ನವದೆಹಲಿ : ಇತ್ತೀಚೆಗೆ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ‘ಸಂಸದ್ ಚಲೋ’ ಪ್ರತಿಭಟನೆಯನ್ನು ತಮ್ಮ ಕುಂಚದ ಮೂಲಕ ಚಿತ್ರಿಸುತ್ತಿದ್ದ 28 ವರ್ಷದ ವರ್ಣಚಿತ್ರಕಾರ ಪ್ರಶಾಂತ್ ಕುಮಾರ್ ಸಿಂಗ್, ಪ್ರಸ್ತುತ ತಮ್ಮ ದೇಹದಲ್ಲಿಯೇ ಮೆಟಲ್ ಪೆಲೆಟ್ (ಲೋಹದ ಗುಂಡುಗಳನ್ನು) ಹೊತ್ತು ಬದುಕು ದೂಡುವಂತಾಗಿದೆ.
ಜುಲೈ 20ರಂದು ಕ್ಷಿಪ್ರ ಕಾರ್ಯಪಡೆ(RAF) ನಡೆಸಿದ ಗುಂಡಿನ ದಾಳಿಯಲ್ಲಿ ಪ್ರಶಾಂತ್ ಅವರ ಬಲಗೈ ಮತ್ತು ಎದೆಗೆ ಅನೇಕ ಪೆಲೆಟ್‌ಗಳು ತಗುಲಿದ್ದವು. ಘಟನೆ ಸಂಭವಿಸಿ ಹಲವು ದಿನಗಳು ಕಳೆದರೂ, ಅವರ ಬಲಗೈನಲ್ಲಿ ಇಂದಿಗೂ ಕನಿಷ್ಠ 10 ಪೆಲೆಟ್‌ಗಳು ಹಾಗೆಯೇ ಉಳಿದುಕೊಂಡಿವೆ. ಇವುಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದರೆ ಕೈ ನರಗಳು ಮತ್ತು ಸ್ನಾಯುಗಳು ಶಾಶ್ವತವಾಗಿ ಹಾನಿಗೊಳಗಾಗುವ ಅಪಾಯವಿರುವುದರಿಂದ, ವೈದ್ಯರು ಇವುಗಳನ್ನು ಶರೀರದಲ್ಲೇ ಬಿಡಲು ಸಲಹೆ ನೀಡಿದ್ದಾರೆ.
ಮಾಧ್ಯಮಗಳ ದಾಖಲೆಗೂ ಮೀರಿದ ‘ಆರನೇ ಗಾಯಾಳು’
ಇಲ್ಲಿಯವರೆಗೆ ದೆಹಲಿ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ದಾಳಿಗೆ ತುತ್ತಾದ ಐದು ಜನರ ಬಗ್ಗೆ ಮಾತ್ರ ವರದಿಗಳಾಗಿದ್ದವು. ಆದರೆ, ತಮಗೆ ಚಿಕಿತ್ಸೆ ನೀಡಿದ ಲೇಡಿ ಹಾರ್ಡಿಂಗ್ ಆಸ್ಪತ್ರೆಗೆ ಅದೇ ದಿನ ಮತ್ತೊಬ್ಬ ಗಾಯಾಳು ಆಗಮಿಸಿದ್ದನ್ನು ತಾವು ಸ್ವತಃ ನೋಡಿದ್ದಾಗಿ ಪ್ರಶಾಂತ್ ತಿಳಿಸಿದ್ದಾರೆ. ಈಗಾಗಲೇ ಮಾಧ್ಯಮಗಳಲ್ಲಿ ಗುರುತಿಸಿಕೊಂಡಿರುವ ಐದು ಗಾಯಾಳುಗಳ ಪಟ್ಟಿಯಲ್ಲಿ ಈ ವ್ಯಕ್ತಿಯ ಹೆಸರು ಅಥವಾ ಚಿತ್ರಗಳಿಲ್ಲ. ಲಭ್ಯವಿರುವ ಎಕ್ಸ್-ರೇ ವರದಿಗಳು ಮತ್ತು ಮೆಡಿಕೋ-ಲೀಗಲ್ ಪ್ರಮಾಣಪತ್ರಗಳು ಪ್ರಶಾಂತ್ ದೇಹದಲ್ಲಿ ಲೋಹದ ಗುಂಡುಗಳು ಇರುವುದನ್ನು ಖಚಿತಪಡಿಸಿದ್ದು, ಈ ಮೂಲಕ ಸಂತ್ರಸ್ತರ ಸಂಖ್ಯೆ ವರದಿಯಾಗಿರುವುದಕ್ಕಿಂತ ಹೆಚ್ಚಿರಬಹುದು ಎಂಬ ಅನುಮಾನ ದಟ್ಟವಾಗಿದೆ.
ಪ್ಲಾಸ್ಟಿಕ್ ಎಂದಿದ್ದ ಪೊಲೀಸರ ವಾದಕ್ಕೆ ಎಕ್ಸ್-ರೇ ಸವಾಲು
ಪ್ರತಿಭಟನಾಕಾರರ ಮೇಲೆ ಕೇವಲ ಪ್ಲಾಸ್ಟಿಕ್ ಅಥವಾ ರಬ್ಬರ್ ಗುಂಡುಗಳನ್ನು ಬಳಸಲಾಗಿದೆ ಎಂದು ಕ್ಷಿಪ್ರ ಕಾರ್ಯಪಡೆ ಸಮರ್ಥಿಸಿಕೊಂಡಿತ್ತು. ಆದರೆ ಪ್ರಶಾಂತ್ ಅವರ ವೈದ್ಯಕೀಯ ಪರೀಕ್ಷೆಗಳು ಹಾಗೂ ಎಕ್ಸ್-ರೇ ವರದಿಗಳು ದೇಹದಲ್ಲಿ ಲೋಹದ ಚೂರುಗಳು ಇರುವುದನ್ನು ಸ್ಪಷ್ಟವಾಗಿ ನಿರೂಪಿಸಿವೆ. ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಯಾವುದೇ ಕನಿಷ್ಠ ಮುನ್ಸೂಚನೆ ನೀಡದೆ ಶಾಟ್ ಗನ್ (Shotguns) ಬಳಸಿ ನೇರವಾಗಿ ದಾಳಿ ನಡೆಸಿದ್ದರು ಎಂದು ಪ್ರಶಾಂತ್ ಆರೋಪಿಸಿದ್ದಾರೆ. ಮೊದಲಿಗೆ ಪೆಲೆಟ್ ಗನ್ ಬಳಕೆಯನ್ನೇ ನಿರಾಕರಿಸಿದ್ದ ದೆಹಲಿ ಪೊಲೀಸರು, ನಂತರ ಸಂಸತ್ ಮಾರ್ಗ ಪೊಲೀಸ್ ಠಾಣೆಯ ಡೈರಿಯಲ್ಲಿ ಪೆಲೆಟ್ ಗನ್ ಬಳಕೆಯಾಗಿದ್ದನ್ನು ದಾಖಲಿಸಿರುವುದು ಬಹಿರಂಗವಾಗಿದೆ.
ಇದನ್ನೂ ಓದಿ : ಮ್ಯಾಟ್ರಿಮೋನಿ ನಂಬಿ ಹೋದ ವ್ಯಕ್ತಿಗೆ ಪಂಗನಾಮ.. 2.5 ಲಕ್ಷ ದೋಚಿ ಕಿಲಾಡಿ ಲೇಡಿ ಪರಾರಿ!



















