ಬಳ್ಳಾರಿ : ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಖೈದಿಯೊಬ್ಬ ಮೃತಪಟ್ಟಿರುವ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಜೈಲು ಸಿಬ್ಬಂದಿ ಹಾಗೂ ಬಿಮ್ಸ್ ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಮೃತ ಖೈದಿಯ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಮೃತ ಖೈದಿಯನ್ನು 25 ವರ್ಷದ ಹನುಮಂತು ಎಂದು ಗುರುತಿಸಲಾಗಿದೆ. ಮೂಲತಃ ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಸಂಕನಾಳು ಗ್ರಾಮದ ನಿವಾಸಿಯಾಗಿದ್ದ ಹನುಮಂತು, ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದನು. ಜನವರಿ ತಿಂಗಳಲ್ಲಿ ರಾಯಚೂರು ಜೈಲಿನಿಂದ ಬಳ್ಳಾರಿ ಜಿಲ್ಲೆಗೆ ವರ್ಗಾವಣೆ ಮಾಡಲಾಗಿತ್ತು ಎಂದು ತಿಳಿದುಬಂದಿದೆ.
ಏಪ್ರಿಲ್ 29ರಂದು ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆ ಹನುಮಂತುವನ್ನು ಬಳ್ಳಾರಿ ಜೈಲಿನಿಂದ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಒಂದು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಎನ್ನಲಾಗಿದೆ. ಖೈದಿ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವಿಚಾರವನ್ನು ಕುಟುಂಬಸ್ಥರಿಗೆ ತಿಳಿಸಿಲ್ಲ ಎಂದು ಮೃತನ ತಂಗಿ ಮರಿಯಮ್ಮ ಆರೋಪಿಸಿದ್ದಾರೆ. “ನಮ್ಮ ಅಣ್ಣ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂಬ ಮಾಹಿತಿ ಕೂಡ ನಮಗೆ ನೀಡಲಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಮೇ 6ರಂದು ನನ್ನ ಅಣ್ಣ ಆಸ್ಪತ್ರೆಯಲ್ಲಿ ಮೃತಪಟ್ಟ ನಂತರವೇ ರಾತ್ರಿ 12 ಗಂಟೆ ಸುಮಾರಿಗೆ ಪೊಲೀಸರು ಕರೆ ಮಾಡಿದ್ದಾರೆ” ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಜೀವಂತವಾಗಿದ್ದಾಗ ಮಾಹಿತಿ ನೀಡದೇ, ಸಾವಿನ ನಂತರ ತಿಳಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಹನುಮಂತುವಿನ ಸಾವಿಗೆ ಜೈಲು ಸಿಬ್ಬಂದಿ ಹಾಗೂ ಬಿಮ್ಸ್ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. “ನಮ್ಮ ಅಣ್ಣ ನಾಲ್ಕು ತಿಂಗಳು ಬಳ್ಳಾರಿ ಜೈಲಿನಲ್ಲಿ ಆರಾಮವಾಗಿದ್ದ. ಈಗ ಏಕಾಏಕಿ ಸತ್ತಿರುವ ಬಗ್ಗೆ ನಮಗೆ ಅನುಮಾನ ಇದೆ” ಎಂದು ಹೇಳಿದ್ದಾರೆ. ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಪ್ರಕರಣ ಇದೀಗ ಬಳ್ಳಾರಿ ಜಿಲ್ಲೆಯಲ್ಲಿ ಚರ್ಚೆಗೆ ಕಾರಣವಾಗಿದ್ದು, ಅಧಿಕಾರಿಗಳ ನಡೆ ಪ್ರಶ್ನೆಗೆ ಒಳಗಾಗಿದೆ.
ಇದನ್ನೂ ಓದಿ : ಹಾಸನ ಬಸ್ ನಿಲ್ದಾಣದಲ್ಲಿ ಅಂಗಡಿ ಮಾಲೀಕರ ನಡುವೆ ಮಾರಾಮಾರಿ.. ವಿಡಿಯೋ ವೈರಲ್!


















