ಬೆಂಗಳೂರು : ‘ಒರಟ’, `ಕೋರ’ದಂಥಾ ಸಿನಿಮಾಗಳ ಮೂಲಕ ಭಿನ್ನ ನಿರ್ದೇಶಕರಾಗಿ ಗುರುತಿಸಿಕೊಂಡಿರೋ ಒರಟಶ್ರೀ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ಶಬರಿ’. ಇದೀಗ ಪತ್ರಿಕಾಗೋಷ್ಠಿಯ ಮೂಲಕ ಈ ಸಿನಿಮಾದ ಟೀಸರ್ ನ್ನ ಲಹರಿವೇಲು ಬಿಡುಗಡೆಗೊಳಿಸಿದ್ದಾರೆ. ಒರಟಶ್ರೀ ಸೇರಿದಂತೆ ಚಿತ್ರತಂಡ ಈ ಸಂದರ್ಭದಲ್ಲಿ ಹಾಜರಿದ್ದು, ಶಬರಿಯ ಬಗೆಗಿನ ಒಂದಷ್ಟು ಆಸಕ್ತಿಕರ ವಿಚಾರಗಳನ್ನ ಹಂಚಿಕೊಂಡಿದ್ದಾರೆ.
ಈ ಟೀಸರ್ ಬಿಡುಗಡೆಯ ವೇದಿಕೆಯಲ್ಲಿ ಲಹರಿ ಸಂಸ್ಥೆಯ ಮುಖ್ಯಸ್ಥರಾದ ಲಹರಿ ವೇಲು, ರಾಷ್ಟ್ರ ಪ್ರಶಸ್ತಿ ವಿಜೇತ ತಲೆದಂಡ ಚಿತ್ರದ ನಿರ್ದೇಶಕರಾದ ಪ್ರವೀಣ್ ಕೃಪಾಕರ್ ಮತ್ತು ಕಾಮನ್ ಮ್ಯಾನ್ ಚಿತ್ರದ ನಿರ್ಮಾಪಕ ನರಸಿಂಹ ಮೂರ್ತಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಶಬರಿಯ ಟೀಸರ್ ಬಿಡುಗಡೆ ಮಾಡಿ ಮಾತನಾಡಿದ ಲಹರಿ ವೇಲು ‘ಒರಟ ಶ್ರೀ ಅತೀವ ಸಿನಿಮಾ ಪ್ರೇಮ ಹೊಂದಿರುವ ನಿರ್ದೇಶಕ. ಅವರು ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಇದರ ಹಾಡುಗಳೂ ಕೂಡಾ ಚೆನ್ನಾಗಿರೋದರಿಂದಲೇ ಲಹರಿ ಸಂಸ್ಥೆ ಆಡಿಯೋ ಹಕ್ಕುಗಳನ್ನು ಖರೀದಿಸಿದೆ’ ಅನ್ನುತ್ತಲೇ ಚಿತ್ರತಂಡಕ್ಕೆ ಶುಭಕೋರಿದರು. ನಿರ್ದೇಶಕ ಒರಟ ಶ್ರೀ ಆರಂಭದಲ್ಲಿಯೇ ಇಂತಿಷ್ಟು ಬಜೆಟ್ಟಿನಲ್ಲಿ ಸಿನಿಮಾ ಮುಗಿಸೋದಾಗಿ ಅಗ್ರಿಮೆಂಟ್ ಮಾಡಿಕೊಂಡಿದ್ದರಂತೆ. ಅದಕ್ಕೆ ತಕ್ಕುದಾಗಿ ಶಬರಿಯನ್ನು ರೂಪುಗೊಳಿಸಿರೋದು ವಿಶೇಷ.
ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿರು ರಮೇಶ್, ಸುಧಾಕರ್ ರೆಡ್ಡಿ ಮತ್ತು ವಿಷ್ಣುಕಾಂತ್ ಎ ಸೇರಿಕೊಂಡು ಭಾರವಿ ಫಿಲಂಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮೂವರು ನಿರ್ಮಾಪಕರು ತಮ್ಮ ಅನುಭವಗಳನ್ನು ಹಂಚಿಕೊಂಡರು. ನಾಯಕ ನಟ ಸಮರ್ಥ್, ನಾಯಕಿ ಕೃತಿಕಾ ಗೌಡ, ರಾಣಿ ಸೀರಿಯಲ್ ಖ್ಯಾತಿ ಬಾಲನಟಿ ಧನ್ವಿ, ನೀನಾಸಂ ಅಶ್ವತ್, ಒರಟ ಶ್ರೀ ಸೇರಿದಂತೆ ಚಿತ್ರತಂಡ ಈ ಪತ್ರಿಕಾಗೋಷ್ಠಿಯಲ್ಲಿ ತಂತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಒರಟಶ್ರೀ ಬಹುದೊಡ್ಡ ತಾರಾಗಣದ ಮೂಲಕ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಒಂದು ಜೀಪು, ಪುಟ್ಟ ಹುಡುಗಿ ಸೇರಿದಂತೆ ಒಂದಷ್ಟು ಅಂಶಗಳನ್ನು ಮಾತ್ರವೇ ಪ್ರೇಕ್ಷಕರೆದುರು ತೆರೆದಿಟ್ಟು, ನಿಜವಾದ ‘ಶಬರಿ’ ಯಾರೆಂಬ ಕುತೂಹಲವನ್ನು ಚಿತ್ರತಂಡ ಕಾಯ್ದಿಟ್ಟುಕೊಂಡಿದೆ. ಸಸ್ಪೆನ್ಸ್, ಥ್ರಿಲ್ಲರ್, ಮಿಸ್ಟ್ರಿ ಸೇರಿದಂತೆ ಅನೇಕ ಅಂಶಗಳಿರೋ ಈ ಸಿನಿಮಾ ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಎಂಬ ವಿಚಾರವನ್ನೂ ಚಿತ್ರತಂಡ ಹಂಚಿಕೊಂಡಿದೆ.
ಒರಟ ಶ್ರೀ ನಿರ್ದೇಶನವಿರುವ ಈ ಚಿತ್ರದಲ್ಲಿ ಸಮರ್ಥ್ ಮತ್ತು ಕೃತಿಕಾ ಗೌಡ ನಯಕ ನಾಯಕಿಯರಾಗಿ ನಟಿಸಿದ್ದಾರೆ. ಧನ್ವಿ, ಎಂ.ಕೆ ಮಠ, ನೀನಾಸಂ ಅಶ್ವತ್, ಸೀತಾ ಹರ್ಷವರ್ಧನ್, ಯೋಗೇಶ್ ವೀರ್, ಮಂಡ್ಯ ಸಿದ್ದು ಮುಂತಾದವರ ತಾರಾಗಣವಿದೆ. ಬಿ.ಆರ್ ಹೇಮಂತ್ ಕುಮಾರ್ ಸಂಗೀತ ನಿರ್ದೇಶನ, ಸಾಮ್ರಾಟ್ ನಾಗರಾಜ್ ಛಾಯಾಗ್ರಹಣ, ಕೆ ಗಿರೀಶ್ ಕುಮಾರ್ ಸಂಕಲನ ಈ ಚಿತ್ರಕ್ಕಿದೆ.
ಇದನ್ನೂ ಓದಿ : ಮೃತದೇಹ ಹೊತ್ತು ಹೊಳೆ ದಾಟಿದ ಕುಟುಂಬಸ್ಥರು – ಈ ಗ್ರಾಮದ ಮೂಲಭೂತ ಸಮಸ್ಯೆಗೆ ಅಂತ್ಯಕ್ರಿಯೆ ಯಾವಾಗ?



















