ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ, ನಿರ್ಮಾಪಕ ಭಾ.ಮಾ.ಹರೀಶ್ ಪುತ್ರ ಉಲ್ಲಾಸ್ ಗೌಡ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಉಲ್ಲಾಸ್‌ಗೌಡ ಅವರು ಶಿವಮೊಗ್ಗದ ಕೊಡಚಾದ್ರಿಗೆ ಟ್ರೆಕ್ಕಿಂಗ್‌ಗೆ ಹೋಗಿದ್ದರು. ಈ ವೇಳೆ ಅವರಿಗೆ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಮಾರ್ಗ ಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ.
ಉಲ್ಲಾಸ್‌ಗೌಡ ಅವರಿಗೆ ಮದುವೆ ನಿಶ್ಚಯವಾಗಿತ್ತು. ದೀಪ ಶಾಸ್ತ್ರ ಕೂಡ ಇತ್ತೀಚೆಗೆ ನಡೆದಿತ್ತು. ನಿಶ್ಚಿತಾರ್ಥ ಕೂಡ ಆಗಿತ್ತು. ಇದೀಗ ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.
ಉಲ್ಲಾಸ ಕೂಡ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು. ನಿರ್ಮಲಾ ಹೆಸರಿನ ಮಕ್ಕಳ ಚಿತ್ರದ ಮೂಲಕ ಸಿನಿಮಾ ರಂಗಪ್ರವೇಶ ಮಾಡಿದ್ದರು. ಉಲ್ಲಾಸ್ ಕ್ಲಾಸ್ ಆಫ್ ಸಿನಿಮಾಸ್ ಹೆಸರಿನ ಸಂಸ್ಥೆಯನ್ನು ಹುಟ್ಟುಹಾಕಿ, ಸಿನಿಮಾ ಸಂಬಂಧಿ ತರಬೇತಿ ನೀಡುತ್ತಿದ್ದರು.
ಬೆಂಗಳೂರಿನ ವಿಜಯನಗರದ ಭಾ.ಮಾ.ಹರೀಶ್ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು, ಉಲ್ಲಾಸ್ ಮೃತದೇಹ ಸದ್ಯ ಶಿವಮೊಗ್ಗ ಸಮೀಪದ ಹೊಸನಗರದ ಆಸ್ಪತ್ರೆಯಲ್ಲಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ ; ಬೆಂಗಳೂರಿನ ಶೆಡ್‌ನಲ್ಲಿ ಪತ್ತೆಯಾಯ್ತು 3 ಕೋಟಿ ಹಣ – ಮೂಟೆ ನೋಡಿ ಪೊಲೀಸರೇ ಶಾಕ್!



















