ಬೆಂಗಳೂರು: ಕೇಂದ್ರ ಹಣಕಾಸು ಸಚಿವಾಲಯವು ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕಕ್ಕೆ, ಅಂದರೆ ಅಕ್ಟೋಬರ್ 1 ರಿಂದ ಡಿಸೆಂಬರ್ 31ರವರೆಗಿನ ಅವಧಿಗೆ ಸಣ್ಣ ಉಳಿತಾಯ ಯೋಜನೆಗಳ (Small Savings Schemes) ಬಡ್ಡಿದರಗಳನ್ನು ಪ್ರಕಟಿಸಿದೆ. ದೇಶದ ಕೋಟ್ಯಂತರ ಹೂಡಿಕೆದಾರರಿಗೆ ಸಿಹಿ ಸುದ್ದಿ ನೀಡಿರುವ ಸರ್ಕಾರವು, ಪ್ರಮುಖ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆ ಮಾಡದೆ ಹಳೆಯ ದರಗಳನ್ನೇ ಮುಂದುವರಿಸಲು ನಿರ್ಧರಿಸಿದೆ.
ಇದರೊಂದಿಗೆ, ಕಳೆದ ಹಲವಾರು ತ್ರೈಮಾಸಿಕಗಳಿಂದ ಜಾರಿಯಲ್ಲಿರುವ ಬಡ್ಡಿದರಗಳೇ ಮುಂದಿನ ಮೂರು ತಿಂಗಳಿಗೂ ಮುಂದುವರಿಯಲಿವೆ. ಸುರಕ್ಷಿತ ಹೂಡಿಕೆಯನ್ನು ಬಯಸುವವರಿಗೆ ಇದು ಅತ್ಯಂತ ಮಹತ್ವದ ಬೆಳವಣಿಗೆಯಾಗಿದೆ. ಹಣದುಬ್ಬರ, ಜಾಗತಿಕ ಸಂಘರ್ಷದ ಹಿನ್ನೆಲೆಯಲ್ಲಿ ಬಡ್ಡಿದರದಲ್ಲಿ ಇಳಿಕೆ ಮಾಡುವ ನಿರೀಕ್ಷೆ ಇತ್ತು. ಆದರೆ, ಯಥಾಸ್ಥಿತಿ ಮುಂದುವರಿದಿರುವ ಕಾರಣ ಜನರಿಗೆ ಇದ್ದ ಆತಂಕ ಇಲ್ಲದಂತಾಗಿದೆ. ಅಕ್ಟೋಬರ್ 1ರಿಂದಲೇ ಬಡ್ಡಿದರ ಅನ್ವಯವಾಗಲಿದೆ.
ಪ್ರಮುಖ ಉಳಿತಾಯ ಯೋಜನೆಗಳ ಬಡ್ಡಿದರ
• ಸುಕನ್ಯಾ ಸಮೃದ್ಧಿ ಯೋಜನೆ: ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ರೂಪಿಸಲಾದ ಈ ಜನಪ್ರಿಯ ಯೋಜನೆಯ ಬಡ್ಡಿ ದರವು ಶೇ.8.20ರಷ್ಟು ಇದೆ.
• ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS): ಹಿರಿಯ ನಾಗರಿಕರಿಗೆ ಆರ್ಥಿಕ ಭದ್ರತೆ ನೀಡುವ ಈ ಯೋಜನೆಯಡಿ ಶೇ.8.20ರಷ್ಟು ಬಡ್ಡಿ ಸಿಗಲಿದೆ.
• ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC): ಈ ತೆರಿಗೆ ಉಳಿತಾಯ ಹೂಡಿಕೆ ಯೋಜನೆಯು ಶೇ.7.70ರಷ್ಟು ಬಡ್ಡಿದರ ಹೊಂದಿದೆ.
• ಕಿಸಾನ್ ವಿಕಾಸ್ ಪತ್ರ (KVP): ನಿರ್ದಿಷ್ಟಾವಧಿಯಲ್ಲಿ ಹಣ ದ್ವಿಗುಣಗೊಳಿಸುವ ಈ ಯೋಜನೆಯ ಬಡ್ಡಿ ದರ ಶೇ.7.50 ರಷ್ಟಿದೆ.
• ಸಾರ್ವಜನಿಕ ಭವಿಷ್ಯ ನಿಧಿ (PPF): ದೀರ್ಘಕಾಲಿಕ ಉಳಿತಾಯಕ್ಕೆ ಹೆಸರುವಾಸಿಯಾದ ಪಿಪಿಎಫ್ ಮೇಲಿನ ಬಡ್ಡಿ ದರವು ಎಂದಿನಂತೆ ಶೇ.7.10ರಲ್ಲೇ ಮುಂದುವರಿಯಲಿದೆ.
• ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (MIS): ಸ್ಥಿರ ಮಾಸಿಕ ಆದಾಯ ಬಯಸುವವರಿಗೆ ಶೇ.7.40ರಷ್ಟು ಬಡ್ಡಿ ದೊರೆಯಲಿದೆ.



















