ಬೆಂಗಳೂರು: ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (TRAI) ನಿರ್ದೇಶನದ ಬೆನ್ನಲ್ಲೇ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ. ಇಂಟರ್ನೆಟ್ ಡೇಟಾ ಅಗತ್ಯವಿಲ್ಲದ ಮತ್ತು ಕೇವಲ ವಾಯ್ಸ್ ಕರೆ, ಮೆಸೇಜ್ ಗಳಿಗಾಗಿ ಸಿಮ್ ಬಳಸುವ ಗ್ರಾಹಕರಿಗಾಗಿ ಬಿಎಸ್ಸೆನ್ನೆಲ್ ಮೂರು ಹೊಸ ‘ವಾಯ್ಸ್-ಓನ್ಲಿ’ ಪ್ರಿಪೇಯ್ಡ್ ಯೋಜನೆಗಳನ್ನು ಆರಂಭಿಸಿದೆ. ಈ ಯೋಜನೆಗಳು ಖಾಸಗಿ ಟೆಲಿಕಾಂ ಸಂಸ್ಥೆಗಳಾದ ಜಿಯೋ, ಏರ್ ಟೆಲ್ ಮತ್ತು ವಿಐ ಪ್ಲಾನ್ ಗಳಿಗಿಂತ ಕಡಿಮೆ ದರದಲ್ಲಿ ಲಭ್ಯ ಇವೆ.
ಹೊಸ ಪ್ಲಾನ್ ಗಳ ವಿವರ ಹೀಗಿದೆ
ಬಿಎಸ್ಸೆನ್ನೆಲ್ ಪರಿಚಯಿಸಿರುವ ಮೂರೂ ವಿಶೇಷ ವೋಚರ್ ಗಳಲ್ಲಿ ಅನಿಯಮಿತ ಲೋಕಲ್, ಎಸ್.ಟಿ.ಡಿ ಮತ್ತು ರೋಮಿಂಗ್ ಕರೆಗಳ ಜತೆಗೆ ಪ್ರತಿದಿನ 100 ಉಚಿತ ಎಸ್ಎಂಎಸ್ ಸೌಲಭ್ಯ ದೊರೆಯುತ್ತದೆ. ಆದರೆ, ಇವುಗಳ ವ್ಯಾಲಿಡಿಟಿ ಅವಧಿಯಲ್ಲಿ ಮಾತ್ರ ವ್ಯತ್ಯಾಸವಿದೆ. ಈ ಯೋಜನೆಗಳಲ್ಲಿ ಯಾವುದೇ ಮೊಬೈಲ್ ಡೇಟಾ ಸಿಗುವುದಿಲ್ಲ.
172 ರೂ. ಪ್ಲಾನ್: 28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಆರಂಭಿಕ ಪ್ಲಾನ್ ನಲ್ಲಿ ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್ಎಂಎಸ್ ಲಭ್ಯವಿದ್ದು, ದಿನಕ್ಕೆ ಸರಾಸರಿ ಸುಮಾರು 6.14 ರೂ. ವೆಚ್ಚವಾಗುತ್ತದೆ.
184 ರೂ. ಪ್ಲಾನ್: 30 ದಿನಗಳ ವ್ಯಾಲಿಡಿಟಿಯೊಂದಿಗೆ ಬರುವ ಈ ಪ್ಲಾನ್ ನಲ್ಲೂ ಅನಿಯಮಿತ ಕರೆ ಹಾಗೂ ಪ್ರತಿದಿನ 100 ಎಸ್ಎಂಎಸ್ ಸೌಲಭ್ಯವಿದ್ದು, ದಿನಕ್ಕೆ ಸುಮಾರು 6.13 ರೂ. ಖರ್ಚಾಗುತ್ತದೆ.
190 ರೂ. ಪ್ಲಾನ್: ಒಂದು ತಿಂಗಳ ವ್ಯಾಲಿಡಿಟಿ ನೀಡುವ ವಿಶೇಷ ಪ್ಲಾನ್ ಇದಾಗಿದೆ. ಪ್ರತಿ ತಿಂಗಳು ಒಂದೇ ದಿನಾಂಕದಂದು ರಿಚಾರ್ಜ್ ನವೀಕರಣಗೊಳ್ಳುವುದರಿಂದ ಅವಧಿಯನ್ನು ನೆನಪಿಟ್ಟುಕೊಳ್ಳಲು ಸುಲಭವಾಗುತ್ತದೆ. ಇದಕ್ಕೆ ದಿನಕ್ಕೆ 6.13 ರೂ.ನಿಂದ 6.33 ರೂ.ವರೆಗೆ ವೆಚ್ಚವಾಗುತ್ತದೆ.
ಗ್ರಾಹಕರಿಗೆ ಏನು ಪ್ರಯೋಜನ?
ಖಾಸಗಿ ಆಪರೇಟರ್ ಗಳ ವಾಯ್ಸ್-ಆಧಾರಿತ ಪ್ಲಾನ್ ಗಳಿಗೆ ಹೋಲಿಸಿದರೆ ಬಿಎಸ್ಸೆನ್ನೆಲ್ ಯೋಜನೆಗಳು ದರದಲ್ಲೂ ಅಗ್ಗವಾಗಿವೆ ಮತ್ತು ದೈನಂದಿನ 100 ಎಸ್ಎಂಎಸ್ ಮಿತಿಯೊಂದಿಗೆ ಹೆಚ್ಚಿನ ಸಂದೇಶ ಕಳುಹಿಸುವ ಅನುಕೂಲ ನೀಡುತ್ತವೆ. ಈಗಾಗಲೇ 99 ಮತ್ತು 439 ರೂ.ನಂತಹ ವಾಯ್ಸ್-ಆಧಾರಿತ ಪ್ಲಾನ್ ಗಳನ್ನು ಹೊಂದಿರುವ ಬಿಎಸ್ಸೆನ್ನೆಲ್ ಫೀಚರ್ ಫೋನ್ ಬಳಕೆದಾರರು, ಹಿರಿಯ ನಾಗರಿಕರು ಮತ್ತು ಎರಡನೇ ಸಿಮ್ ಬಳಸುವವರಿಗೆ ಈ ಹೊಸ ಆಯ್ಕೆಗಳು ಹಣ ಉಳಿಸಲಿವೆ. ಈ ಮೂರೂ ಹೊಸ ಪ್ರಿಪೇಯ್ಡ್ ಪ್ಲಾನ್ಗಳು ಬಿಎಸ್ಸೆನ್ನೆಲ್ ನ ಅಧಿಕೃತ ವೆಬ್ ಸೈಟ್ ಮತ್ತು ರಿಚಾರ್ಜ್ ಪೋರ್ಟಲ್ ಗಳಲ್ಲಿ ಲಭ್ಯವಿವೆ.



















