ಹೈದರಾಬಾದ್ : ಭಾರತದ ಪರ ಹೇಳಿಕೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದ ಯೂಟ್ಯೂಬರ್ ನ್ಯಾನ್ಸಿ ಗ್ರೆವಾಲ್ ಅವರನ್ನು ದುಷ್ಕರ್ಮಿಗಳು ಕೆನಡಾದಲ್ಲಿ ಹತ್ಯೆ ಮಾಡಿದ್ದಾರೆ.
ನ್ಯಾನ್ಸಿ ಅವರ ಮೇಲೆ ಹಲ್ಲೆ ಮಾಡಿ ಹರಿತವಾದ ವಸ್ತುಗಳಿಂದ ಇರಿಯಲಾಗಿದೆ. ತೀವ್ರ ಗಾಯಗೊಂಡ ಅವರನ್ನು ಅಲ್ಲಿನ ಎಸೆಕ್ಸ್ ವಿಂಡ್ಸರ್ ತುರ್ತು ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಯ ವೇಳೆ ಅವರು ನಿಧನರಾಗಿದ್ದಾರೆ ಎಂದು ಕೆನಡಾದ ಅಧಿಕಾರಿಗಳು ತಿಳಿಸಿದ್ದಾರೆ.
ನ್ಯಾನ್ಸಿ ಗ್ರೆವಾಲ್ ಅವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ತೀಕ್ಷ್ಣ ಹೇಳಿಕೆ, ಪೋಸ್ಟ್ಗಳಿಂದ ಹೆಸರುವಾಸಿಯಾಗಿದ್ದರು. ಈವರೆಗೂ ಯಾವುದೇ ಶಂಕಿತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆಯೇ? ಇಲ್ಲವೇ ಎಂಬುದನ್ನು ಪೊಲೀಸರು ಇನ್ನೂ ದೃಢಪಡಿಸಿಲ್ಲ. ನ್ಯಾನ್ಸಿ ಗ್ರೆವಾಲ್ 6 ದಿನಗಳ ಹಿಂದೆ (ಫೆಬ್ರವರಿ 28) ತಮ್ಮ ಫೇಸ್ ಬುಕ್ನಲ್ಲಿ ವಿವಾದಾತ್ಮಕ ವಿಡಿಯೋವೊಂದನ್ನು ಅಪ್‌ಲೋಡ್ ಮಾಡಿದ್ದರು. ಅದರಲ್ಲಿ ಅವರು ಶ್ರೀಅಕಲ್ ತಖ್ತ್ ಜಥೇದಾರ್ ಕುಲದೀಪ್ ಸಿಂಗ್ ಗರ್ಗಜ್ ಬಗ್ಗೆ ಅಸಭ್ಯ ಭಾಷೆಯನ್ನು ಬಳಸಿದ್ದಾರೆ ಎಂದು ಹೇಳಲಾಗಿದೆ.
ಇದರ ನಂತರ, ಯಾವುದೇ ವಿಡಿಯೋವನ್ನು ಅವರು ಅಪ್‌ಲೋಡ್ ಮಾಡಿಲ್ಲ. ಫೆಬ್ರವರಿ 25ರಂದು, ಅವರು ಡೇರಾ ಬಿಯಾಸ್ ಬಗ್ಗೆ ಕೆಟ್ಟ ಕಾಮೆಂಟ್‌ಗಳನ್ನು ಮಾಡಿದ್ದರು ಎಂದು ಹೇಳಲಾಗಿದೆ.
ಭಾರತ ಪರ ಹೇಳಿಕೆ ನೀಡುತ್ತಿದ್ದ ನ್ಯಾನ್ಸಿ:
ನ್ಯಾನ್ಸಿ ಗ್ರೆವಾಲ್ ಕೆನಡಾದವರಾಗಿದ್ದರೂ ಮೂಲತಃ ಪಂಜಾಬಿ ಯೂಟ್ಯೂಬರ್ ಆಗಿದ್ದರು. ಅವರು ಆಗಾಗ್ಗೆ, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದರು. ಇತ್ತೀಚೆಗೆ, ಭಾರತ ಮತ್ತು ಕೆನಡಾ ನಡುವೆ ಹೆಚ್ಚುತ್ತಿರುವ ವಿವಾದದ ಸಮಯದಲ್ಲಿ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಲವಾರು ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ್ದರು. ಇದರಲ್ಲಿ ಖಲಿಸ್ತಾನದ ಹೆಸರಿನಲ್ಲಿ ಭಾರತದ ವಿರುದ್ಧ ಪ್ರಚಾರ ಮಾಡುತ್ತಿರುವವರನ್ನು ತೀವ್ರವಾಗಿ ಟೀಕಿಸುತ್ತಿದ್ದರು.
ಇದನ್ನೂ ಓದಿ : ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ 16 ವರ್ಷದ ಬಾಲಕಿ



















