಕೆಟ್ ಆಸ್ಟ್ರೇಲಿಯಾ ಸಿದ್ಧತೆ ನಡೆಸುತ್ತಿದೆ ಎಂಬ ಸುದ್ದಿಯೂ ಇದಕ್ಕೆ ಪುಷ್ಟಿ ನೀಡಿತ್ತು. ಕ್ರಿಕೆಟ್‌ನ ಜಾಗತಿಕ ಮಾರುಕಟ್ಟೆಯನ್ನು ವಿಸ್ತರಿಸುವ ಉದ್ದೇಶದಿಂದ ಆಸ್ಟ್ರೇಲಿಯಾ ಈ ಹೆಜ್ಜೆ ಇಡುತ್ತಿದೆ ಎನ್ನಲಾಗಿತ್ತು.
ಆದರೆ, ಆಸ್ಟ್ರೇಲಿಯಾದ ಸ್ಥಳೀಯ ಕ್ರೀಡಾ ವೆಬ್‌ಸೈಟ್ ಆದ ‘ಕೋಡ್ ಸ್ಪೋರ್ಟ್ಸ್’ (CODE Sports) ತನ್ನ ಇತ್ತೀಚಿನ ವರದಿಯಲ್ಲಿ ಈ ಎಲ್ಲಾ ಊಹಾಪೋಹಗಳನ್ನು ತಳ್ಳಿಹಾಕಿದೆ. ಸಿಇಒ ಗ್ರೀನ್‌ಬರ್ಗ್ ಅವರ ಹೇಳಿಕೆಯ ಹೊರತಾಗಿಯೂ, ಭಾರತದಲ್ಲಿ ಆ್ಯಶಸ್ ಟೆಸ್ಟ್ ಪಂದ್ಯವನ್ನು ಆಯೋಜಿಸುವ ಯಾವುದೇ ಅಧಿಕೃತ ಯೋಜನೆ ಕ್ರಿಕೆಟ್ ಆಸ್ಟ್ರೇಲಿಯಾದ ಮುಂದಿಲ್ಲ ಎಂದು ವರದಿ ಸ್ಪಷ್ಟಪಡಿಸಿದೆ. ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ಉನ್ನತ ಅಧಿಕಾರಿಗಳು ಭಾರತದಲ್ಲಿ ಪಂದ್ಯ ಆಯೋಜನೆಗೆ ಒಲವು ತೋರಿದ್ದರೂ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ (ECB) ಜೊತೆ ಈ ಕುರಿತು ಯಾವುದೇ ಔಪಚಾರಿಕ ಮಾತುಕತೆ ನಡೆಸಿರಲಿಲ್ಲ.
ಬಿಸಿಸಿಐ ಹಾಗೂ ಇಸಿಬಿ ಸಮ್ಮತಿ ಅತ್ಯಗತ್ಯ
ಆ್ಯಶಸ್ ಸರಣಿ ಕೇವಲ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ದ್ವಿಪಕ್ಷೀಯ ಸರಣಿಯಾಗಿರುವುದರಿಂದ, ಎರಡೂ ಕ್ರಿಕೆಟ್ ಮಂಡಳಿಗಳ ಒಪ್ಪಿಗೆ ಹಾಗೂ ಒಮ್ಮತವಿಲ್ಲದೆ ಈ ಪ್ರತಿಷ್ಠಿತ ಸರಣಿಯನ್ನು ಬೇರೆ ಯಾವುದೇ ದೇಶದಲ್ಲಿ ಆಯೋಜಿಸುವುದು ಅಸಾಧ್ಯ. ಒಂದು ವೇಳೆ ಕ್ರಿಕೆಟ್ ಆಸ್ಟ್ರೇಲಿಯಾ ಭಾರತದಲ್ಲಿ ಪಂದ್ಯವನ್ನು ಆಯೋಜಿಸಲು ಬಯಸಿದರೆ, ಅವರು ಮೊದಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯೊಂದಿಗೆ ಮಾತುಕತೆ ನಡೆಸಬೇಕಾಗುತ್ತದೆ.
ಇಂಗ್ಲೆಂಡ್ ಮಂಡಳಿ ಒಪ್ಪಿಗೆ ಸೂಚಿಸಿದರೆ ಮಾತ್ರ ಆ್ಯಶಸ್ ಪಂದ್ಯವನ್ನು ಆಸ್ಟ್ರೇಲಿಯಾ ಅಥವಾ ಇಂಗ್ಲೆಂಡ್‌ನ ಹೊರಗೆ ಆಯೋಜಿಸಲು ಸಾಧ್ಯ. ಇದರ ಜೊತೆಗೆ, ಪಂದ್ಯವನ್ನು ಭಾರತದಲ್ಲಿ ಆಯೋಜಿಸಬೇಕಾದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮತ್ತು ಸಂಬಂಧಪಟ್ಟ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಪಾತ್ರವೂ ಭಾರಿ ಮುಖ್ಯವಾಗುತ್ತದೆ. ಅವರೆಲ್ಲರ ಅನುಮತಿ ಪಡೆಯಬೇಕಾದ ದೊಡ್ಡ ಪ್ರಕ್ರಿಯೆಯೂ ಇದರ ಹಿಂದಿದೆ.
ದೀರ್ಘ ಚರ್ಚೆಗಳ ಅಗತ್ಯವಿದೆ
ಉದಾಹರಣೆಗೆ, ಬಿಬಿಎಲ್ (BBL) 2026-27ನೇ ಸಾಲಿನ ಉದ್ಘಾಟನಾ ಪಂದ್ಯವನ್ನು ಚೆನ್ನೈನಲ್ಲಿ ಅಂತಿಮಗೊಳಿಸಲು, ಕ್ರಿಕೆಟ್ ಆಸ್ಟ್ರೇಲಿಯಾದ ಅಧಿಕಾರಿಗಳು ದೀರ್ಘಾವಧಿಯ ಮಾತುಕತೆಗಳಲ್ಲಿ ತೊಡಗಿಸಿಕೊಳ್ಳಬೇಕಾಯಿತು. ಬಿಸಿಸಿಐನಿಂದ ಹಸಿರು ನಿಶಾನೆ ಪಡೆಯುವ ಮೊದಲು, ಆಸ್ಟ್ರೇಲಿಯಾದ ಅಧಿಕಾರಿಗಳು ಐಪಿಎಲ್ 2026ರ ಸೀಸನ್‌ನಲ್ಲಿಯೇ ಚೆನ್ನೈಗೆ ಆಗಮಿಸಿ ಚರ್ಚೆಯನ್ನು ಮುಂದಕ್ಕೆ ಕೊಂಡೊಯ್ಯಬೇಕಾಗಿತ್ತು.
ಚೆಪಾಕ್ ಕ್ರೀಡಾಂಗಣದಲ್ಲಿ ಬಿಬಿಎಲ್ ಪಂದ್ಯವನ್ನು ಫೈನಲ್ ಮಾಡಲು ತಮಿಳುನಾಡು ಕ್ರಿಕೆಟ್ ಸಂಸ್ಥೆಯ (TNCA) ಪಾಲ್ಗೊಳ್ಳುವಿಕೆ ಮತ್ತು ಒಪ್ಪಿಗೆ ಕೂಡ ಅತ್ಯಗತ್ಯವಾಗಿತ್ತು. ಹೀಗಿರುವಾಗ, ಕ್ರೀಡಾ ಜಗತ್ತಿನ ಅತ್ಯಂತ ಪ್ರತಿಷ್ಠಿತ ಸರಣಿಯಾದ ಆ್ಯಶಸ್ ಟೆಸ್ಟ್ ಅನ್ನು ಭಾರತದಲ್ಲಿ ಆಡಬೇಕೆಂದರೆ, ಕ್ರಿಕೆಟ್ ಆಸ್ಟ್ರೇಲಿಯಾ ಬಲವಾದ ಒಲವು ತೋರಿದರು ಸಹ ಅದಕ್ಕೆ ಸರಣಿ ಮಟ್ಟದ ಸುದೀರ್ಘ ಮಾತುಕತೆ ಮತ್ತು ಸಿದ್ಧತೆಗಳು ಬೇಕಾಗುತ್ತವೆ. ಹೀಗಾಗಿ, ಸದ್ಯದ ಮಟ್ಟಿಗಂತೂ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಆ್ಯಶಸ್ ಸರಣಿಯನ್ನು ತವರಿನಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ಕಾಣಿಸುತ್ತಿಲ್ಲ.
ಇದನ್ನೂ ಓದಿ : ಬೆಂಗಳೂರಲ್ಲಿ ಬೆವರು ಹರಿಸುತ್ತಿರುವ ಹಾರ್ದಿಕ್ ಪಾಂಡ್ಯ – 2027ರ ಏಕದಿನ ವಿಶ್ವಕಪ್‌ಗಾಗಿ ಭರ್ಜರಿ ಸಿದ್ಧತೆ!



















