ನವದೆಹಲಿ : ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಬದಲಾವಣೆಯ ಸುನಾಮಿಯೇ ಅಬ್ಬರಿಸಲಿದ್ದು, ಕಳೆದ 15 ವರ್ಷಗಳಿಂದ ನಿರಂತರವಾಗಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕೋಟೆಗೆ ಬಿಜೆಪಿ ಲಗ್ಗೆ ಇಡುವ ಸಾಧ್ಯತೆ ದಟ್ಟವಾಗಿದೆ. ‘ಟುಡೇಸ್ ಚಾಣಕ್ಯ’ ಬಿಡುಗಡೆ ಮಾಡಿರುವ ಮತಗಟ್ಟೆ ಸಮೀಕ್ಷೆಯು (ಎಕ್ಸಿಟ್ ಪೋಲ್) ಬಂಗಾಳದಲ್ಲಿ ಕೇಸರಿ ಪಡೆಗೆ 192ಕ್ಕೂ ಅಧಿಕ ಸ್ಥಾನಗಳು ಒಲಿಯಲಿವೆ ಎಂದು ಭವಿಷ್ಯ ನುಡಿದಿದೆ.
ಮಮತಾ ಬ್ಯಾನರ್ಜಿ ನೇತೃತ್ವದ ಆಡಳಿತಾರೂಢ ಟಿಎಂಸಿ ಪಕ್ಷವು 100ರ ಆಸುಪಾಸಿನ ಸ್ಥಾನಗಳಿಗೆ ತೃಪ್ತಿಪಡಬೇಕಾಗಬಹುದು ಹಾಗೂ ಶೇ.38ರಷ್ಟು ಮತಗಳಿಕೆಯೊಂದಿಗೆ ತೀವ್ರ ಹಿನ್ನಡೆ ಅನುಭವಿಸಲಿದೆ ಎಂದು ಈ ಸಮೀಕ್ಷೆ ತಿಳಿಸಿದೆ. ಇತರ ಪಕ್ಷಗಳು ಕೇವಲ 2 ಸ್ಥಾನಗಳನ್ನು ಪಡೆಯಲಿವೆ. 294 ಕ್ಷೇತ್ರಗಳ ವಿಧಾನಸಭೆಯಲ್ಲಿ ಮ್ಯಾಜಿಕ್ ನಂಬರ್ 147 ಆಗಿದ್ದು, ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಲಿದೆ ಎಂದು ಅಂದಾಜಿಸಲಾಗಿದೆ.
ಬಹುತೇಕ ಸಮೀಕ್ಷೆಗಳಲ್ಲಿ ಬಿಜೆಪಿಗೆ ಮಣೆ
ಏ.23 ಮತ್ತು 29ರಂದು ಎರಡು ಹಂತಗಳಲ್ಲಿ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಶೇ.90ಕ್ಕೂ ಹೆಚ್ಚು ದಾಖಲೆಯ ಮತದಾನವಾಗಿತ್ತು. ಈ ಬೃಹತ್ ಮತದಾನವು 15 ವರ್ಷಗಳ ಟಿಎಂಸಿ ಆಡಳಿತದ ಬದಲಾವಣೆಯ (ಪೊರಿಬೋರ್ತನ್) ಸಂಕೇತ ಎಂದು ಬಿಜೆಪಿ ಬಣ್ಣಿಸಿತ್ತು. ಟುಡೇಸ್ ಚಾಣಕ್ಯ ಮಾತ್ರವಲ್ಲದೆ, ಮ್ಯಾಟ್ರಿಜ್, ಪಿ-ಮಾರ್ಕ್, ಚಾಣಕ್ಯ ಸ್ಟ್ರಾಟಜೀಸ್ ಮತ್ತು ಪೋಲ್ ಡೈರಿಯಂತಹ ಬಹುತೇಕ ಸಮೀಕ್ಷೆಗಳು ಬಿಜೆಪಿಗೆ ಸ್ಪಷ್ಟ ಜಯದ ಮುನ್ಸೂಚನೆ ನೀಡಿವೆ.
ಆದರೆ, ಪೀಪಲ್ಸ್ ಪಲ್ಸ್ ಮತ್ತು ಜನಮತ್ ಪೋಲ್ಸ್ ಸಮೀಕ್ಷೆಗಳು ಟಿಎಂಸಿ ಅಧಿಕಾರ ಉಳಿಸಿಕೊಳ್ಳಲಿದೆ ಎಂದು ಹೇಳಿದ್ದರೆ, ಜೆವಿಸಿ ಸಮೀಕ್ಷೆಯು ಉಭಯ ಪಕ್ಷಗಳ ನಡುವೆ ತೀವ್ರ ಪೈಪೋಟಿ ನಡೆಯಲಿದೆ ಎಂದು ಭವಿಷ್ಯ ನುಡಿದಿದೆ. 2021ರ ಚುನಾವಣೆಯಲ್ಲೂ ಎಕ್ಸಿಟ್ ಪೋಲ್‌ಗಳು ತೀವ್ರ ಪೈಪೋಟಿಯ ಭವಿಷ್ಯ ನುಡಿದಿದ್ದರೂ, ಅಂತಿಮವಾಗಿ ಟಿಎಂಸಿ 215 ಸ್ಥಾನಗಳನ್ನು ಗೆದ್ದು ಅಚ್ಚರಿ ಮೂಡಿಸಿತ್ತು ಹಾಗೂ ಬಿಜೆಪಿ 77 ಸ್ಥಾನಗಳಿಗೆ ತೃಪ್ತಿಪಟ್ಟಿತ್ತು. ಮೇ 4ರಂದು ನಡೆಯಲಿರುವ ಮತ ಎಣಿಕೆಯ ನಂತರವಷ್ಟೇ ಸ್ಪಷ್ಟ ಚಿತ್ರಣ ಹೊರಬೀಳಲಿದೆ.
ಅಸ್ಸಾಂನಲ್ಲಿ ಎನ್‌ಡಿಎ ಪ್ರಾಬಲ್ಯ ಮುಂದುವರಿಕೆ
ಟುಡೇಸ್ ಚಾಣಕ್ಯ ಸಮೀಕ್ಷೆಯ ಪ್ರಕಾರ, ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ತನ್ನ ಹಿಡಿತವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ. ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟವು ಶೇ.50ರಷ್ಟು ಬೃಹತ್ ಮತಗಳಿಕೆಯೊಂದಿಗೆ 102 ಸ್ಥಾನಗಳನ್ನು ಗೆಲ್ಲುವ ಮೂಲಕ ಭಾರಿ ಬಹುಮತದೊಂದಿಗೆ ಸತತ ಮೂರನೇ ಬಾರಿಗೆ ಅಧಿಕಾರಕ್ಕೇರಲಿದೆ ಎಂದು ವಿಶ್ಲೇಷಿಸಲಾಗಿದೆ.
ತಮಿಳುನಾಡಿನಲ್ಲಿ ಡಿಎಂಕೆ, ಕೇರಳದಲ್ಲಿ ಯುಡಿಎಫ್‌ಗೆ ಒಲವು
ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಾದ ತಮಿಳುನಾಡು ಮತ್ತು ಕೇರಳದ ಚುನಾವಣಾ ಚಿತ್ರಣವನ್ನೂ ಸಮೀಕ್ಷೆ ತೆರೆದಿಟ್ಟಿದೆ. ತಮಿಳುನಾಡಿನಲ್ಲಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಮೈತ್ರಿಕೂಟವು ಅಧಿಕಾರವನ್ನು ಉಳಿಸಿಕೊಳ್ಳುವ ಲಕ್ಷಣಗಳು ನಿಚ್ಚಳವಾಗಿವೆ. ಆದರೆ, ಖ್ಯಾತ ನಟ ವಿಜಯ್ ಅವರ ‘ಟಿವಿಕೆ’ ಪಕ್ಷದ ನಾಟಕೀಯ ರಾಜಕೀಯ ಪ್ರವೇಶವು ಈ ಬಾರಿಯ ಚುನಾವಣೆಯ ಪ್ರಮುಖ ಆಕರ್ಷಣೆಯಾಗಿದೆ. ಇನ್ನು ಕೇರಳದಲ್ಲಿ ಹಾಲಿ ಎಲ್‌ಡಿಎಫ್ ಸರ್ಕಾರವನ್ನು ಹಿಂದಿಕ್ಕಿ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟವು 69 (ಪ್ಲಸ್ ಅಥವಾ ಮೈನಸ್ 9) ಸ್ಥಾನಗಳೊಂದಿಗೆ ಮುನ್ನಡೆ ಸಾಧಿಸಿ ಅಧಿಕಾರಕ್ಕೇರುವ ಅಂದಾಜಿದೆ.
ಇದನ್ನೂ ಓದಿ : ಬೆಂಗಳೂರಿನ ಆಸ್ತಿ ತೆರಿಗೆದಾರರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಸಿಹಿ ಸುದ್ದಿ!



















