ಮುಂಬೈ/ಪಣಜಿ:
ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಷ್ಕರಣೆ’ (ಎಸ್ಐಆರ್) ಪ್ರಕ್ರಿಯೆಯಡಿ ಮತದಾರರ ಹೆಸರುಗಳನ್ನು ತೆಗೆದುಹಾಕುತ್ತಿರುವುದಕ್ಕೆ ಮುಂಬೈ ಹೈಕೋರ್ಟ್ನ ಗೋವಾ ಪೀಠವು ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಪ್ರಕ್ರಿಯೆಯಿಂದಾಗಿ ದೇಶದ ನಾಗರಿಕರು ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ಅಥವಾ ಮರುಸ್ಥಾಪಿಸಲು ಯಾವುದೇ ಸ್ಪಷ್ಟ ಕಾನೂನು ಮಾರ್ಗವಿಲ್ಲದೆ ಇಕ್ಕಟ್ಟಿನ ಪರಿಸ್ಥಿತಿಗೆ (ಕ್ಯಾಚ್-22) ಸಿಲುಕಿದ್ದಾರೆ ಎಂದು ನ್ಯಾಯಪೀಠ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ತಾಂತ್ರಿಕ ಅಡಚಣೆಯಿಂದ ಸಂಕಷ್ಟಕ್ಕೀಡಾದ ಕುಟುಂಬ
ಸಾಂತಾಕ್ರೂಜ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹೊಸ ಮನೆಗೆ ಸ್ಥಳಾಂತರಗೊಂಡ ನಂತರ ಮತದಾರರ ಪಟ್ಟಿಯಿಂದ ತಮ್ಮ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ಆರೋಪಿಸಿ ಪರೇಶ್ ಸಲ್ಗಾಂವ್ಕರ್ ಮತ್ತು ಅವರ ಕುಟುಂಬದ ಐವರು ಸದಸ್ಯರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಮಿತ್ ಎಸ್. ಜಮ್ಸಾಂಡೇಕರ್ ಹಾಗೂ ವಾಲ್ಮೀಕಿ ಮೆನೆಜಸ್ ಅವರಿದ್ದ ವಿಭಾಗೀಯ ಪೀಠವು ಈ ಪ್ರಮುಖ ಅವಲೋಕನ ಮಾಡಿದೆ. ಅರ್ಜಿದಾರರು ತಮ್ಮ ವಿಳಾಸ ಬದಲಾವಣೆಗಾಗಿ ‘ಫಾರ್ಮ್ 8’ ಮೂಲಕ ಅರ್ಜಿ ಸಲ್ಲಿಸಿದ್ದರೂ, ಸಾಫ್ಟ್ವೇರ್ ಮತ್ತು ‘ಇಆರ್ಒನೆಟ್’ (ERONET) ವ್ಯವಸ್ಥೆಯ ತಾಂತ್ರಿಕ ಮಿತಿಗಳಿಂದಾಗಿ ಅವರ ಅರ್ಜಿಗಳನ್ನು ತಿರಸ್ಕರಿಸಲಾಗಿತ್ತು.
ಆಯೋಗದ ಸೂಚನೆಗೆ ನ್ಯಾಯಪೀಠ ಕಿಡಿ
ಅರ್ಜಿ ತಿರಸ್ಕರಿಸಲ್ಪಟ್ಟ ನಂತರ, ಮೊದಲ ಬಾರಿಗೆ ಮತದಾರರಾಗಿ ನೋಂದಾಯಿಸಿಕೊಳ್ಳುವವರಿಗೆ ಸೀಮಿತವಾದ ‘ಫಾರ್ಮ್ 6’ ಅನ್ನು ಭರ್ತಿ ಮಾಡುವಂತೆ ಚುನಾವಣಾ ಅಧಿಕಾರಿಗಳು ಈ ಕುಟುಂಬಕ್ಕೆ ಸೂಚಿಸಿದ್ದರು. ಚುನಾವಣಾ ಆಯೋಗದ ಈ ನಿಲುವನ್ನು ಕಠಿಣವಾಗಿ ಟೀಕಿಸಿದ ಹೈಕೋರ್ಟ್, ಈಗಾಗಲೇ ಮತದಾರರಾಗಿರುವ ನಾಗರಿಕರನ್ನು ಹೊಸ ಅರ್ಜಿ ಸಲ್ಲಿಸುವಂತೆ ಒತ್ತಾಯಿಸುವುದು ಕಾನೂನುಬಾಹಿರ ಹಾಗೂ ಅಪರಾಧ ಎನಿಸಿಕೊಳ್ಳಬಹುದು ಎಂದು ಎಚ್ಚರಿಸಿತು. ಮತದಾರರ ನೋಂದಣಿ ನಿಯಮಗಳು 1960 ರ ನಿಯಮ 21 ಅನ್ನು ಉಲ್ಲೇಖಿಸಿದ ನ್ಯಾಯಪೀಠ, ಪಟ್ಟಿಯಿಂದ ಹೆಸರು ತೆಗೆದುಹಾಕುವ ಮೊದಲು ಮತದಾರರಿಗೆ ವಿಚಾರಣೆಯ ಅವಕಾಶ ನೀಡಬೇಕಾದುದು ಅಧಿಕಾರಿಗಳ ಶಾಸನಬದ್ಧ ಕರ್ತವ್ಯವಾಗಿದೆ ಎಂದು ನೆನಪಿಸಿತು.
“ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯಬಾರದು”: ಹೈಕೋರ್ಟ್ ಖಡಕ್ ಎಚ್ಚರಿಕೆ
ತಾಂತ್ರಿಕ ಕಾರಣಗಳಿಂದಾಗಿ ಅರ್ಹ ಮತದಾರರೇ ಪಟ್ಟಿಯಿಂದ ಹೊರಗುಳಿಯುತ್ತಿದ್ದರೆ ಎಸ್ಐಆರ್ ಪ್ರಕ್ರಿಯೆಯ ಉದ್ದೇಶವೇನು ಎಂದು ಪೀಠ ಪ್ರಶ್ನಿಸಿತು. ಆಯೋಗದ ಮಾರ್ಗಸೂಚಿಗಳ ಪ್ರಕಾರ ಯಾವುದೇ ಅರ್ಹ ನಾಗರಿಕನೂ ಮತದಾರರ ಪಟ್ಟಿಯಿಂದ ವಂಚಿತನಾಗಬಾರದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ಆಯೋಗದ ಪರವಾಗಿ ವಾದ ಮಂಡಿಸಿದ ವಕೀಲ ಗೌರೀಶ್ ಅಗ್ನಿ, ಒಂದು ಕ್ಷೇತ್ರದಿಂದ ಮತ್ತೊಂದಕ್ಕೆ ಸ್ಥಳಾಂತರಗೊಳ್ಳುವಾಗ ‘ಫಾರ್ಮ್ 8’ ಜೊತೆಗೆ ಗುರುತಿನ ಚೀಟಿ (EPIC) ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಪೀಠಕ್ಕೆ ತಿಳಿಸಿದರು.
ಇದನ್ನೂ ಓದಿ :CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಪಟ್ಟು: ಬೀದಿಗಿಳಿದ ವಿಪಕ್ಷಗಳು, ರಾಹುಲ್ ಗಾಂಧಿ ಧರಣಿ!


















