ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ ಭಾಗ-1’ ಚಿತ್ರ ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. 2027ರ ಮೊದಲ ತ್ರೈಮಾಸಿಕದಲ್ಲಿ ಚೀನಾ, ಜಪಾನ್, ದಕ್ಷಿಣ ಕೊರಿಯಾ ಮತ್ತು ರಷ್ಯಾದಲ್ಲಿ ಈ ಚಿತ್ರ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಕುರಿತು ಸಿನಿ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಚೀನಾದಲ್ಲಿ ಸೆನ್ಸಾರ್ ಅನುಮತಿಗಾಗಿ ಈಗಾಗಲೇ ಚಿತ್ರವನ್ನು ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
2017ರಲ್ಲಿ ನಿತೇಶ್ ತಿವಾರಿ ನಿರ್ದೇಶನದ ‘ದಂಗಲ್’ ಚಿತ್ರ ಚೀನಾದಲ್ಲಿ 1,305 ಕೋಟಿ ರೂಪಾಯಿ ಗಳಿಸಿತ್ತು. ಒಟ್ಟು 2,070 ಕೋಟಿ ರೂಪಾಯಿ ಕಲೆಕ್ಷನ್ನೊಂದಿಗೆ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಅದು ಪಾತ್ರವಾಗಿತ್ತು. ಇದೀಗ ರಣಬೀರ್ ಕಪೂರ್, ಯಶ್ ಹಾಗೂ ಸಾಯಿ ಪಲ್ಲವಿ ಅಭಿನಯದ ರಾಮಾಯಣ ಚಿತ್ರ ವಿದೇಶಿ ಮಾರುಕಟ್ಟೆಗಳಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾಗಿದೆ.
ಭಾರತದಲ್ಲಿ ಐದು ಭಾಷೆಗಳಲ್ಲಿ ತೆರೆಕಂಡಿದ್ದ ಈ ಚಿತ್ರ ವಿದೇಶಗಳಲ್ಲಿ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಶೀರ್ಷಿಕೆಯಡಿ ಸಂಕ್ಷಿಪ್ತ ಇಂಗ್ಲಿಷ್ ಆವೃತ್ತಿಯಲ್ಲಿ ಮೆಚ್ಚುಗೆ ಗಳಿಸುತ್ತಿದೆ. ನವೆಂಬರ್ 12ರಂದು ಹಾಂಗ್ ಕಾಂಗ್ನಲ್ಲಿ ಚಿತ್ರದ ಹಿಂದಿ ಆವೃತ್ತಿ ಬಿಡುಗಡೆಯಾಗಿದೆ. ನವೆಂಬರ್ 19ರಂದು ಬ್ರೆಜಿಲ್, ಇಟಲಿ, ಉಕ್ರೇನ್ ಮತ್ತು ಹಂಗೇರಿಯಲ್ಲಿ ತೆರೆಕಾಣಲಿದೆ. ನವೆಂಬರ್ 20ರಂದು ಪೋಲೆಂಡ್ನಲ್ಲಿ ಬಿಡುಗಡೆಯಾಗಲಿದೆ. ನವೆಂಬರ್ 26ರಂದು ಅರ್ಜೆಂಟೀನಾ, ಮಧ್ಯ ಅಮೆರಿಕ, ಕೊಲಂಬಿಯಾ, ಈಕ್ವೆಡಾರ್, ಪೆರು ಮತ್ತು ಜೆಕಿಯಾದಲ್ಲಿ ಚಿತ್ರ ಬಿಡುಗಡೆಯಾಗಲಿದೆ.
















