ಸೋನ್ಭದ್ರ (ಉತ್ತರ ಪ್ರದೇಶ): ಆಧುನಿಕ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡ ಉತ್ತರ ಪ್ರದೇಶ ಪೊಲೀಸರು, ಕಳೆದ ಐದು ವರ್ಷಗಳಿಂದ ನಾಪತ್ತೆಯಾಗಿದ್ದ 30 ವರ್ಷದ ಮಹಿಳೆಯನ್ನು ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ.
ಮಹಿಳೆಯ ಬಾಲ್ಯದ ಫೋಟೋವೊಂದನ್ನು ಆಧಾರವಾಗಿಟ್ಟುಕೊಂಡು ಆಕೆಯ ಪ್ರಸ್ತುತ ರೂಪವನ್ನು ಎಐ ಮೂಲಕ ಸೃಷ್ಟಿಸಿದ ಪೊಲೀಸರು, ರಾಜಸ್ಥಾನದ ಚುರು ಜಿಲ್ಲೆಯಲ್ಲಿ ಆಕೆಯನ್ನು ಸುರಕ್ಷಿತವಾಗಿ ಪತ್ತೆ ಮಾಡಿದ್ದಾರೆ ಎಂದು ಸೋನ್ಭದ್ರ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ವರ್ಮಾ ಶುಕ್ರವಾರ ತಿಳಿಸಿದ್ದಾರೆ.
ಕಳೆದ ಜುಲೈ 14ರಂದು ಬಭನಿ ಪೊಲೀಸ್ ಠಾಣೆಗೆ ದೂರು ನೀಡಿದ್ದ ಕಿಸ್ಮತ್ ದೇವಿ ಎಂಬವರು, ಐದು ವರ್ಷಗಳ ಹಿಂದೆ ತಮ್ಮ ಗ್ರಾಮದ ಮಹಿಳೆಯೊಬ್ಬಳು ಮದುವೆ ಮಾಡಿಸುವ ನೆಪದಲ್ಲಿ ತಮ್ಮ ಮಗಳು ಮಂಜು ಖರ್ವಾರ್ಳನ್ನು ಕರೆದೊಯ್ದಿದ್ದು, ಅಂದಿನಿಂದ ಆಕೆ ನಾಪತ್ತೆಯಾಗಿದ್ದಾಳೆ ಎಂದು ಆರೋಪಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ, ನಾಪತ್ತೆಯಾದ ಮಹಿಳೆಯ ಇತ್ತೀಚಿನ ಯಾವುದೇ ಫೋಟೋ ಕುಟುಂಬದ ಬಳಿ ಇಲ್ಲದಿರುವುದು ದೊಡ್ಡ ಸವಾಲಾಗಿ ಪರಿಣಮಿಸಿತ್ತು.
ಪೇದೆಯ ಚಾಣಾಕ್ಷತನಕ್ಕೆ ಒಲಿದ ಯಶಸ್ಸು
ತನಿಖೆಯ ವೇಳೆ ಮಂಜು 2007ರಲ್ಲಿ 4ನೇ ತರಗತಿಯಲ್ಲಿ ಓದುತ್ತಿದ್ದಾಗ ತೆಗೆದಿದ್ದ ಬಾಲ್ಯದ ಫೋಟೋವೊಂದು ಪೊಲೀಸರಿಗೆ ಲಭ್ಯವಾಯಿತು. ತಕ್ಷಣವೇ ಕಾರ್ಯಪ್ರವೃತ್ತರಾದ ಬಭನಿ ಠಾಣೆಯ ಪೊಲೀಸ್ ಪೇದೆ ವಿಜಯ್ ಪಾಂಡೆ, ಆ ಬಾಲ್ಯದ ಫೋಟೋ ಹಾಗೂ ಮಂಜು ಅವರ ಪೋಷಕರು ಮತ್ತು ಸಹೋದರಿಯ ಭಾವಚಿತ್ರಗಳನ್ನು ಬಳಸಿಕೊಂಡು ಎಐ ತಂತ್ರಜ್ಞಾನದ ನೆರವಿನಿಂದ ಮಂಜು ಅವರ ಪ್ರಸ್ತುತ ವಯಸ್ಸಿನ ಸಂಭಾವ್ಯ ಮುಖಚಹರೆಯನ್ನು ಸೃಷ್ಟಿಸಿದರು. ಎಐ ಸೃಷ್ಟಿಸಿದ ಈ ಚಿತ್ರವನ್ನು ನೋಡಿದ ಕುಟುಂಬಸ್ಥರು, ಅದು ನಾಪತ್ತೆಯಾದ ಮಂಜು ಅವರದೇ ಮುಖ ಎಂದು ಗುರುತಿಸಿದರು.
ರಾಜಸ್ಥಾನದಲ್ಲಿ ಸುರಕ್ಷಿತವಾಗಿ ಪತ್ತೆ, ಪೇದೆಗೆ ಬಹುಮಾನ
ಎಐ ಚಿತ್ರದ ಆಧಾರದ ಮೇಲೆ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರಿಗೆ, ಅಕ್ಟೋಬರ್ 16ರಂದು ಮಂಜು ರಾಜಸ್ಥಾನದ ಚುರು ಜಿಲ್ಲೆಯಲ್ಲಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಯಿತು. ಕೂಡಲೇ ಅಲ್ಲಿಗೆ ತೆರಳಿದ ಪೊಲೀಸ್ ತಂಡವು ಆಕೆಯನ್ನು ಸುರಕ್ಷಿತವಾಗಿ ಪತ್ತೆಹಚ್ಚಿದೆ. ಮಂಜು ಅವರು ಚುರು ಜಿಲ್ಲೆಯಲ್ಲಿ ತಮ್ಮ ಪತಿ ಉಮೇಂದ್ರ ಮತ್ತು ಇಬ್ಬರು ಮಕ್ಕಳೊಂದಿಗೆ ಸಂಸಾರ ನಡೆಸುತ್ತಿರುವುದು ಕಂಡುಬಂದಿದೆ ಎಂದು ಎಸ್ಪಿ ವರ್ಮಾ ವಿವರಿಸಿದ್ದಾರೆ. ತಂತ್ರಜ್ಞಾನ ಬಳಸಿ ಪ್ರಕರಣ ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಪೊಲೀಸ್ ಪೇದೆ ವಿಜಯ್ ಪಾಂಡೆ ಅವರ ಕಾರ್ಯವನ್ನು ಶ್ಲಾಘಿಸಿರುವ ಪೊಲೀಸ್ ಮಹಾನಿರ್ದೇಶಕರು (DGP) 5,000 ರೂ. ಹಾಗೂ ಜಿಲ್ಲಾ ಎಸ್ಪಿ 2,100 ರೂ. ನಗದು ಬಹುಮಾನ ನೀಡಿ ಗೌರವಿಸಿದ್ದಾರೆ.



















