ನವದೆಹಲಿ : ಎಸ್ಐಆರ್ ವಿಚಾರದಲ್ಲಿ ಭಾರತೀಯ ಚುನಾವಣಾ ಆಯೋಗಕ್ಕೆ (ECI) ಇಂದು ಸುಪ್ರೀಂ ಕೋರ್ಟ್‌ನಲ್ಲಿ ಭಾರೀ ಜಯ ಸಿಕ್ಕಿದೆ. ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ನಡೆಸುವ ಚುನಾವಣಾ ಆಯೋಗದ ಅಧಿಕಾರವನ್ನು ಎತ್ತಿಹಿಡಿದಿರುವ ಸರ್ವೋಚ್ಚ ನ್ಯಾಯಾಲಯ, ಈ ಪ್ರಕ್ರಿಯೆಯು ಯಾವುದೇ ಕಾನೂನು ಅಥವಾ ಸಾಂವಿಧಾನಿಕ ನಿಬಂಧನೆಗಳನ್ನು ಉಲ್ಲಂಘಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಕುರಿತು ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಈ ಐತಿಹಾಸಿಕ ತೀರ್ಪು ಪ್ರಕಟಿಸಿದೆ.
ವಿಶೇಷ ತೀವ್ರ ಪರಿಷ್ಕರಣೆಯು ನಿಖರ ಮತ್ತು ಅಂತರ್ಗತ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಇಟ್ಟಿರುವ ಪ್ರಮುಖ ಹೆಜ್ಜೆಯಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ಮಹತ್ವದ ಪ್ರಕ್ರಿಯೆಯು “ಸಂವಿಧಾನಕ್ಕೆ ಜೀವ ತುಂಬುತ್ತದೆ” ಎಂದು ಬಣ್ಣಿಸಿದ ಪೀಠವು, ಚುನಾವಣಾ ಆಯೋಗವು ತನ್ನ ಶಾಸನಬದ್ಧ ಅಧಿಕಾರ ವ್ಯಾಪ್ತಿಯನ್ನು ಮೀರಿ ಕಾರ್ಯನಿರ್ವಹಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ಸಾಮಾನ್ಯ ಪರಿಷ್ಕರಣೆಗಿಂತ ಈ ಪ್ರಕ್ರಿಯೆಯು ವಿಭಿನ್ನವಾಗಿದೆ ಎಂದಮಾತ್ರಕ್ಕೆ ಇದನ್ನು ಅಲ್ಟ್ರಾ ವೈರಸ್ (ಕಾನೂನು ಬಾಹಿರ) ಎಂದು ಕರೆಯಲು ಸಾಧ್ಯವಿಲ್ಲ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವ ಸಾಂವಿಧಾನಿಕ ಗುರಿಗೂ, ಈ ವಿಶೇಷ ಪರಿಷ್ಕರಣೆಯ ಉದ್ದೇಶಕ್ಕೂ ನೇರ ಸಂಬಂಧವಿದೆ ಎಂದು ನ್ಯಾಯಾಲಯ ಹೇಳಿದೆ.
ನಾಲ್ಕು ಪ್ರಮುಖ ಪ್ರಶ್ನೆಗಳಿಗೆ ಸಿಕ್ಕ ಉತ್ತರ
ಈ ಸವಾಲನ್ನು ಸುಪ್ರೀಂ ಕೋರ್ಟ್ ನಾಲ್ಕು ಪ್ರಮುಖ ಪ್ರಶ್ನೆಗಳ ಆಧಾರದ ಮೇಲೆ ಪರಿಶೀಲಿಸಿ, ಆಯೋಗದ ಪರವಾಗಿ ತೀರ್ಪು ನೀಡಿದೆ. ಮೊದಲನೆಯದಾಗಿ, ಈ ಪರಿಷ್ಕರಣೆಯು ಆಯೋಗದ ಸಾಂವಿಧಾನಿಕ ಮತ್ತು ಶಾಸನಬದ್ಧ ಆದೇಶಕ್ಕೆ ಅನುಗುಣವಾಗಿದೆಯೇ? ಎರಡನೆಯದಾಗಿ, ಆಯೋಗವು ಅಳವಡಿಸಿಕೊಂಡ ವಿಧಾನಗಳು ಗುರಿಯನ್ನು ತಲುಪಲು ಪೂರಕವಾಗಿದೆಯೇ? ಮೂರನೆಯದಾಗಿ, ಈ ಕ್ರಮಗಳು ಅನಿವಾರ್ಯವಾಗಿದ್ದವೇ ಮತ್ತು ಇದಕ್ಕೆ ಬೇರೆ ಪರ್ಯಾಯಗಳಿರಲಿಲ್ಲವೇ? ಹಾಗೂ ನಾಲ್ಕನೆಯದಾಗಿ, ಉದ್ದೇಶಿತ ಗುರಿ ಸಾಧನೆ ಮತ್ತು ಸಾಂವಿಧಾನಿಕ ಹಕ್ಕುಗಳ ಮೇಲಿನ ಮಿತಿಗಳ ನಡುವೆ ನ್ಯಾಯಯುತ ಸಮತೋಲನವನ್ನು ಕಾಯ್ದುಕೊಳ್ಳಲಾಗಿದೆಯೇ? ಎಂಬ ಪ್ರಶ್ನೆಗಳನ್ನು ಕೋರ್ಟ್ ಮುನ್ನೆಲೆಗೆ ತಂದಿತ್ತು. ಈ ಪ್ರಕ್ರಿಯೆಯಲ್ಲಿ ಸಾರ್ವಜನಿಕರ ಭಾಗವಹಿಸುವಿಕೆ, ತಿದ್ದುಪಡಿ ಮತ್ತು ಕುಂದುಕೊರತೆಗಳ ನಿವಾರಣೆಗೆ ಹಲವು ಅವಕಾಶಗಳನ್ನು ಕಲ್ಪಿಸಿರುವುದರಿಂದ ಸಾಂವಿಧಾನಿಕ ಹಕ್ಕುಗಳ ರಕ್ಷಣೆ ಮತ್ತು ಚುನಾವಣಾ ಪಾವಿತ್ರ್ಯತೆಯ ನಡುವೆ ಸೂಕ್ತ ಸಮತೋಲನವನ್ನು ಕಾಯ್ದುಕೊಳ್ಳಲಾಗಿದೆ ಎಂದು ಕೋರ್ಟ್ ತೃಪ್ತಿ ವ್ಯಕ್ತಪಡಿಸಿದೆ.
ಮತದಾರರ ಪಟ್ಟಿಯಿಂದ ಹೊರಬಿದ್ದ ತಕ್ಷಣ ಪೌರತ್ವ ರದ್ದಾಗುವುದಿಲ್ಲ
ಇದೇ ವೇಳೆ ಪೌರತ್ವದ ಕುರಿತಾಗಿ ಅತ್ಯಂತ ಪ್ರಮುಖ ಸ್ಪಷ್ಟನೆಯನ್ನು ನೀಡಿರುವ ಸುಪ್ರೀಂ ಕೋರ್ಟ್, ಒಬ್ಬ ವ್ಯಕ್ತಿಯ ಹೆಸರು ಮತದಾರರ ಪಟ್ಟಿಯಿಂದ ಹೊರಗುಳಿದ ತಕ್ಷಣ ಆತ ಪೌರತ್ವವನ್ನು ಕಳೆದುಕೊಳ್ಳುತ್ತಾನೆ ಎಂದರ್ಥವಲ್ಲ ಎಂದು ಹೇಳಿದೆ. ಒಂದು ವೇಳೆ ನಾಗರಿಕನ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದಿದ್ದರೆ, ಅದು ಆ ನಾಗರಿಕನು ತನ್ನ ಪೌರತ್ವವನ್ನು ಸಾಬೀತುಪಡಿಸಲು ವಿಫಲನಾಗಿದ್ದಾನೆ ಎಂಬುದನ್ನು ತೋರಿಸುವುದಿಲ್ಲ; ಬದಲಿಗೆ ಅದು ಪೌರತ್ವವನ್ನು ಪರಿಶೀಲಿಸುವಲ್ಲಿ ಚುನಾವಣಾ ಆಯೋಗದ ಅಸಮರ್ಥತೆಯನ್ನು ತೋರಿಸುತ್ತದೆ ಎಂದು ನ್ಯಾಯಾಲಯ ನುಡಿದಿದೆ. ಪಟ್ಟಿಯಿಂದ ಹೊರಗುಳಿದವರನ್ನು ಕಾನೂನುಬದ್ಧವಾಗಿಯೇ ನಿರ್ವಹಿಸಬೇಕು ಎಂದೂ ಇದೇ ವೇಳೆ ತಿಳಿಸಿದೆ.
ವರ್ಷದ ವಿವಾದಕ್ಕೆ ಸುಪ್ರೀಂ ತೆರೆ
ಕಳೆದ ವರ್ಷ ಜೂನ್ ತಿಂಗಳಲ್ಲಿ ಬಿಹಾರದಲ್ಲಿ ಚುನಾವಣಾ ಆಯೋಗವು ಮೊದಲ ಬಾರಿಗೆ ಈ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಕೈಗೆತ್ತಿಕೊಂಡಾಗ ರಾಜಕೀಯ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಆಯೋಗ ಮತ್ತು ವಿರೋಧ ಪಕ್ಷಗಳ ನಡುವೆ ಇದು ದೊಡ್ಡ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿತ್ತು. ಇದರ ಕಾನೂನುಬದ್ಧತೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸರಣಿ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಇಡೀ ಪ್ರಕ್ರಿಯೆಯು “ಮತದಾರರ ಪಟ್ಟಿಯ ನಿಖರತೆಯನ್ನು ಮರುಸ್ಥಾಪಿಸುವ” ಸಾಂವಿಧಾನಿಕ ಉದ್ದೇಶವನ್ನು ಹೊಂದಿದೆ ಎಂದು ಹೇಳುವ ಮೂಲಕ ವರ್ಷದ ವಿವಾದಕ್ಕೆ ಪೂರ್ಣವಿರಾಮ ಇಟ್ಟಿದೆ.
ಇದನ್ನೂ ಓದಿ : ಗುಜರಾತ್‌ನಲ್ಲಿ ಘೋರ ಕೃತ್ಯ | ಪತ್ನಿ ಇಷ್ಟವಿಲ್ಲವೆಂದು 50 ಸಾವಿರಕ್ಕೆ ಮಾರಿದ ಪತಿ.. ಮಹಿಳೆ ಮೇಲೆ ಗ್ಯಾಂಗ್‌ರೇಪ್!



















