ಬೆಂಗಳೂರು: ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ರಸ್ತೆಗಳಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆ ಹಾಗೂ ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ಪಾಲಿಕೆ ಆಯುಕ್ತರಾದ ಜಿ. ಜಗದೀಶ್ ಹಾಗೂ ಹೆಚ್ಚುವರಿ ಆಯುಕ್ತ (ಅಭಿವೃದ್ಧಿ) ವೆಂಕಟಾಚಲಪತಿ ಅವರು ಗುರುವಾರ ಕರ್ನಾಟಕ ರಾಜ್ಯ ಫುಟ್ಬಾಲ್ ಕ್ರೀಡಾಂಗಣದಲ್ಲಿ ವಿದ್ಯುತ್ ವಿಭಾಗದ ವಾಹನಗಳು, ದುರಸ್ತಿ ಉಪಕರಣಗಳು ಮತ್ತು ಸಿಬ್ಬಂದಿಯ ಕಾರ್ಯಸನ್ನದ್ಧತೆಯನ್ನು ಪರಿಶೀಲಿಸಿದರು.
ದೂರುಗಳಿಗೆ ತಕ್ಷಣ ಸ್ಪಂದನೆ ಮತ್ತು ರಾತ್ರಿ ವೇಳೆಯೂ ದುರಸ್ತಿ
ಬೀದಿದೀಪಗಳ ನಿರ್ವಹಣೆ ಮತ್ತು ದುರಸ್ತಿ ಕಾರ್ಯಕ್ಕಾಗಿ ಒಟ್ಟು 17 ಏಣಿ ವಾಹನಗಳು (ಲ್ಯಾಡರ್ ವೆಹಿಕಲ್ಸ್), 17 ಚಾಲಕರು ಹಾಗೂ 24 ಎಲೆಕ್ಟ್ರಿಷಿಯನ್ಗಳನ್ನು ನಿಯೋಜಿಸಲಾಗಿದೆ. ಸಾರ್ವಜನಿಕರಿಂದ ಬರುವ ಬೀದಿದೀಪದ ದೂರುಗಳಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ತಕ್ಷಣ ಸ್ಪಂದಿಸಬೇಕು. ರಾತ್ರಿ ವೇಳೆಯೂ ಸೇರಿದಂತೆ ನಿಗದಿತ ಸಮಯದೊಳಗೆ ದುರಸ್ತಿ ಕಾರ್ಯ ಪೂರ್ಣಗೊಳಿಸುವಂತೆ ಆಯುಕ್ತರು ಕಟ್ಟುನಿಟ್ಟಿನ ಸೂಚನೆ ನೀಡಿದರು. ದುರಸ್ತಿ ಕಾರ್ಯದಲ್ಲಿ ವಿಳಂಬವಾಗದಂತೆ ತಡೆಯಲು ಎಲ್ಲಾ ವಾಹನಗಳಲ್ಲಿ ಅಗತ್ಯ ಪ್ರಮಾಣದ ಬಲ್ಬ್ಗಳು, ದೀಪಗಳು ಹಾಗೂ ದುರಸ್ತಿ ಸಾಮಗ್ರಿಗಳನ್ನು ಸದಾ ಸಿದ್ಧವಾಗಿಟ್ಟುಕೊಳ್ಳುವಂತೆ ನಿರ್ದೇಶನ ನೀಡಲಾಯಿತು.
ವಾರಕ್ಕೆ ಎರಡು ಬಾರಿ ಗುತ್ತಿಗೆದಾರರಿಂದ ಕ್ಷೇತ್ರ ತಪಾಸಣೆ
ಗುತ್ತಿಗೆದಾರರು ವಾರಕ್ಕೆ ಕನಿಷ್ಠ ಎರಡು ಬಾರಿಯಾದರೂ ಕ್ಷೇತ್ರ ತಪಾಸಣೆ ನಡೆಸಿ, ಕೆಟ್ಟುಹೋದ ಬೀದಿದೀಪಗಳನ್ನು ತಕ್ಷಣ ಸರಿಪಡಿಸಬೇಕು. ಮರದ ಕೊಂಬೆಗಳಿಂದ ಬೀದಿದೀಪಗಳ ಬೆಳಕಿಗೆ ಅಡ್ಡಿಯಾಗುತ್ತಿದ್ದರೆ ಅರಣ್ಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಅವುಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಯಿತು. ಅಲ್ಲದೆ, ಪಾಲಿಕೆಯ ದುರಸ್ತಿ ವಾಹನಗಳ ಮೇಲೆ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ ಹಾಗೂ ‘ಬೆಂಗಳೂರು ಕೇಂದ್ರ ನಗರ ಪಾಲಿಕೆ’ ಎಂಬ ನಾಮಫಲಕವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಮತ್ತು ಕಾಮಗಾರಿಯಲ್ಲಿ ಗುಣಮಟ್ಟದ ಬೀದಿದೀಪ ಹಾಗೂ ವಿದ್ಯುತ್ ಉಪಕರಣಗಳನ್ನು ಮಾತ್ರ ಬಳಸಬೇಕು ಎಂದು ಆಯುಕ್ತರು ತಿಳಿಸಿದರು.
ಸುರಕ್ಷತಾ ಕ್ರಮ ಮತ್ತು ಫೋಟೋ ಸಹಿತ ವರದಿ ಕಡ್ಡಾಯ
ವಿದ್ಯುತ್ ದುರಸ್ತಿ ಕಾರ್ಯಗಳನ್ನು ಅರ್ಹ ಎಲೆಕ್ಟ್ರಿಷಿಯನ್ಗಳು ಮಾತ್ರ ನಿರ್ವಹಿಸಬೇಕು. ಕೆಲಸ ಆರಂಭಿಸುವ ಮುನ್ನ ವಿದ್ಯುತ್ ಸರಬರಾಜನ್ನು ಸಮರ್ಪಕವಾಗಿ ಸ್ಥಗಿತಗೊಳಿಸಿ, ಕಡ್ಡಾಯವಾಗಿ ಸುರಕ್ಷತಾ ಸಾಧನಗಳನ್ನು ಧರಿಸಿಯೇ ದುರಸ್ತಿ ನಡೆಸಬೇಕು. ಪ್ರತಿ ದೂರನ್ನು ಇತ್ಯರ್ಥಪಡಿಸಿದ ಬಳಿಕ ದುರಸ್ತಿಗೊಂಡ ಬೀದಿದೀಪಗಳ ಫೋಟೋ ಸಹಿತ ಪೂರ್ಣಗೊಂಡ ವರದಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಬೇಕು. ಪಾದಚಾರಿಗಳು ಮತ್ತು ವಾಹನ ಸವಾರರ ಸುರಕ್ಷತೆಗಾಗಿ ಪಾಲಿಕೆಯ ಎಲ್ಲಾ ರಸ್ತೆಗಳಲ್ಲಿ ಶೇ. 100 ರಷ್ಟು ಬೀದಿದೀಪಗಳು ನಿರಂತರವಾಗಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಗುತ್ತಿಗೆದಾರರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಆಯುಕ್ತ ಜಿ. ಜಗದೀಶ್ ಸೂಚಿಸಿದರು.


















