ನವದೆಹಲಿ : ಇತ್ತೀಚಿನ ವರ್ಷಗಳಲ್ಲಿ ಮೊದಲು ಎಂಬಂತೆ ದೇಶದ ಅಡುಗೆ ಅನಿಲ ವ್ಯವಸ್ಥೆಯಲ್ಲಿ ಅತಿ ದೊಡ್ಡ ಬದಲಾವಣೆ ತರಲಾಗಿದ್ದು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಗೃಹಬಳಕೆಯ ಎಲ್‌ಪಿಜಿ (LPG) ಗ್ರಾಹಕರಿಗೆ ಹಲವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಮೇ 1, 2026ರಿಂದ ಅಂದರೆ ಇಂದಿನಿಂದಲೇ ಈ ಹೊಸ ನಿಯಮಗಳು ದೇಶಾದ್ಯಂತ ಅನ್ವಯವಾಗಲಿದ್ದು, ಉಭಯ ಸಂಪರ್ಕಗಳ ರದ್ದತಿ, ಬುಕಿಂಗ್ ಅವಧಿಯ ಕಡಿತ ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಏರಿಕೆಯಂತಹ ಪ್ರಮುಖ ಅಂಶಗಳನ್ನು ಒಳಗೊಂಡಿದೆ.
ಎಲ್‌ಪಿಜಿ-ಪಿಎನ್‌ಜಿ ಉಭಯ ಸಂಪರ್ಕಕ್ಕೆ ಬ್ರೇಕ್
ಸಬ್ಸಿಡಿ ದುರ್ಬಳಕೆಯನ್ನು ತಡೆಯುವ ಹಾಗೂ ಅರ್ಹ ಫಲಾನುಭವಿಗಳಿಗೆ ಸೌಲಭ್ಯವನ್ನು ತಲುಪಿಸುವ ಉದ್ದೇಶದಿಂದ, ಎಲ್‌ಪಿಜಿ ಮತ್ತು ಪಿಎನ್‌ಜಿ (ಪೈಪ್ ಮೂಲಕ ನೈಸರ್ಗಿಕ ಅನಿಲ) ಎರಡೂ ಸಂಪರ್ಕಗಳನ್ನು ಹೊಂದಿರುವ ಮನೆಗಳನ್ನು ಗುರುತಿಸುವ ಕಾರ್ಯವನ್ನು ಸರ್ಕಾರ ಆರಂಭಿಸಿದೆ. ಎಲ್‌ಪಿಜಿ ನಿಯಂತ್ರಣ ಆದೇಶದ ತಿದ್ದುಪಡಿಯ ಅನ್ವಯ, ಪಿಎನ್‌ಜಿ ಸಂಪರ್ಕ ಹೊಂದಿರುವ ಗ್ರಾಹಕರು ಕಡ್ಡಾಯವಾಗಿ ತಮ್ಮ ಎಲ್‌ಪಿಜಿ ಸಂಪರ್ಕವನ್ನು ಹಿಂದಿರುಗಿಸಬೇಕಾಗುತ್ತದೆ ಹಾಗೂ ಅವರು ಹೊಸ ಸಂಪರ್ಕ ಪಡೆಯಲೂ ಅರ್ಹರಾಗಿರುವುದಿಲ್ಲ. ಇಂತಹ ಗ್ರಾಹಕರಿಗೆ ಗ್ಯಾಸ್ ಪೂರೈಸದಂತೆ ತೈಲ ಕಂಪನಿಗಳು ಹಾಗೂ ವಿತರಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಈಗಾಗಲೇ 43,000ಕ್ಕೂ ಹೆಚ್ಚು ಗ್ರಾಹಕರು ತಮ್ಮ ಎಲ್‌ಪಿಜಿ ಸಂಪರ್ಕವನ್ನು ಒಪ್ಪಿಸಿದ್ದು, ಈ ನಿಯಮದ ಕಟ್ಟುನಿಟ್ಟಿನ ಪಾಲನೆಯನ್ನು ಸರ್ಕಾರ ನಿರೀಕ್ಷಿಸುತ್ತಿದೆ. ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಉದ್ವಿಗ್ನತೆಯಿಂದ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಬುಕಿಂಗ್ ಅವಧಿಯಲ್ಲಿ ಬದಲಾವಣೆ ಮತ್ತು ಒಟಿಪಿ ಕಡ್ಡಾಯ
ಇಂಡೇನ್, ಭಾರತ್ ಗ್ಯಾಸ್ ಮತ್ತು ಎಚ್‌ಪಿ ಗ್ಯಾಸ್ ಸೇರಿದಂತೆ ಎಲ್ಲಾ ಗ್ರಾಹಕರಿಗೂ ಇನ್ನು ಮುಂದೆ ಬುಕಿಂಗ್, ಒಟಿಪಿ ಆಧಾರಿತ ವಿತರಣೆ ಮತ್ತು ಕೆವೈಸಿ (KYC) ಅಪ್‌ಡೇಟ್ ಕಡ್ಡಾಯವಾಗಿದೆ. ಹೊಸ ನಿಯಮದ ಪ್ರಕಾರ, ಗ್ಯಾಸ್ ಬುಕಿಂಗ್ ಮಧ್ಯದ ಅವಧಿಯನ್ನು ನಗರ ಪ್ರದೇಶಗಳಲ್ಲಿ 21 ದಿನಗಳಿಂದ 25 ದಿನಗಳಿಗೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳಿಗೆ ವಿಸ್ತರಿಸಲಾಗಿದೆ. ಅಂದರೆ, ಒಂದು ಬಾರಿ ಸಿಲಿಂಡರ್ ಪಡೆದ ಬಳಿಕ ನಿರ್ದಿಷ್ಟ ದಿನಗಳವರೆಗೆ ಮರು ಬುಕಿಂಗ್ ಮಾಡಲು ಸಾಧ್ಯವಿರುವುದಿಲ್ಲ. ಭದ್ರತೆ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಿಲಿಂಡರ್ ವಿತರಣೆಯ ವೇಳೆ ಗ್ರಾಹಕರು ಒಟಿಪಿ (OTP) ನೀಡುವುದು ಕಡ್ಡಾಯವಾಗಿದೆ.
ವಾಣಿಜ್ಯ ಸಿಲಿಂಡರ್ ಬೆಲೆ ಭಾರಿ ಏರಿಕೆ, ಗೃಹಬಳಕೆಗೆ ರಿಲೀಫ್
ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಂಡಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದಾಗಿ ಜಾಗತಿಕವಾಗಿ ಕಚ್ಚಾ ತೈಲ ಮತ್ತು ಅನಿಲದ ಬೆಲೆಗಳು ಹೆಚ್ಚಾಗಿವೆ. ಇದರ ನೇರ ಪರಿಣಾಮ ವಾಣಿಜ್ಯ ಬಳಕೆಯ (19 ಕೆಜಿ) ಸಿಲಿಂಡರ್ ಮೇಲಾಗಿದ್ದು, ಮಾರ್ಚ್ 2026ರಿಂದ ಸತತವಾಗಿ ಬೆಲೆ ಏರಿಕೆ ಮಾಡಲಾಗಿದೆ. ಮಾರ್ಚ್ 1ರಂದು ಸುಮಾರು 28 ರಿಂದ 31 ರೂ., ಮಾರ್ಚ್ 7ರಂದು 114.5 ರೂ. ಹಾಗೂ ಏಪ್ರಿಲ್‌ನಲ್ಲಿ 196 ರಿಂದ 218 ರೂಪಾಯಿಗಳವರೆಗೆ ಬೆಲೆ ಹೆಚ್ಚಿಸಲಾಗಿತ್ತು.
ಇದೀಗ ಮೇ 1ರ ಶುಕ್ರವಾರ ಮತ್ತೆ ದರ ಪರಿಷ್ಕರಣೆ ಮಾಡಲಾಗಿದ್ದು, ಬಿಕ್ಕಟ್ಟು ಆರಂಭವಾದಾಗಿನಿಂದ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಒಟ್ಟಾರೆ 993 ರೂ.ಗಳಷ್ಟು ಭಾರಿ ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಗೃಹಬಳಕೆಯ ಎಲ್‌ಪಿಜಿ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಸರ್ಕಾರ ಜನಸಾಮಾನ್ಯರಿಗೆ ರಿಲೀಫ್ ನೀಡಿದೆ. 14.2 ಕೆಜಿ ಗೃಹಬಳಕೆಯ ಸಿಲಿಂಡರ್ ಬೆಲೆ ದೆಹಲಿಯಲ್ಲಿ 913 ರೂ. ಗಳಷ್ಟೇ ಮುಂದುವರಿದಿದೆ.
ಪೆಟ್ರೋಲ್ ಮತ್ತು ಡೀಸೆಲ್ ದರಗಳು ಕೂಡ ಕ್ರಮವಾಗಿ ಪ್ರತಿ ಲೀಟರ್‌ಗೆ 94.77 ರೂ. ಮತ್ತು 87.67 ರೂ. ನಷ್ಟೇ ಇವೆ. ಪ್ರಸ್ತುತ ದರಗಳ ಅನ್ವಯ, ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ಗೃಹಬಳಕೆಯ ಸಿಲಿಂಡರ್ ಮೇಲೆ 380 ರೂ. ನಷ್ಟ ಅನುಭವಿಸುತ್ತಿದ್ದು, ಮೇ ಅಂತ್ಯದ ವೇಳೆಗೆ ಈ ನಷ್ಟ 40,484 ಕೋಟಿ ರೂ. ತಲುಪುವ ಅಂದಾಜಿದೆ. ಆದಾಗ್ಯೂ, ಜಾಗತಿಕ ಮಟ್ಟದಲ್ಲಿ ಎಷ್ಟೇ ಬಿಕ್ಕಟ್ಟು ಎದುರಾದರೂ ದೇಶದಲ್ಲಿ ಗೃಹಬಳಕೆಯ ಎಲ್‌ಪಿಜಿ, ಪಿಎನ್‌ಜಿ ಮತ್ತು ಸಾರಿಗೆ ಸಿಎನ್‌ಜಿ ಪೂರೈಕೆಯಲ್ಲಿ ಶೇ.100ರಷ್ಟು ವ್ಯತ್ಯಯವಾಗದಂತೆ ನೋಡಿಕೊಳ್ಳುವುದಾಗಿ ಸರ್ಕಾರ ಭರವಸೆ ನೀಡಿದೆ.
ಇದನ್ನೂ ಓದಿ : ನರ್ಮದಾ ನದಿಯಲ್ಲಿ ಕ್ರೂಸ್ ಬೋಟ್ ದುರಂತ : ಮಗುವನ್ನು ಅಪ್ಪಿಕೊಂಡೇ ಜಲಸಮಾಧಿಯಾದ ತಾಯಿ!


















