ಬೆಂಗಳೂರು : ಕರ್ನಾಟಕ ಕಾಂಗ್ರೆಸ್ ಒಳರಾಜಕೀಯ ಮತ್ತೆ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಇದೀಗ ಜಿಬಿಎ ಚುನಾವಣೆ ರಾಜ್ಯ ರಾಜಕೀಯದ ಕೇಂದ್ರಬಿಂದುವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆ ವಿಚಾರವಾಗಿ ಹಲವು ದಿನಗಳಿಂದ ನಡೆಯುತ್ತಿರುವ ಒಳಜಗಳ ಮತ್ತು ಪವರ್ ಫೈಟ್ ನಡುವೆಯೇ ಇದೀಗ ಇಬ್ಬರ ಮುಂದೆ ಜಿಬಿಎ ಚುನಾವಣೆ ದೊಡ್ಡ ಸವಾಲಾಗಿ ನಿಂತಿದೆ. ಸರ್ಕಾರದ ಒಳಸಂಘರ್ಷವನ್ನು ಬದಿಗಿಟ್ಟು ಪಕ್ಷವನ್ನು ಗೆಲುವಿನ ದಾರಿಗೆ ತರುವ ಹೊಣೆ ಇದೀಗ ಉಭಯ ನಾಯಕರ ಮೇಲಿದೆ.
ಜಿಬಿಎ ಚುನಾವಣೆಗೆ ಸಂಬಂಧಿಸಿದಂತೆ ಸರ್ಕಾರ ಈಗಾಗಲೇ ಸಿಬ್ಬಂದಿ ಕೊರತೆ ಉಲ್ಲೇಖಿಸಿ ಚುನಾವಣೆ ಮುಂದೂಡಲು ಅರ್ಜಿ ಸಲ್ಲಿಸಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಚುನಾವಣಾ ಸಿದ್ಧತೆ, ಆಡಳಿತಾತ್ಮಕ ವ್ಯವಸ್ಥೆ ಹಾಗೂ ಸಿಬ್ಬಂದಿ ಲಭ್ಯತೆಯ ವಿಚಾರವನ್ನು ಸರ್ಕಾರ ಮುಂದಿಟ್ಟಿದ್ದರೂ, ವಿರೋಧ ಪಕ್ಷಗಳು ಇದನ್ನು ರಾಜಕೀಯ ಲಾಭಕ್ಕಾಗಿ ತೆಗೆದುಕೊಂಡ ನಿರ್ಧಾರ ಎಂದು ಆರೋಪಿಸುತ್ತಿವೆ. ಸರ್ಕಾರದ ಈ ನಡೆ ಚುನಾವಣಾ ವಾತಾವರಣವನ್ನು ಇನ್ನಷ್ಟು ಕಾವೇರಿಸುವಂತೆ ಮಾಡಿದೆ.
ಇದಕ್ಕೂ ಮಧ್ಯೆ ಜಿಬಿಎ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿ ಕಣಕ್ಕಿಳಿಯುವ ಲೆಕ್ಕಾಚಾರ ರಾಜ್ಯ ರಾಜಕೀಯಕ್ಕೆ ಹೊಸ ತಿರುವು ನೀಡಿದೆ. ಲೋಕಸಭೆ ಚುನಾವಣೆ ನಂತರ ಬಲಿಷ್ಠವಾಗಿರುವ ಮೈತ್ರಿ ಸಮೀಕರಣವನ್ನು ಮುಂದುವರೆಸಿ ಬೆಂಗಳೂರಿನ ರಾಜಕೀಯ ಹಿಡಿತ ಪಡೆಯಲು ಬಿಜೆಪಿ-ಜೆಡಿಎಸ್ ತಂತ್ರ ರೂಪಿಸುತ್ತಿವೆ. ಕಾಂಗ್ರೆಸ್ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸುವ ಮೂಲಕ ನಗರ ಮತದಾರರ ಅಸಮಾಧಾನವನ್ನು ಮತವಾಗಿ ಪರಿವರ್ತಿಸಿಕೊಳ್ಳುವ ಯೋಜನೆ ರೂಪಿಸಲಾಗುತ್ತಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ನಾಯಕರಿಗೆ ಈ ಚುನಾವಣೆ ಮತ್ತಷ್ಟು ಮಹತ್ವ ಪಡೆದಿದೆ.
ಜಿಬಿಎ ಚುನಾವಣೆ ಕೇವಲ ಸ್ಥಳೀಯ ಸಂಸ್ಥೆ ಚುನಾವಣೆಯಾಗಿ ಉಳಿದಿಲ್ಲ. 2028ರ ವಿಧಾನಸಭೆ ಚುನಾವಣೆಗೆ ಇದು ಸೆಮಿಫೈನಲ್ ಎನ್ನುವ ರೀತಿಯಲ್ಲಿ ರಾಜಕೀಯ ಪಕ್ಷಗಳು ನೋಡುತ್ತಿವೆ. ವಿಶೇಷವಾಗಿ ಬೆಂಗಳೂರಿನ ಮತದಾರರ ಮನಸ್ಥಿತಿ ಯಾವ ದಿಕ್ಕಿನಲ್ಲಿ ಇದೆ ಎಂಬುದನ್ನು ಅಳೆಯುವ ವೇದಿಕೆಯಾಗಿಯೂ ಈ ಚುನಾವಣೆ ಪರಿಗಣಿಸಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ಕಾಂಗ್ರೆಸ್ ತನ್ನ ಪ್ರಭಾವ ಉಳಿಸಿಕೊಂಡಿದೆಯೇ ಅಥವಾ ವಿರೋಧ ಪಕ್ಷಗಳತ್ತ ಮತದಾರರು ವಾಲ್ತಿದ್ದಾರೆಯೇ ಎಂಬುದರ ಉತ್ತರ ಈ ಚುನಾವಣೆಯಿಂದಲೇ ಸಿಗಲಿದೆ.
ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಸಮಸ್ಯೆಗಳನ್ನೇ ಬಿಜೆಪಿ ಮತ್ತು ಜೆಡಿಎಸ್ ಪ್ರಮುಖ ಅಸ್ತ್ರವಾಗಿಸಿಕೊಂಡಿವೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಾಯಕರು ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವ ಕಸರತ್ತು ನಡೆಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಇಬ್ಬರೂ ಪ್ರತ್ಯೇಕ ರಾಜಕೀಯ ಲೆಕ್ಕಾಚಾರಗಳಿದ್ದರೂ, ಚುನಾವಣೆಯಲ್ಲಿ ಪಕ್ಷದ ಗೆಲುವಿಗಾಗಿ ಒಟ್ಟಾಗಿ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಪಕ್ಷದ ಒಳಭಿನ್ನಾಭಿಪ್ರಾಯಗಳನ್ನು ಮರೆತು ಸಂಘಟನೆಯನ್ನು ಬಲಪಡಿಸುವ ಪ್ರಯತ್ನವೂ ಜೋರಾಗಿದೆ.
ಬೆಂಗಳೂರು ಸಮಸ್ಯೆಗಳೇ ವಿಪಕ್ಷಗಳಿಗೆ ಸಿಕ್ಕಿರುವ ಬ್ರಹ್ಮಾಸ್ತ್ರ
ಸಿಲಿಕಾನ್ ಸಿಟಿ ಬೆಂಗಳೂರಿನ ಜನರು ಎದುರಿಸುತ್ತಿರುವ ಸಮಸ್ಯೆಗಳೇ ಇದೀಗ ವಿರೋಧ ಪಕ್ಷಗಳಿಗೆ ಪ್ರಮುಖ ಚುನಾವಣಾ ಅಸ್ತ್ರವಾಗಿವೆ. ನಗರದಲ್ಲಿ ಮಿತಿಮೀರಿರುವ ಟ್ರಾಫಿಕ್ ಸಮಸ್ಯೆ, ಮೆಟ್ರೋ ರೈಲು ಪ್ರಯಾಣ ದರ ಏರಿಕೆ, ಅಭಿವೃದ್ಧಿ ಕಾಮಗಾರಿಗಳ ನಿಧಾನಗತಿ, ರಸ್ತೆಗಳಲ್ಲಿ ಹೆಚ್ಚುತ್ತಿರುವ ಗುಂಡಿಗಳು, ಘನತ್ಯಾಜ್ಯ ನಿರ್ವಹಣೆಯ ವೈಫಲ್ಯ ಸೇರಿದಂತೆ ಹಲವು ವಿಚಾರಗಳು ಸರ್ಕಾರದ ವಿರುದ್ಧ ಜನರ ಅಸಮಾಧಾನ ಹೆಚ್ಚಿಸುತ್ತಿವೆ. ಜೊತೆಗೆ ಇತ್ತೀಚೆಗೆ ಬೆಂಗಳೂರಿನಲ್ಲಿ ಬಂಡವಾಳ ಹೂಡಲು ಕೆಲವು ಉದ್ಯಮಿಗಳು ಹಿಂದೇಟು ಹಾಕುತ್ತಿರುವ ವಿಚಾರವೂ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ ಎಲ್ಲಾ ವಿಚಾರಗಳನ್ನು ಮುಂದಿಟ್ಟು ಬಿಜೆಪಿ-ಜೆಡಿಎಸ್ ಮೈತ್ರಿ ಕಾಂಗ್ರೆಸ್ ಸರ್ಕಾರವನ್ನು ಟಾರ್ಗೆಟ್ ಮಾಡುತ್ತಿದೆ.
ಅಧಿಕಾರ ಉಳಿಸಿಕೊಳ್ಳಲು ಸಿದ್ದು ಕಸರತ್ತು, ಅಧಿಕಾರ ಪಡೆಯಲು ಡಿಕೆ ತಂತ್ರ
ಒಂದೆಡೆ ಮುಖ್ಯಮಂತ್ರಿ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಸಿದ್ದರಾಮಯ್ಯ ರಾಜಕೀಯ ಚಾಣಾಕ್ಷತನ ಪ್ರದರ್ಶಿಸುತ್ತಿದ್ದರೆ, ಮತ್ತೊಂದೆಡೆ ಭವಿಷ್ಯದ ನಾಯಕತ್ವದತ್ತ ಕಣ್ಣಿಟ್ಟಿರುವ ಡಿ.ಕೆ. ಶಿವಕುಮಾರ್ ತಮ್ಮದೇ ರಾಜಕೀಯ ಬಲ ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಆದರೆ, ಜಿಬಿಎ ಚುನಾವಣೆಯಲ್ಲಿ ಸೋಲು ಕಂಡರೆ ಅದು ಇಬ್ಬರಿಗೂ ರಾಜಕೀಯ ಹಿನ್ನಡೆಯಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಚುನಾವಣಾ ಗೆಲುವು ಉಭಯ ನಾಯಕರಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಬೈ ಎಲೆಕ್ಷನ್ ಮಾದರಿಯೇ ಜಿಬಿಎಯಲ್ಲೂ ಕೈಗೆ ಗೆಲುವು ಸಿಗುತ್ತಾ?
ಇತ್ತೀಚಿನ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಉತ್ತಮ ಪ್ರದರ್ಶನ ನೀಡಿದ್ದ ಹಿನ್ನೆಲೆ ಅದೇ ಮಾದರಿಯನ್ನು ಜಿಬಿಎ ಚುನಾವಣೆಯಲ್ಲೂ ಪುನರಾವರ್ತಿಸಲು ಕೈ ನಾಯಕರು ತಂತ್ರ ರೂಪಿಸುತ್ತಿದ್ದಾರೆ. ಆದರೆ ಬಿಜೆಪಿ-ಜೆಡಿಎಸ್ ಮೈತ್ರಿಯ ಒಗ್ಗಟ್ಟು, ಬೆಂಗಳೂರಿನ ಜನರ ಸಮಸ್ಯೆಗಳು ಹಾಗೂ ಸರ್ಕಾರ ವಿರೋಧಿ ಅಲೆ ಕಾಂಗ್ರೆಸ್‌ಗೆ ಸವಾಲಾಗಿ ಪರಿಣಮಿಸಬಹುದು ಎನ್ನಲಾಗುತ್ತಿದೆ. ಪ್ರತಿಪಕ್ಷಗಳ ತಂತ್ರವನ್ನು ಹಣಿದು ಮತ್ತೆ ಗದ್ದುಗೆ ಉಳಿಸಿಕೊಳ್ಳಲು ಕಾಂಗ್ರೆಸ್ ಯಶಸ್ವಿಯಾಗುತ್ತದೆಯೇ ಎಂಬ ಕುತೂಹಲ ಈಗ ರಾಜ್ಯ ರಾಜಕೀಯದಲ್ಲಿ ಹೆಚ್ಚಾಗಿದೆ.
ಇದನ್ನೂ ಓದಿ : ಶೃಂಗೇರಿಯಲ್ಲಿ ಶಾಸಕ ಸ್ಥಾನಕ್ಕೆ ಹಾವು-ಏಣಿ ಆಟ!


















