ಚಿಕ್ಕಮಗಳೂರು : ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಅಪರೂಪದ ರಾಜಕೀಯ ಬೆಳವಣಿಗೆ ನಡೆದಿದ್ದು, ಒಂದೇ ವಾರದಲ್ಲಿ ಇಬ್ಬರು ಶಾಸಕರು ಕ್ಷೇತ್ರವನ್ನು ಪ್ರತಿನಿಧಿಸಿದಂತಾಗಿದೆ. ಶಾಸಕ ಸ್ಥಾನಕ್ಕಾಗಿ ಕಾಂಗ್ರೆಸ್‌ನ ಟಿ. ರಾಜೇಗೌಡ ಹಾಗೂ ಬಿಜೆಪಿಯ ಜೀವರಾಜ್ ನಡುವೆ ಹಾವು-ಏಣಿ ಆಟದಂತ ರಾಜಕೀಯ ಬೆಳವಣಿಗೆ ಜೋರಾಗಿದ್ದು, ಕ್ಷೇತ್ರದ ಜನರು ಗೊಂದಲದ ವಾತಾವರಣಕ್ಕೆ ಸಾಕ್ಷಿಯಾಗಿದ್ದಾರೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜೀವರಾಜ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಟಿ. ರಾಜೇಗೌಡ ಗೆಲುವು ಸಾಧಿಸಿದ್ದರು. ಆರಂಭದಲ್ಲಿ ರಾಜೇಗೌಡರ ಗೆಲುವು ಖಚಿತವಾಗಿದ್ದರೂ, ಬಳಿಕ ಚುನಾವಣಾ ಫಲಿತಾಂಶದ ಕುರಿತಾಗಿ ನ್ಯಾಯಾಲಯದ ಹೋರಾಟ ಆರಂಭಗೊಂಡಿತ್ತು. ಇದರೊಂದಿಗೆ ಶೃಂಗೇರಿ ಕ್ಷೇತ್ರದ ರಾಜಕೀಯ ಮತ್ತಷ್ಟು ಕಾವೇರಿತ್ತು.
ಕೆಲ ದಿನಗಳ ಹಿಂದೆ ಹೈಕೋರ್ಟ್ ಸೂಚನೆಯ ಮೇರೆಗೆ ಅಂಚೆ ಮತಗಳ ಮರುಎಣಿಕೆ ನಡೆದಿತ್ತು. ಈ ಮರುಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಜೀವರಾಜ್ ಅವರಿಗೆ ಗೆಲುವು ಸಿಕ್ಕಿತ್ತು. ಹೀಗಾಗಿ ಟಿ. ರಾಜೇಗೌಡ ಅವರ ಗೆಲುವು ರದ್ದುಗೊಂಡು, ಜೀವರಾಜ್ ಅವರನ್ನು ಶಾಸಕರಾಗಿ ಘೋಷಿಸಲಾಗಿತ್ತು. ಈ ತೀರ್ಪು ರಾಜ್ಯ ರಾಜಕೀಯದಲ್ಲೂ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಹೈಕೋರ್ಟ್ ತೀರ್ಪಿನ ಬಳಿಕ ಬಿಜೆಪಿ ಅಭ್ಯರ್ಥಿ ಜೀವರಾಜ್ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ವಿಧಾನಸಭೆಯಲ್ಲಿ ಶೃಂಗೇರಿ ಶಾರದಾಂಬೆಯ ಹೆಸರಿನಲ್ಲಿ ಅವರು ಪ್ರಮಾಣವಚನ ಸ್ವೀಕರಿಸಿದ್ದು ವಿಶೇಷ ಗಮನಸೆಳೆದಿತ್ತು. ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ಜೀವರಾಜ್ ಅವರಿಗೆ ಪ್ರಮಾಣವಚನ ಬೋಧಿಸಿದ್ದರು.
ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ರಾಜೇಗೌಡ
ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಕಾಂಗ್ರೆಸ್ ಅಭ್ಯರ್ಥಿ ಟಿ. ರಾಜೇಗೌಡ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಜೀವರಾಜ್ ಗೆಲುವಿನ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸಿದ್ದು, ರಾಜೇಗೌಡ ಪರವಾಗಿ ಮಹತ್ವದ ಬೆಳವಣಿಗೆ ನಡೆದಿದೆ. ಹೈಕೋರ್ಟ್ ನೀಡಿದ್ದ ತೀರ್ಪಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ಇದರಿಂದ ಮತ್ತೆ ಕಾಂಗ್ರೆಸ್ ನಾಯಕ ಟಿ. ರಾಜೇಗೌಡ ಅವರಿಗೆ ಭಾರೀ ರಿಲೀಫ್ ದೊರೆತಂತಾಗಿದೆ. ಹೀಗಾಗಿ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಟಿ. ರಾಜೇಗೌಡ ಮುಂದುವರಿಯಲಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ಕೆಲವೇ ದಿನಗಳ ಹಿಂದೆ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ್ದ ಬಿಜೆಪಿ ನಾಯಕ ಜೀವರಾಜ್ ಇದೀಗ ಮತ್ತೆ ಶಾಸಕ ಸ್ಥಾನ ಕಳೆದುಕೊಂಡ ಸ್ಥಿತಿಗೆ ಬಂದಿದ್ದಾರೆ. ಈ ಬೆಳವಣಿಗೆಯ ಬಳಿಕ ಜೀವರಾಜ್ ಮುಂದಿನ ರಾಜಕೀಯ ನಡೆ ಏನಿರಬಹುದು ಎಂಬ ಪ್ರಶ್ನೆ ಇದೀಗ ಕ್ಷೇತ್ರದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.


















