ನವದೆಹಲಿ : ಸೂರ್ಯನ ಚಟುವಟಿಕೆಗಳಲ್ಲಿನ ಹೆಚ್ಚಳವು ಬಾಹ್ಯಾಕಾಶದಲ್ಲಿನ ತ್ಯಾಜ್ಯದ (ಸ್ಪೇಸ್ ಜಂಕ್) ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡುತ್ತಿದೆ.
ಸೌರ ಚಟುವಟಿಕೆಗಳು ತೀವ್ರಗೊಂಡಾಗ ಹಳೆಯ, ನಿಷ್ಕ್ರಿಯ ಉಪಗ್ರಹಗಳು ಹಾಗೂ ಬಾಹ್ಯಾಕಾಶದ ತ್ಯಾಜ್ಯಗಳು ಭೂಮಿಯತ್ತ ಅತ್ಯಂತ ವೇಗವಾಗಿ ಧಾವಿಸುತ್ತವೆ ಎಂಬುದನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನೇತೃತ್ವದ ಅಧ್ಯಯನವೊಂದು ಇದೀಗ ದೃಢಪಡಿಸಿದೆ. ಈ ಹೊಸ ಸಂಶೋಧನೆಯು ಭವಿಷ್ಯದ ಉಪಗ್ರಹಗಳ ಉಡಾವಣೆ ಹಾಗೂ ಇಂಧನ ನಿರ್ವಹಣೆಯ ಲೆಕ್ಕಾಚಾರಗಳನ್ನು ಬದಲಿಸುವ ಸಾಧ್ಯತೆಯಿದೆ.
ತಿರುವನಂತಪುರಂನಲ್ಲಿರುವ ಇಸ್ರೋದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ (ವಿಎಸ್‌ಎಸ್‌ಸಿ) ಬಾಹ್ಯಾಕಾಶ ಭೌತಶಾಸ್ತ್ರ ಪ್ರಯೋಗಾಲಯದ ವಿಜ್ಞಾನಿಗಳು ಈ ಕುರಿತು ವಿಸ್ತೃತ ಅಧ್ಯಯನ ನಡೆಸಿದ್ದಾರೆ. ‘ಫ್ರಾಂಟಿಯರ್ಸ್ ಇನ್ ಆಸ್ಟ್ರಾನಮಿ ಅಂಡ್ ಸ್ಪೇಸ್ ಸೈನ್ಸಸ್’ ಜರ್ನಲ್‌ನಲ್ಲಿ ಪ್ರಕಟವಾಗಿರುವ ಈ ವರದಿಯ ಪ್ರಕಾರ, ಸೂರ್ಯನ 11 ವರ್ಷಗಳ ಸೌರ ಚಕ್ರದಲ್ಲಿ, ಸೌರ ಚಟುವಟಿಕೆಯು ಅದರ ಗರಿಷ್ಠ ಮಟ್ಟದ ಶೇ.67ರಷ್ಟನ್ನು ತಲುಪಿದಾಗ, ಕಕ್ಷೆಯಲ್ಲಿರುವ ಬಾಹ್ಯಾಕಾಶ ತ್ಯಾಜ್ಯಗಳು ಗಣನೀಯವಾಗಿ ವೇಗವಾಗಿ ಕೆಳಮುಖವಾಗಿ ಚಲಿಸಲು ಪ್ರಾರಂಭಿಸುತ್ತವೆ.
ಭೂಮಿಯ ಸುತ್ತಲಿನ ಬಾಹ್ಯಾಕಾಶ ತ್ಯಾಜ್ಯಗಳು ಸೂರ್ಯನ ಚಟುವಟಿಕೆಗಳು ಹೆಚ್ಚಿರುವಾಗ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ನಾವು ಮೊದಲ ಬಾರಿಗೆ ನಿಖರವಾಗಿ ಪತ್ತೆಹಚ್ಚಿದ್ದೇವೆ ಎಂದು ಅಧ್ಯಯನದ ಪ್ರಮುಖ ಲೇಖಕಿ ಆಯಿಷಾ ಎಂ. ಅಶ್ರಫ್ ವಿವರಿಸಿದ್ದಾರೆ.
1960ರ ದಶಕದ ತ್ಯಾಜ್ಯಗಳ ಮೇಲೆ ನಿರಂತರ ನಿಗಾ
ಸಂಶೋಧಕರ ತಂಡವು 1960ರ ದಶಕದಲ್ಲಿ ಉಡಾವಣೆಗೊಂಡಿದ್ದ 17 ಬಾಹ್ಯಾಕಾಶ ತ್ಯಾಜ್ಯಗಳ (600 ಕಿ.ಮೀ ನಿಂದ 800 ಕಿ.ಮೀ ಎತ್ತರದಲ್ಲಿರುವ) ಚಲನವಲನಗಳನ್ನು ಸೌರ ಚಕ್ರ 22 ರಿಂದ 24ರವರೆಗೆ ಬರೋಬ್ಬರಿ 36 ವರ್ಷಗಳ ಕಾಲ ಟ್ರ್ಯಾಕ್ ಮಾಡಿದೆ. ಸೌರ ಚಟುವಟಿಕೆಗಳು ತೀವ್ರಗೊಂಡಾಗ ಸೂರ್ಯನಿಂದ ಹೊರಹೊಮ್ಮುವ ನೇರಳಾತೀತ ಕಿರಣಗಳು ಮತ್ತು ವಿದ್ಯುದಾವೇಶದ ಕಣಗಳು ಹೆಚ್ಚಾಗುತ್ತವೆ.
ಇದರಿಂದಾಗಿ ಭೂಮಿಯ ವಾತಾವರಣದ ಮೇಲಿನ ಪದರವು (ಥರ್ಮೋಸ್ಪಿಯರ್) ಬಿಸಿಯಾಗಿ ವಿಸ್ತಾರಗೊಳ್ಳುತ್ತದೆ. ಇದು ಉಪಗ್ರಹಗಳು ಮತ್ತು ತ್ಯಾಜ್ಯಗಳ ಮೇಲೆ ಹೆಚ್ಚಿನ ವಾತಾವರಣದ ಘರ್ಷಣೆಯನ್ನು (ಡ್ರ್ಯಾಗ್) ಉಂಟುಮಾಡಿ, ಅವುಗಳ ವೇಗವನ್ನು ತಗ್ಗಿಸುವ ಮೂಲಕ ಭೂಮಿಯತ್ತ ಸೆಳೆಯುತ್ತದೆ. ದಶಕಗಳ ಹಿಂದಿನ ಈ ತ್ಯಾಜ್ಯಗಳು ಈಗಲೂ ವಿಜ್ಞಾನ ಕ್ಷೇತ್ರಕ್ಕೆ ಅಮೂಲ್ಯವಾದ ಮಾಹಿತಿ ಒದಗಿಸುತ್ತಿವೆ ಎಂಬುದು ವಿಶೇಷ.
ಭವಿಷ್ಯದ ಉಪಗ್ರಹ ಯೋಜನೆಗಳ ಮೇಲೆ ಪ್ರಭಾವ
ಭೂಮಿಯಿಂದ 400 ಕಿ.ಮೀ ನಿಂದ 2000 ಕಿ.ಮೀ ವರೆಗಿನ ಕೆಳ ಭೂಕಕ್ಷೆ (LEO) ಈಗಾಗಲೇ ಸಾವಿರಾರು ಉಪಗ್ರಹಗಳು, ಉಡಾವಣಾ ವಾಹನಗಳ ಬಿಡಿಭಾಗಗಳು ಮತ್ತು ತ್ಯಾಜ್ಯಗಳಿಂದ ತುಂಬಿಹೋಗಿದೆ. ಸ್ಪೇಸ್‌ಎಕ್ಸ್‌ನ ಸ್ಟಾರ್‌ಲಿಂಕ್‌ನಂತಹ ಬೃಹತ್ ಯೋಜನೆಗಳೂ ಇದೇ ಕಕ್ಷೆಯಲ್ಲಿವೆ. ಸೌರ ಚಟುವಟಿಕೆಗಳು ಮಿತಿಮೀರಿದಾಗ ಈ ಕಕ್ಷೆಯಲ್ಲಿರುವ ಕಾರ್ಯನಿರತ ಉಪಗ್ರಹಗಳೂ ಸಹ ವೇಗವಾಗಿ ಎತ್ತರ ಕಳೆದುಕೊಳ್ಳುವ ಅಪಾಯವಿರುತ್ತದೆ. ಆ ಸಮಯದಲ್ಲಿ ಉಪಗ್ರಹಗಳನ್ನು ನಿಗದಿತ ಕಕ್ಷೆಯಲ್ಲೇ ಕಾಯ್ದುಕೊಳ್ಳಲು ಹೆಚ್ಚಿನ ಪ್ರಮಾಣದ ಇಂಧನ ಬೇಕಾಗುತ್ತದೆ.
ಅಲ್ಲದೆ, ವೇಗವಾಗಿ ಪಥ ಬದಲಿಸುವ ತ್ಯಾಜ್ಯಗಳಿಂದ ಕಕ್ಷೆಯಲ್ಲಿರುವ ಇತರ ಉಪಗ್ರಹಗಳಿಗೆ ಡಿಕ್ಕಿ ಹೊಡೆಯುವ ಅಪಾಯವೂ ಹೆಚ್ಚಿರುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಭವಿಷ್ಯದಲ್ಲಿ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳು ಸಾವಿರಾರು ಉಪಗ್ರಹಗಳನ್ನು ಹಾರಿಬಿಡುವ ಸಿದ್ಧತೆಯಲ್ಲಿರುವುದರಿಂದ ಈ ಸಂಶೋಧನಾ ವರದಿಯು ಅತ್ಯಂತ ನಿರ್ಣಾಯಕ ಎನಿಸಿದೆ.
ಇದನ್ನೂ ಓದಿ : ವಾಕಿಂಗ್ ಹೋಗುತ್ತಿದ್ದ ಯುವತಿಗೆ ಬ್ಯಾಡ್ ಟಚ್ – ಆರೋಪಿಯ ಬಂಧನ!



















