ನವದೆಹಲಿ : ಎಸ್ಐಆರ್ ಮತ್ತು ಮತದಾರರ ಪಟ್ಟಿಗೆ ಸಂಬಂಧಿಸಿ ಚುನಾವಣಾ ಆಯುಕ್ತರಿಬ್ಬರ ಅಭಿಪ್ರಾಯಕ್ಕೆ ಬೆಲೆ ಕೊಡದೇ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಆರೋಪದ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣವೇ ಅಮಾನತುಗೊಳಿಸಬೇಕೆಂದು ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ. ಆದಾಗ್ಯೂ, ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ, ಜ್ಞಾನೇಶ್ ಕುಮಾರ್ ಮತ್ತು ಇಬ್ಬರು ಚುನಾವಣಾ ಆಯುಕ್ತರಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. ಬಹುವಿಧದ ಸದಸ್ಯರನ್ನೊಳಗೊಂಡ ಚುನಾವಣಾ ಆಯೋಗದ ಇತರ ಆಯುಕ್ತರ ಸಮ್ಮತಿಯಿಲ್ಲದೆ ಮುಖ್ಯ ಚುನಾವಣಾ ಆಯುಕ್ತರು ಏಕಪಕ್ಷೀಯವಾಗಿ ಅಧಿಕಾರ ಚಲಾಯಿಸಬಹುದೇ ಎಂದು ಅರ್ಜಿದಾರರು ಪ್ರಶ್ನಿಸಿದ್ದರು. ಸಂವಿಧಾನದ ವಿಧಿ 324 ಮತ್ತು 2023ರ ಕಾಯ್ದೆಯ ಪ್ರಕಾರ ಆಯೋಗದ ನಿರ್ಧಾರಗಳು ಸರ್ವಸಮ್ಮತಿಯಿಂದ ಅಥವಾ ಬಹುಮತದ ಆಧಾರದಲ್ಲಿ ನಡೆಯಬೇಕು, ಆದರೆ ಇಲ್ಲಿ ಸಂವಿಧಾನದ ಆಶಯಗಳನ್ನು ಉಲ್ಲಂಘಿಸಲಾಗಿದೆ ಎಂದು ಅರ್ಜಿದಾರರ ಪರ ಹಿರಿಯ ವಕೀಲ ವಿಕಾಸ್ ಸಿಂಗ್ ವಾದಿಸಿದರು.
ವಾದ-ಪ್ರತಿವಾದ ಮತ್ತು ಸುಪ್ರೀಂ ಕೋರ್ಟ್ ತೀಕ್ಷ್ಣ ವೀಕ್ಷಣೆ
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, “ದೇಶದ ಪ್ರತಿ ಪ್ರಜೆಯೂ ಚುನಾವಣಾ ಆಯೋಗದ ವಿಶ್ವಸನೀಯತೆ ಅಪಾಯದಲ್ಲಿದೆ ಎಂದು ಭಾವಿಸುತ್ತಿದ್ದಾರೆ. ಯಾವುದೇ ಮಧ್ಯಂತರ ಆದೇಶ ನೀಡದಿದ್ದರೆ ದೇಶವೇ ಹೊತ್ತಿ ಉರಿಯುತ್ತದೆ” ಎಂದು ಆತಂಕ ವ್ಯಕ್ತಪಡಿಸಿ, ತಕ್ಷಣದ ಅಮಾನತಿಗೆ ಪಟ್ಟು ಹಿಡಿದರು. ಆದರೆ, ಈ ವಾದವನ್ನು ಸಮ್ಮತಿಸದ ಸಿಜೆಐ ಸೂರ್ಯಕಾಂತ್, ಮಾಧ್ಯಮ ವರದಿಗಳನ್ನಷ್ಟೇ ಆಧರಿಸಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದರು. “ಚುನಾವಣಾ ಆಯುಕ್ತರು ಸರ್ವಸಮ್ಮತಿಯಿಂದ ನಿರ್ಧಾರ ಕೈಗೊಳ್ಳಬೇಕೆಂಬುದು ನಿರೀಕ್ಷೆ. ಅಲ್ಲಿ ಒಮ್ಮತವಿಲ್ಲದಿದ್ದರೆ ಬಹುಮತದ ಆಧಾರದಲ್ಲಿ ತೀರ್ಮಾನವಾಗಬೇಕು. ದಾಖಲೆಗಳನ್ನು ಪರಿಶೀಲಿಸಿದಾಗ ನಿಯಮಾನುಸಾರ ನಿರ್ಧಾರ ಕೈಗೊಂಡಿಲ್ಲ ಎಂಬುದು ಸಾಬೀತಾದರೆ, ಅಂತಹ ಆದೇಶಗಳನ್ನು ರದ್ದುಗೊಳಿಸಲು ನ್ಯಾಯಾಲಯ ಹಿಂಜರಿಯುವುದಿಲ್ಲ” ಎಂದು ಸಿಜೆಐ ಸ್ಪಷ್ಟಪಡಿಸಿದರು.
ಆಯೋಗದ ಆಂತರಿಕ ಭಿನ್ನಾಭಿಪ್ರಾಯ ಮತ್ತು 14 ಆಕ್ಷೇಪಗಳು
ಇತರ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಬರೆದಿದ್ದಾರೆನ್ನಲಾದ ಆಂತರಿಕ ಟಿಪ್ಪಣಿಗಳನ್ನು ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದರು. ಅಕ್ಟೋಬರ್ 2025 ರಿಂದ ಆಗಸ್ಟ್ 2026ರ ನಡುವೆ ಆಯೋಗದ ಸಭೆಯ ಕಾರ್ಯಸೂಚಿ (ಅಜೆಂಡಾ), ನಡಾವಳಿಗಳು, ವಿದೇಶಿ ಪ್ರವಾಸ, ಫಾರ್ಮ್ 6 ಬದಲಾವಣೆ ಮತ್ತು ಮತದಾರರ ಪಟ್ಟಿಯ ಡೇಟಾಬೇಸ್ ಕೇಂದ್ರೀಕರಣ ಸೇರಿದಂತೆ ಕನಿಷ್ಠ 14 ಪ್ರಮುಖ ವಿಷಯಗಳಲ್ಲಿ ತಮ್ಮ ಒಪ್ಪಿಗೆಯಿಲ್ಲದೆ ಏಕಪಕ್ಷೀಯ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಆಯುಕ್ತರು ಆಕ್ಷೇಪ ಎತ್ತಿದ್ದರೆಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ವಿಶೇಷ ತನಿಖಾ ತಂಡದ ತನಿಖೆಗೆ ಆಗ್ರಹ
ಮತದಾರರ ಪಟ್ಟಿಯಿಂದ ಅಕ್ರಮವಾಗಿ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂಬ ಆರೋಪಗಳ ಕುರಿತು ವಿಶೇಷ ತನಿಖಾ ತಂಡದಿಂದ (SIT) ತನಿಖೆ ನಡೆಸಬೇಕೆಂದು ಅರ್ಜಿಗಳಲ್ಲಿ ಕೋರಲಾಗಿದೆ. ಮುಖ್ಯ ಚುನಾವಣಾ ಆಯುಕ್ತರ ತಕ್ಷಣದ ಅಮಾನತಿಗೆ ನಿರಾಕರಿಸಿರುವ ಸುಪ್ರೀಂ ಕೋರ್ಟ್, ಆಯೋಗ ಮತ್ತು ನಾಯಕರು ನೀಡುವ ಅಧಿಕೃತ ಪ್ರತಿಕ್ರಿಯೆ ಹಾಗೂ ದಾಖಲೆಗಳ ಆಧಾರದ ಮೇಲೆ ಮುಂದಿನ ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ಇದನ್ನೂ ಓದಿ :ಜಂತರ್ ಮಂತರ್ನಲ್ಲಿ ಹೈಡ್ರಾಮಾ : ಪೊಲೀಸ್ ಬಸ್ಸಿನ ಕೀ ಕಸಿದುಕೊಂಡು ಓಡಿಹೋದ ಪ್ರತಿಭಟನಾಕಾರ ಯುವತಿ!



















