ನವದೆಹಲಿ: ಭಾರತ ಮತ್ತು ಬ್ರಿಟನ್ ನಡುವೆ ನಡೆಯಲಿರುವ ಮುಕ್ತ ವ್ಯಾಪಾರ ಒಪ್ಪಂದದ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಟನ್ ಗೆ ಭೇಟಿ ನೀಡುತ್ತಿರುವುದು ಎಲ್ಲರ ಗಮನ ಸೆಳೆದಿದೆ. ಭೇಟಿ ವೇಳೆ ಪ್ರಧಾನಿ ಮೋದಿ ಅವರು ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ. ಒಪ್ಪಂದಕ್ಕೆ ಸಹಿ ಬಿದ್ದರೆ ಭಾರತದಲ್ಲಿ ಕಾರು ಸೇರಿ ಹಲವು ವಸ್ತುಗಳು ಅಗ್ಗವಾಗಲಿವೆ.
ಮೋದಿ ಭೇಟಿ ವೇಳೆ ಭಾರತ-ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ನಂತರ, ಮುಂದಿನ 1 ವರ್ಷದೊಳಗೆ ಇದು ಜಾರಿಗೆ ಬರಲಿದೆ. ಇದರ ನಂತರ ಭಾರತವು ಕೆಲವು ಆಹಾರ ಪದಾರ್ಥಗಳು, ಬ್ರಿಟಿಷ್ ವಿಸ್ಕಿ ಮತ್ತು ಕಾರುಗಳ ಮೇಲಿನ ಸುಂಕಗಳನ್ನು ಕಡಿತಗೊಳಿಸಲಿದೆ. ಭಾರತದಿಂದ ರಫ್ತಾಗುವ ಜವಳಿ ಮತ್ತು ಎಲೆಕ್ಟ್ರಾನಿಕ್ ಹಾಗೂ ವಾಹನಗಳಿಗೆ ಬ್ರಿಟನ್ ನಲ್ಲಿ ಸುಂಕ ರಹಿತ ಪ್ರವೇಶ ಲಭ್ಯವಾಗಲಿದೆ. ಇದರ ಜತೆಗೆ ಭಾರತದಲ್ಲಿ ಬಟ್ಟೆಗಳ ಬೆಲೆಯೂ ಅಗ್ಗವಾಗಲಿದೆ.
ದ್ವಿಪಕ್ಷೀಯ ವ್ಯಾಪಾರ ಒಪ್ಪಂದದಿಂದ ಭಾರತ ಮತ್ತು ಬ್ರಿಟನ್ ನಡುವಿನ ವ್ಯಾಪಾರ ಮತ್ತಷ್ಟು ಹೆಚ್ಚಾಗಲಿದೆ. ಭಾರತ-ಬ್ರಿಟನ್ ನಡುವಿನ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕಾಗಿ ಕಳೆದ 3 ವರ್ಷಗಳಿಂದ ಮಾತುಕತೆ ನಡೆಯುತ್ತಿತ್ತು. ಕಳೆದ ಮೇ ತಿಂಗಳಲ್ಲಿ ಇದನ್ನು ಅಂತಿಮಗೊಳಿಸಲಾಗಿತ್ತು. ಈಗ ಎರಡೂ ದೇಶಗಳ ನಡುವೆ ಈ ಒಪ್ಪಂದಕ್ಕೆ ಸಹಿ ಬೀಳಲಿದೆ.
2023-24 ನೇ ವಿತ್ತೀಯ ಸಾಲಿನಲ್ಲಿ ಎರಡೂ ದೇಶಗಳ ನಡುವಿನ ವ್ಯಾಪಾರವು 55 ಶತಕೋಟಿ ಡಾಲರ್ ಗೆ ತಲುಪಿದೆ. ಬ್ರಿಟನ್ ಭಾರತದ ಆರನೇ ಅತಿದೊಡ್ಡ ಹೂಡಿಕೆದಾರ ಆಗಿದ್ದು, ಭಾರತದಲ್ಲಿ 36 ಶತಕೋಟಿ ಡಾಲರ್ ಹೂಡಿಕೆ ಮಾಡಿದೆ. ಹಲವು ಭಾರತೀಯ ಕಂಪನಿಗಳು ಬ್ರಿಟನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿ ಲಕ್ಷಾಂತರ ಜನರಿಗೆ ಉದ್ಯೋಗ ನೀಡುತ್ತಿವೆ. ಒಟ್ಟಾರೆ, ಭಾರತದ ಆರ್ಥಿಕತೆ ದೃಷ್ಟಿಯಿಂದ ಈ ಒಪ್ಪಂದವು ಮಹತ್ವದ್ದಾಗಿದೆ ಎಂದು ಹೇಳಲಾಗುತ್ತಿದೆ.



















