ಬೆಂಗಳೂರು: ತುರ್ತು ಸಂದರ್ಭಗಳಲ್ಲಿ ಹಣದ ಅವಶ್ಯಕತೆ ಎದುರಾದಾಗ ಸಮಸ್ಯೆಯಾಗುತ್ತದೆ. ಗೆಳೆಯರು, ಸಂಬಂಧಿಕರು ಕೂಡ ಸಹಾಯ ಮಾಡುವುದಿಲ್ಲ. ಆಗ, ಸಾಲ ಪಡೆಯಲು ಗೋಲ್ಡ್ ಲೋನ್ (ಚಿನ್ನದ ಸಾಲ) ಮತ್ತು ಪರ್ಸನಲ್ ಲೋನ್ (ವೈಯಕ್ತಿಕ ಸಾಲ) ನಡುವೆ ಯಾವುದು ಉತ್ತಮ ಎಂಬ ಗೊಂದಲ ಅನೇಕರನ್ನು ಕಾಡುತ್ತದೆ. 2026ರ ಆರ್ಥಿಕ ಪರಿಸ್ಥಿತಿಯಲ್ಲಿ ಈ ಎರಡೂ ಸಾಲಗಳ ನಡುವಿನ ವ್ಯತ್ಯಾಸ ಹಾಗೂ ಬಡ್ಡಿ ದರಗಳ ನಡುವಿನ ವ್ಯತ್ಯಾಸ ತಿಳಿಯುವುದು, ಹೋಲಿಕೆ ಮಾಡುವುದು ಮುಖ್ಯವಾಗಿದೆ.
ಗೋಲ್ಡ್ ಲೋನ್ ಎಂಬುದು ಭದ್ರತಾ ಆಧಾರಿತ (Secured) ಸಾಲವಾಗಿದ್ದು, ನಿಮ್ಮ ಬಳಿಯಿರುವ ಚಿನ್ನವನ್ನು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಅಡಮಾನವಿಟ್ಟು ಪಡೆಯಬಹುದು. ಇದಕ್ಕೆ ಉತ್ತಮ ಸಿಬಿಲ್ ಸ್ಕೋರ್ ಇರಬೇಕಾದ ಅಗತ್ಯವಿರುವುದಿಲ್ಲ ಮತ್ತು ಕೆಲವೇ ಗಂಟೆಗಳಲ್ಲಿ ಸಾಲದ ಹಣ ಖಾತೆಗೆ ಜಮಾ ಆಗುತ್ತದೆ. ಅಲ್ಲದೆ, ಭದ್ರತೆ ಇರುವುದರಿಂದ ಇದರ ಬಡ್ಡಿ ದರಗಳು ಸಾಮಾನ್ಯವಾಗಿ ಕಡಿಮೆ (ಶೇ. 8.55 ರಿಂದ ಪ್ರಾರಂಭ) ಇರುತ್ತವೆ.
ಮತ್ತೊಂದೆಡೆ, ಪರ್ಸನಲ್ ಲೋನ್ ಯಾವುದೇ ಭದ್ರತೆಯಿಲ್ಲದೆ ಸಿಗುವ ಅಸುರಕ್ಷಿತ (Unsecured) ಸಾಲವಾಗಿದೆ. ಉತ್ತಮ ಸಿಬಿಲ್ ಸ್ಕೋರ್ ಮತ್ತು ಸ್ಥಿರ ಆದಾಯವಿರುವವರಿಗೆ ಇದು ಸುಲಭವಾಗಿ ಲಭ್ಯವಿದ್ದರೂ, ಇದರ ಬಡ್ಡಿ ದರಗಳು ಗೋಲ್ಡ್ ಲೋನ್ಗಿಂತ ಹೆಚ್ಚಿರುತ್ತವೆ. ಅಲ್ಲದೆ, ಸಾಲ ಮಂಜೂರಾಗಲು ಕೆಲವು ದಿನಗಳು ಬೇಕಾಗಬಹುದು.
ನಿಮಗೆ ತಕ್ಷಣವೇ ಹಣದ ತುರ್ತು ಇದ್ದು, ಕಡಿಮೆ ಬಡ್ಡಿ ದರದಲ್ಲಿ ಸಾಲ ಬೇಕಿದ್ದರೆ ಗೋಲ್ಡ್ ಲೋನ್ ಅತ್ಯುತ್ತಮ ಆಯ್ಕೆಯಾಗಿದೆ. ಯಾವುದೇ ಆಸ್ತಿಯನ್ನು ಅಡಮಾನವಿಡದೆ ದೊಡ್ಡ ಮೊತ್ತದ ಸಾಲ ಬೇಕಿದ್ದಲ್ಲಿ ಪರ್ಸನಲ್ ಲೋನ್ ಸೂಕ್ತವಾಗುತ್ತದೆ. ನಿಮ್ಮ ಅಗತ್ಯ ಹಾಗೂ ಮರುಪಾವತಿ ಸಾಮರ್ಥ್ಯಕ್ಕೆ ತಕ್ಕಂತೆ ಸರಿಯಾದ ಸಾಲವನ್ನು ಆಯ್ಕೆ ಮಾಡಿಕೊಳ್ಳುವುದು ಬುದ್ಧಿವಂತಿಕೆಯಾಗಿದೆ.
ಡಿಸ್ ಕ್ಲೇಮರ್: ಚಿನ್ನ ಹಾಗೂ ವೈಯಕ್ತಿಕ ಸಾಲದ ನಡುವಿನ ಬಡ್ಡಿದರದ ಆಧಾರದ ಮೇಲೆ ಹೋಲಿಕೆ ಮಾಡಿ ಲೇಖನ ಪ್ರಕಟಿಸಲಾಗಿದೆ. ಮಾಹಿತಿ ನೀಡುವುದಷ್ಟೇ ನಮ್ಮ ಉದ್ದೇಶ. ಯಾವುದೇ ರೀತಿಯ ಸಾಲ ಮಾಡುವ ಮುನ್ನ ಹಣಕಾಸು ತಜ್ಞರನ್ನು, ಆಯಾ ಹಣಕಾಸು ಸಂಸ್ಥೆಗಳ ಅಧಿಕಾರಿಗಳನ್ನು ಭೇಟಿ ಮಾಡುವುದು ಒಳ್ಳೆಯದು.



















