ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷಗಳ ‘ಇಂಡಿಯಾ’ ಒಕ್ಕೂಟ ತನ್ನ ಹೋರಾಟವನ್ನು ತೀವ್ರಗೊಳಿಸಿದೆ. ಇಂದು ಬೆಳಿಗ್ಗೆ ಸಂಸತ್ತಿನ ಮಕರ ದ್ವಾರದಿಂದ ಚುನಾವಣಾ ಆಯೋಗದ ಪ್ರಧಾನ ಕಚೇರಿಯಾದ ನಿರ್ವಾಚನ ಸದನದವರೆಗೆ ಪ್ರತಿಪಕ್ಷಗಳ ಸಂಸದರು ಬೃಹತ್ ಪಾದಯಾತ್ರೆ ನಡೆಸಿದರು. “ಪ್ರಜಾಪ್ರಭುತ್ವ ಉಳಿಸಿ” ಎಂಬ ಭಿತ್ತಿಪತ್ರಗಳನ್ನು ಹಿಡಿದು, ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಆಯೋಗದ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ರಸ್ತೆಯಲ್ಲೇ ವಿಪಕ್ಷ ನಾಯಕನ ಧರಣಿ
ಪಾದಯಾತ್ರೆಯು ನಿರ್ವಾಚನ ಸದನದತ್ತ ಸಾಗುತ್ತಿದ್ದಂತೆ ಪೊಲೀಸರು ಬ್ಯಾರಿಕೇಡ್ ಗಳನ್ನು ಹಾಕಿ, ಸಂಸದರನ್ನು ತಡೆದರು. ಇದರಿಂದ ಆಕ್ರೋಶಗೊಂಡ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ರಸ್ತೆಯಲ್ಲೇ ಕುಳಿತು ಧರಣಿ ಆರಂಭಿಸಿದ್ದು, ದೆಹಲಿಯಲ್ಲಿ ಭಾರೀ ಹೈಡ್ರಾಮಾ ಆರಂಭವಾಗಿದೆ. ಜ್ಞಾನೇಶ್ ಕುಮಾರ್ ವಿರುದ್ಧದ ಈ ಹೋರಾಟಕ್ಕೆ ಈಗಾಗಲೇ ಯುವ ಪೀಳಿಗೆ, ವಿದ್ಯಾರ್ಥಿ ಸಂಘಟನೆಗಳು ಹಾಗೂ ಕಾಕ್ರೋಚ್ ಜನತಾ ಪಾರ್ಟಿ ಬೆಂಬಲ ಸೂಚಿಸಿವೆ. ಆದರೆ, ವಿಪಕ್ಷ ಒಕ್ಕೂಟದ ಪ್ರಮುಖ ಪಾಲುದಾರ ಪಕ್ಷಗಳಾದ ತಮಿಳುನಾಡಿನ ಡಿಎಂಕೆ ಹಾಗೂ ದೆಹಲಿಯ ಆಮ್ ಆದ್ಮಿ ಪಾರ್ಟಿ (ಆಪ್) ಈ ಪಾದಯಾತ್ರೆಯಿಂದ ದೂರ ಉಳಿದಿರುವುದು ಕಂಡುಬಂದಿದೆ.
ಚುನಾವಣಾ ಆಯೋಗವಲ್ಲ ‘ಚೀಟಿಂಗ್ ಕಮಿಷನ್’
ಚುನಾವಣಾ ಆಯೋಗವನ್ನು ‘ಚೀಟಿಂಗ್ ಕಮಿಷನ್’ ಎಂದು ಕರೆದಿರುವ ಕಾಂಗ್ರೆಸ್, ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದವರೆಗೆ ಈ ವಿಷಯವನ್ನು ಜೀವಂತವಾಗಿಡಲು ಸರಣಿ ಹೋರಾಟದ ನಕ್ಷೆಯನ್ನು ಸಿದ್ಧಪಡಿಸಿದೆ. ಅಕ್ಟೋಬರ್ 10 ರಿಂದ 20 ರವರೆಗೆ ಬ್ಲಾಕ್ ಮಟ್ಟದಲ್ಲಿ “ವೋಟ್ ಬಚಾವೋ, ದೇಶ್ ಬಚಾವೋ” (ಮತ ಉಳಿಸಿ, ದೇಶ ಉಳಿಸಿ) ಅಭಿಯಾನ ನಡೆಯಲಿದ್ದು, ಬೈಕ್ ರ್ಯಾಲಿ, ಜ್ಞಾನೇಶ್ ಕುಮಾರ್ ಅವರ ಪೋಸ್ಟರ್ ಮತ್ತು ಕರಪತ್ರ ಹಂಚಿಕೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.ಇದರ ಜೊತೆಗೆ, ಅಕ್ಟೋಬರ್ 25 ರಿಂದ ನವೆಂಬರ್ 25 ರವರೆಗೆ ಬೂತ್ ಮಟ್ಟದಲ್ಲಿ “ವೋಟ್ ಬಚಾವೋ ಚೌಪಾಲ್” ಸಭೆಗಳು ಜರುಗಲಿವೆ. ನವೆಂಬರ್ 1 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಸಮಾವೇಶ ಹಾಗೂ ನವೆಂಬರ್ 25-26 ರಂದು ದೆಹಲಿಯ ಸುತ್ತಮುತ್ತಲಿನ ಪ್ರದೇಶಗಳಿಂದ ‘ಚಲೋ ದೆಹಲಿ’ ಪಾದಯಾತ್ರೆಗಳು ನಡೆಯಲಿದ್ದು, ನವೆಂಬರ್ 26 ರ ಸಂವಿಧಾನ ದಿನದಂದು ಇವೆಲ್ಲವೂ ದೆಹಲಿಯಲ್ಲಿ ಸಂಗಮಗೊಳ್ಳಲಿವೆ.
ಸುಪ್ರೀಂ ಕೋರ್ಟ್ ವಿಚಾರಣೆ
ನವೆಂಬರ್ 26 ರ ನಂತರ ಪ್ರಾರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಜ್ಞಾನೇಶ್ ಕುಮಾರ್ ವಿರುದ್ಧ ಮಹಾಭಿಯೋಗ ಪ್ರಸ್ತಾಪ (Impeachment Motion) ಮಂಡಿಸಲು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ನಿರ್ಧರಿಸಿವೆ. ಇನ್ನೊಂದೆಡೆ, ಈ ಪ್ರಕರಣವು ಸುಪ್ರೀಂ ಕೋರ್ಟ್ ಅಂಗಳದಲ್ಲೂ ವಿಚಾರಣೆಯಲ್ಲಿದ್ದು, ಮುಖ್ಯ ನ್ಯಾಯಮೂರ್ತಿಗಳ ಪೀಠವು ಜ್ಞಾನೇಶ್ ಕುಮಾರ್ ಹಾಗೂ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ. ಆಯೋಗದ ನಿರ್ಧಾರಗಳು ಸರ್ವಸಮ್ಮತವಾಗಿಲ್ಲದಿದ್ದರೆ ಅವುಗಳಿಗೆ ತಡೆ ನೀಡಬೇಕಾಗಬಹುದು ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿದೆ. ಆದಾಗ್ಯೂ, ಪತ್ರಿಕಾ ವರದಿಗಳನ್ನು ಮಾತ್ರವೇ ಆಧರಿಸಿ ತಕ್ಷಣದ ಕ್ರಮ ಕೈಗೊಳ್ಳಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ವಿಚಾರಣೆಯನ್ನು ಕಾಯ್ದಿರಿಸಿದೆ.


















