ನವದೆಹಲಿ : ಕೇಂದ್ರ ಸರ್ಕಾರವು ಅಕ್ಟೋಬರ್ 15ರಿಂದ ಜಾರಿಗೆ ತರಲು ಉದ್ದೇಶಿಸಿರುವ 2,000 ರೂ. ಮೀರಿದ ಡಿಜಿಟಲ್ ಪಾವತಿ ಮೇಲಿನ ಹೆಚ್ಚುವರಿ ಶುಲ್ಕ ನಿರ್ಧಾರವು ದೇಶಾದ್ಯಂತ ವ್ಯಾಪಾರಿಗಳ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. 2,000 ರೂ.ಗಿಂತ ಹೆಚ್ಚಿನ ಮೌಲ್ಯದ ಯುಪಿಐ (UPI) ವಹಿವಾಟುಗಳ ಮೇಲಿನ ‘ಮರ್ಚೆಂಟ್ ಡಿಸ್ಕೌಂಟ್ ರೇಟ್’ (MDR) ನಿರ್ಧಾರವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಚೇಂಬರ್ ಆಫ್ ಟ್ರೇಡ್ ಆ್ಯಂಡ್ ಇಂಡಸ್ಟ್ರಿ (CTI) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಆಗ್ರಹಿಸಿದೆ.
ಈ ಹೊಸ ಶುಲ್ಕ ಪದ್ಧತಿಯಿಂದ ದೇಶದ 6 ಕೋಟಿಗೂ ಹೆಚ್ಚು ಸಣ್ಣ ಹಾಗೂ ಮಧ್ಯಮ ವ್ಯಾಪಾರಿಗಳು, ಉದ್ಯಮಿಗಳಿಗೆ ಆರ್ಥಿಕ ಹೊರೆ ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ. ಕೇಂದ್ರ ಸರ್ಕಾರದ ನೂತನ ನಿಯಮಾವಳಿಯ ಪ್ರಕಾರ, 2,000 ರೂ.ಗಿಂತ ಹೆಚ್ಚಿನ ಮೌಲ್ಯದ ವ್ಯಕ್ತಿಯಿಂದ ವರ್ತಕರಿಗೆ (Person-to-Merchant) ನಡೆಯುವ ಯುಪಿಐ ಪಾವತಿಗಳ ಮೇಲೆ ಶೇ.0.4 ರಷ್ಟು ಎಂಡಿಆರ್ ಕಮಿಷನ್ ವಿಧಿಸಲಾಗುತ್ತದೆ. ಈ ಕಮಿಷನ್ ಗರಿಷ್ಠ 300 ರೂ.ಗಳಿಗೆ ಸೀಮಿತವಾಗಿರಲಿದೆ. ಆದರೆ, ಸಾಮಾನ್ಯ ಸಾರ್ವಜನಿಕರ ನಡುವಿನ (Person-to-Person) ಹಣದ ವರ್ಗಾವಣೆ ಸಂಪೂರ್ಣ ಉಚಿತವಾಗಿಯೇ ಮುಂದುವರಿಯಲಿದೆ. ಜತೆಗೆ, ತಿಂಗಳಿಗೆ 1 ಲಕ್ಷ ರೂ.ವರೆಗೆ ಯುಪಿಐ ಕ್ಯೂಆರ್ ಕೋಡ್ ಮೂಲಕ ಪಾವತಿ ಪಡೆಯುವ ಸಣ್ಣ ವರ್ತಕರಿಗೂ ಈ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.
ನಗದು ವಹಿವಾಟಿಗೆ ಮರಳುವ ಆತಂಕ
ಸಿಟಿಐ ಅಧ್ಯಕ್ಷ ಬ್ರಿಜೇಶ್ ಗೋಯಲ್ ಅವರ ಪ್ರಕಾರ, ನೂತನ ಶುಲ್ಕ ಜಾರಿಗೆ ಬಂದರೆ ಉನ್ನತ ಮೌಲ್ಯದ ಡಿಜಿಟಲ್ ವಹಿವಾಟುಗಳು ಶೇ.50ರಷ್ಟು ಕುಸಿಯುವ ಸಾಧ್ಯತೆಯಿದೆ. ಗ್ರಾಹಕರು ಮತ್ತು ವ್ಯಾಪಾರಿಗಳು ಕಮಿಷನ್ ತಪ್ಪಿಸಲು ಮತ್ತೆ ನಗದು ವ್ಯವಹಾರಕ್ಕೆ ಮರಳುವ ಸಾಧ್ಯತೆ ಹೆಚ್ಚಾಗಲಿದ್ದು, ಇದು ಕಳೆದ ಒಂದು ದಶಕದಿಂದ ದೇಶದಲ್ಲಿ ಬೆಳೆದುಬಂದಿರುವ ಡಿಜಿಟಲ್ ಪಾವತಿ ವ್ಯವಸ್ಥೆಗೆ ಹಿನ್ನಡೆಯಾಗಲಿದೆ. ಒಟ್ಟು ಯುಪಿಐ ವಹಿವಾಟಿನಲ್ಲಿ 2,000 ರೂ.ಗಿಂತ ಹೆಚ್ಚಿನ ವಹಿವಾಟುಗಳ ಸಂಖ್ಯೆ ಶೇ.4ರಷ್ಟಿದ್ದರೂ, ಮೌಲ್ಯದ ದೃಷ್ಟಿಯಿಂದ ಇವು ಸುಮಾರು 131 ಲಕ್ಷ ಕೋಟಿ ರೂ.ಗಳಷ್ಟನ್ನು ಪ್ರತಿನಿಧಿಸುತ್ತವೆ. ಹೀಗಾಗಿ ಈ ವರ್ಗದ ಮೇಲಿನ ಶುಲ್ಕವು ವರ್ತಕರ ಲಾಭದ ಪ್ರಮಾಣದ ಮೇಲೆ ನೇರ ಪರಿಣಾಮ ಬೀರಲಿದೆ.
ಜಿಎಸ್ಟಿ ಹೊರೆ ಹೇಗೆ ಕೆಲಸ ಮಾಡುತ್ತದೆ?
ವ್ಯಾಪಾರಿಗಳು ಪಾವತಿಸುವ ಕಮಿಷನ್ ಮೇಲೆ ಜಿಎಸ್ಟಿ ಕೂಡ ಅನ್ವಯವಾಗಲಿದೆ ಎಂದು ಆರ್ಥಿಕ ತಜ್ಞ ಪ್ರಭಾತ್ ರಂಜನ್ ಸ್ಪಷ್ಟಪಡಿಸಿದ್ದಾರೆ. ಉದಾಹರಣೆಗೆ, 10,000 ರೂ. ಮೌಲ್ಯದ ವಹಿವಾಟಿಗೆ ಶೇ. 0.4ರ ದರದಲ್ಲಿ 40 ರೂ. ಎಂಡಿಆರ್ ಶುಲ್ಕವಾಗುತ್ತದೆ. ಈ 40 ರೂ.ಗಳ ಮೇಲೆ ಶೇ.18ರಷ್ಟು ಜಿಎಸ್ಟಿ (7.20 ರೂ.) ಸೇರಿ ಒಟ್ಟು 47.20 ರೂ. ಶುಲ್ಕ ಬೀಳಲಿದೆ. ಜಿಎಸ್ಟಿ ನೋಂದಾಯಿತ ಉದ್ಯಮಗಳಿಗೆ ಇದರ ‘ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್’ ಸಿಗಲಿದೆಯಾದರೂ, ಸಣ್ಣ ಪ್ರಮಾಣದ ವರ್ತಕರಿಗೆ ಇದು ಜೇಬಿಗೆ ಹೆಚ್ಚುವರಿ ಕತ್ತರಿಯಾಗಲಿದೆ.
ಕೇಂದ್ರ ಸರ್ಕಾರವು ಸಾಮಾನ್ಯ ಗ್ರಾಹಕರು ಹಾಗೂ ತೀರಾ ಸಣ್ಣ ವ್ಯಾಪಾರಿಗಳನ್ನು ಈ ವ್ಯಾಪ್ತಿಯಿಂದ ಹೊರಗಿಟ್ಟಿದೆಯಾದರೂ, ಉದ್ಯಮ ರಂಗದ ತೀವ್ರ ವಿರೋಧದ ನಡುವೆ ಅಕ್ಟೋಬರ್ 15ರ ನಂತರ ಈ ನೂತನ ವ್ಯವಸ್ಥೆ ಜಾರಿಯಾಗಲಿದ್ದು, ಅದು ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ : ಜಪಾನ್ನಲ್ಲಿ ಕ್ರಿಕೆಟ್ಗೆ ಹೊಸ ಅಭಿಮಾನಿಗಳು ; ಸಚಿನ್ ಮೆಚ್ಚಿದ ‘ಕ್ರಿಕೆಟ್ ಗೈಡ್’ ಹಿಂದಿನ ವಿಶೇಷ ಕಥೆ!



















