ಮುಂಬೈ : ಮುಂಬೈನ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಬಾಂಬೆ ಕ್ಯಾಂಪಸ್‌ನಲ್ಲಿ ಪರೀಕ್ಷೆಯ ವೇಳೆ ಮೊಬೈಲ್ ಬಳಸಿ ನಕಲು ಮಾಡುತ್ತಿದ್ದಾಗ ದ್ವಿತೀಯ ವರ್ಷದ ವಿದ್ಯಾರ್ಥಿಯೊಬ್ಬ ಸಿಕ್ಕಿಬಿದ್ದಿದ್ದು, ಇದರಿಂದ ನೊಂದ ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಶುಕ್ರವಾರ ಸಂಜೆ ಈ ಘಟನೆ ಸಂಭವಿಸಿದ್ದು, ಇದರ ಬೆನ್ನಲ್ಲೇ ಕ್ಯಾಂಪಸ್‌ನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ಆರಂಭಿಸಿದ್ದಾರೆ.
ಆಗಿದ್ದೇನು?
ಮೃತ ವಿದ್ಯಾರ್ಥಿಯನ್ನು ಎನರ್ಜಿ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ದ್ವಿತೀಯ ವರ್ಷದ ಬಿ.ಟೆಕ್ ವಿದ್ಯಾರ್ಥಿ ಸಾಹಿಲ್ ವಾಕೋಡೆ ಎಂದು ಗುರುತಿಸಲಾಗಿದೆ. ಪರೀಕ್ಷಾ ಸಮಯದಲ್ಲಿ ಮೊಬೈಲ್ ಫೋನ್ ಬಳಸುತ್ತಿದ್ದ ಸಾಹಿಲ್, ಪ್ರಶ್ನೆಪತ್ರಿಕೆಯನ್ನು ಚಾಟ್‌ಜಿಪಿಟಿ (ChatGPT) ಆ್ಯಪ್‌ಗೆ ಅಪ್‌ಲೋಡ್ ಮಾಡಿ ಉತ್ತರಗಳನ್ನು ಹುಡುಕಲು ಯತ್ನಿಸುತ್ತಿದ್ದಾಗ ಪರೀಕ್ಷಾ ಮೇಲ್ವಿಚಾರಕರ ಕೈಗೆ ಸಿಕ್ಕಿಬಿದ್ದಿದ್ದ ಎಂದು ಸಂಸ್ಥೆ ತಿಳಿಸಿದೆ.

ಸಂಸ್ಥೆಯ ಸ್ಪಷ್ಟನೆಯೇನು?
ಘಟನೆ ಕುರಿತು ಪ್ರತಿಕ್ರಿಯಿಸಿರುವ ಐಐಟಿ ಬಾಂಬೆ, ವಿದ್ಯಾರ್ಥಿಯ ವಿರುದ್ಧ ತಕ್ಷಣವೇ ಯಾವುದೇ ಶಿಸ್ತುಕ್ರಮ ಕೈಗೊಂಡಿರಲಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕೋರ್ಸ್ ಬೋಧಕರು ಹಾಗೂ ವಿಭಾಗೀಯ ಮುಖ್ಯಸ್ಥರು (HoD) ವಿದ್ಯಾರ್ಥಿಯೊಂದಿಗೆ ಮಾತುಕತೆ ನಡೆಸಿ ಕೌನ್ಸೆಲಿಂಗ್ ನೀಡಿದ್ದರು. ಈ ಘಟನೆಯಿಂದ ಆತನ ಶೈಕ್ಷಣಿಕ ಭವಿಷ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರದಂತೆ ಭರವಸೆ ನೀಡಲಾಗಿತ್ತು ಎಂದು ಸಂಸ್ಥೆ ಹೇಳಿದೆ. ಈ ಸುದೀರ್ಘ ಸಂಭಾಷಣೆಯ ನಂತರ ವಿದ್ಯಾರ್ಥಿ ತನ್ನ ಹಾಸ್ಟೆಲ್ ಕೊಠಡಿಗೆ ಮರಳಿದ್ದು, ಇದಾದ ಕೆಲವೇ ಗಂಟೆಗಳಲ್ಲಿ ಆತ ತನ್ನ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ವಿದ್ಯಾರ್ಥಿಗಳ ಆಕ್ರೋಶ
ವಿದ್ಯಾರ್ಥಿಯ ಸಾವಿನ ಸುದ್ದಿ ಹರಡುತ್ತಿದ್ದಂತೆ ಪೊವಾಯ್ ಕ್ಯಾಂಪಸ್‌ನಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ನೂರಾರು ವಿದ್ಯಾರ್ಥಿಗಳು ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆಗಿಳಿದಿದ್ದಾರೆ. ಸಂಸ್ಥೆಯು ಸತ್ಯ ಸಂಗತಿಯನ್ನು ಮರೆಮಾಚುತ್ತಿದೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ನಕಲು ಆರೋಪದ ಮೇಲೆ ವಿದ್ಯಾರ್ಥಿಗೆ ಒಂದು ವರ್ಷದ ಅಮಾನತು ಶಿಕ್ಷೆಯ ಹೆದರಿಕೆ ಹಾಕಲಾಗಿತ್ತು ಎಂದು ವಿದ್ಯಾರ್ಥಿಗಳು ಪ್ರತಿಪಾದಿಸಿದ್ದಾರೆ. ಅಮಾನತಾದರೆ ಹಾಸ್ಟೆಲ್ ಖಾಲಿ ಮಾಡಿ ಹೊರಗೆ ಇರಬೇಕಾಗುತ್ತದೆ ಮತ್ತು ಇಂಜಿನಿಯರಿಂಗ್ ಪೂರ್ಣಗೊಳಿಸಲು ನಾಲ್ಕು ವರ್ಷಗಳ ಬದಲಾಗಿ ಐದು ಅಥವಾ ಅದಕ್ಕಿಂತ ಹೆಚ್ಚು ವರ್ಷ ತಗುಲುತ್ತದೆ ಎಂಬ ಭೀತಿಯಲ್ಲಿದ್ದ ಸಾಹಿಲ್, ಈ ಒತ್ತಡ ತಾಳಲಾರದೆ ಪ್ರಾಣವನ್ನೇ ಕಳೆದುಕೊಳ್ಳುವ ನಿರ್ಧಾರ ಕೈಗೊಂಡಿರಬಹುದು ಎಂದು ಸಹಪಾಠಿಗಳು ಶಂಕಿಸಿದ್ದಾರೆ. ಈ ದುರಂತದ ಪೂರ್ಣ ಹೊಣೆಯನ್ನು ಆಡಳಿತ ಮಂಡಳಿಯೇ ಹೊರಬೇಕು ಮತ್ತು ಪಾರದರ್ಶಕ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಆರು ತಿಂಗಳಲ್ಲಿ ಮೂರನೇ ಸರಣಿ ಸಾವು
ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ ಸಂಭವಿಸಿದ ಮೂರನೇ ಆತ್ಮಹತ್ಯೆ ಘಟನೆ ಇದಾಗಿದೆ. ಇದಕ್ಕೂ ಮುನ್ನ ಫೆಬ್ರವರಿಯಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಯೊಬ್ಬ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಬಳಿಕ ಜುಲೈನಲ್ಲಿ ಹೊಸ ಸೆಮಿಸ್ಟರ್ ಆರಂಭದ ವೇಳೆಯೂ ಬಿ.ಟೆಕ್ ವಿದ್ಯಾರ್ಥಿಯೊಬ್ಬ ಪ್ರಾಣ ಕಳೆದುಕೊಂಡಿದ್ದ. ಪ್ರಸಕ್ತ ಸಾಲಿನಲ್ಲಿ ಸಾಲು ಸಾಲು ಆತ್ಮಹತ್ಯೆಗಳು ವರದಿಯಾಗುತ್ತಿರುವುದು ಕ್ಯಾಂಪಸ್‌ನಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಪರಿಸ್ಥಿತಿ ನಿಯಂತ್ರಿಸಲು ಕ್ಯಾಂಪಸ್‌ನಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿ ದತ್ತಾತ್ರೇಯ ನಲವಡೆ ಮಾತನಾಡಿ, ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಪ್ರತಿಭಟನಾನಿರತ ವಿದ್ಯಾರ್ಥಿಗಳು ಹಾಗೂ ಐಐಟಿ ಆಡಳಿತ ಮಂಡಳಿಯ ನಡುವೆ ಶಾಂತಿಯುತ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಈ ನಡುವೆ ಐಐಟಿ ಬಾಂಬೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ವಿದ್ಯಾರ್ಥಿಯ ಸಾವು ತೀವ್ರ ದುಃಖ ತಂದಿದೆ ಎಂದು ಕಂಬನಿ ಮಿಡಿದಿದೆ.
ಇದನ್ನೂ ಓದಿ : ವಾಹನ ಮಾಲೀಕರೇ ಗಮನಿಸಿ : ಸೆ.25ರೊಳಗೆ ಈ ಕೆಲಸ ಮಾಡದಿದ್ದರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ರದ್ದು!



















