ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಗೈರು, ಶಾಶ್ವತವಾಗಿ ಸ್ಥಳಾಂತರಗೊಂಡ, ಮೃತ, ನಕಲು ಹಾಗೂ ಇತರೆ ಕಾರಣಗಳಿಗಾಗಿ ಒಟ್ಟು 49,53,020 (47.68%) ಮತದಾರರನ್ನು ASDDO ವರ್ಗದಲ್ಲಿ ಗುರುತಿಸಲಾಗಿದೆ ಎಂದು ಚುನಾವಣಾ ವಿಭಾಗದ ವಿಶೇಷ ಆಯುಕ್ತೆ ಸುಷಮಾ ಗೋಡಬೋಲೆ ತಿಳಿಸಿದ್ದಾರೆ.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2026ರ (SIR) ಪ್ರಕ್ರಿಯೆ ನಡೆಯುತ್ತಿದ್ದು, ಜೂನ್ 30ರಿಂದ ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ ಮನೆಗೆ ತೆರಳಿ ಗಣತಿ ನಮೂನೆಗಳನ್ನು ವಿತರಿಸುವ ಕಾರ್ಯ ಕೈಗೊಂಡಿದ್ದಾರೆ. ಈ ವೇಳೆ ಮತದಾರರ ಮಾಹಿತಿಯನ್ನು ಪರಿಶೀಲಿಸಿ ASDDO ವರ್ಗದ ಮತದಾರರನ್ನು ಗುರುತಿಸಲಾಗಿದೆ.
ಜಿಬಿಎ ವ್ಯಾಪ್ತಿಯಲ್ಲಿ ಗುರುತಿಸಲಾಗಿರುವ 49,53,020 ಮತದಾರರ ಪೈಕಿ 7,98,416 ಮಂದಿ ಮನೆಯಲ್ಲಿ ಗೈರು, 33,84,790 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡವರು, 3,15,175 ಮಂದಿ ಮೃತಪಟ್ಟವರು, 60,005 ಮಂದಿ ನಕಲು ಮತದಾರರು ಎಂದು ಪತ್ತೆಯಾಗಿದೆ. ಉಳಿದ 3,94,634 ಮತದಾರರು ಇತರೆ ವರ್ಗಕ್ಕೆ ಸೇರಿದ್ದಾರೆ.
ಈ ಮಾಹಿತಿಯನ್ನು ಸಾರ್ವಜನಿಕರ ಪರಿಶೀಲನೆಗಾಗಿ ಜಿಬಿಎ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ಯಾವುದೇ ದೂರು ಅಥವಾ ಆಕ್ಷೇಪಣೆಗಳಿದ್ದಲ್ಲಿ ಸಂಬಂಧಪಟ್ಟ BLO ಅಥವಾ ಮತದಾರರ ನೋಂದಣಾಧಿಕಾರಿಗಳನ್ನು ಸಂಪರ್ಕಿಸಿ ಸಲ್ಲಿಸಬಹುದಾಗಿದೆ.
ನಾಳೆಯೊಳಗೆ ನಮೂನೆ ಸಲ್ಲಿಸಿ
ಇನ್ನೂ ತಮ್ಮ ಭರ್ತಿ ಮಾಡಿದ ಗಣತಿ ನಮೂನೆಯನ್ನು ಸಲ್ಲಿಸದ ಮತದಾರರು ತಮ್ಮ ವಿವರಗಳನ್ನು ಪರಿಶೀಲಿಸಿ ಆಗಸ್ಟ್ 7ರೊಳಗಾಗಿ ಸಂಬಂಧಪಟ್ಟ BLOಗೆ ಸಲ್ಲಿಸುವಂತೆ ಜಿಬಿಎ ಮನವಿ ಮಾಡಿದೆ. ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಇದು ಕೊನೆಯ ಅವಕಾಶವಾಗಿದ್ದು, ನಮೂನೆಗಳನ್ನು ಡಿಜಿಟಲೀಕರಣಗೊಳಿಸಬೇಕಿರುವುದರಿಂದ ಕೊನೆಯ ಕ್ಷಣದವರೆಗೆ ಕಾಯದೆ ಶೀಘ್ರ ಸಲ್ಲಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ.
47.68% ಮತದಾರರು ASDDO ಪಟ್ಟಿಗೆ:
ಒಟ್ಟು ASDDO: 49,53,020
ಮನೆಯಲ್ಲಿ ಗೈರು: 7,98,416
ಶಾಶ್ವತ ಸ್ಥಳಾಂತರ: 33,84,790
ಮೃತರು: 3,15,175
ನಕಲು: 60,005
ಇತರೆ: 3,94,634.
ಇದನ್ನೂ ಓದಿ : ರಾಜ್ಯ ಸರ್ಕಾರದ KSRLPS ಸಂಸ್ಥೆಯಲ್ಲಿ 14 ಹುದ್ದೆಗಳ ನೇಮಕ : ಈ 2 ಜಿಲ್ಲೆಯವರಿಗೆ ಗುಡ್ ನ್ಯೂಸ್



















