ಕಠ್ಮಂಡು : ನೇಪಾಳದಲ್ಲಿ ಕಳೆದ ಬುಧವಾರ ಸಂಭವಿಸಿರುವ ಭೀಕರ ಪ್ರವಾಹವು ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಪ್ರಚಂಡ ವೇಗದಲ್ಲಿ ಹರಿದುಬಂದ ದಿಢೀರ್ ಪ್ರವಾಹಕ್ಕೆ ನಗರಗಳು, ಬೃಹತ್ ಕಟ್ಟಡಗಳು ಮತ್ತು ಸೇತುವೆಗಳು ನಿಮಿಷಾರ್ಧದಲ್ಲಿ ನೀರುಪಾಲಾಗಿವೆ. ಆದರೆ, ಈ ಭೀಕರ ವಿನಾಶದ ನಡುವೆಯೂ ಅದ್ಭುತ ಪವಾಡವೊಂದು ಸಂಭವಿಸಿದ್ದು, ಎಲ್ಲ ಕಟ್ಟಡಗಳು ಕೊಚ್ಚಿಹೋದರೂ ಒಂದೇ ಒಂದು ಮನೆ ಮಾತ್ರ ಪ್ರವಾಹದ ರಭಸಕ್ಕೆ ಕದಲದೇ ಅಚಲವಾಗಿ ನಿಂತು ಸಂಪೂರ್ಣ ಕುಟುಂಬದ ಪ್ರಾಣವನ್ನು ಉಳಿಸಿದೆ.
ಆರ್ಭಟದ ನಡುವೆ ಕದಲದ ಆಸರೆ
ಸಾಮಾಜಿಕ ಜಲತಾಣಗಳಲ್ಲಿ ಭಾರೀ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಕೆಸರು ಮಿಶ್ರಿತ ಪ್ರವಾಹದ ನೀರು ಭೋರ್ಗರೆದು ಹರಿಯುತ್ತಿರುವ ದೃಶ್ಯವಿದೆ. ಅದರ ಸುತ್ತಮುತ್ತಲಿದ್ದ ಹಲವಾರು ಕಟ್ಟಡಗಳು, ವಾಹನಗಳು ನೀರಿನ ರಭಸಕ್ಕೆ ಸಿಲುಕಿ ಕ್ಷಣಾರ್ಧದಲ್ಲಿ ಕೊಚ್ಚಿ ಹೋಗುತ್ತಿವೆ. ಆದರೆ, ಅಲ್ಲಿಯೇ ಇದ್ದ ಹಸಿರು ಬಣ್ಣದ ಮನೆಯೊಂದು ಮಾತ್ರ ಪ್ರವಾಹದ ಪ್ರಚಂಡ ಹೊಡೆತವನ್ನು ತಡೆದುಕೊಂಡು ಹಾಗೆಯೇ ನಿಂತಿತ್ತು. ಆ ಮನೆಯೊಳಗೆ ಕುಟುಂಬವೊಂದು ಸಿಲುಕಿಕೊಂಡಿರುವುದು ದೃಶ್ಯದಲ್ಲಿ ಕಂಡುಬಂದಿದ್ದು, ಜಗತ್ತಿನಾದ್ಯಂತ ಲಕ್ಷಾಂತರ ವೀಕ್ಷಕರಲ್ಲಿ ತೀವ್ರ ಆತಂಕ ಹಾಗೂ ಕಳವಳವನ್ನು ಮೂಡಿಸಿತ್ತು.
ಕಟ್ಟಡದ ಗಟ್ಟಿಯಾದ ನಿರ್ಮಾಣಕ್ಕೆ ನೆಟ್ಟಿಗರ ಮೆಚ್ಚುಗೆ
ಪ್ರವಾಹ ಪೀಡಿತ ಪ್ರದೇಶದಿಂದ ಬಂದ ಎರಡನೇ ವಿಡಿಯೋದಲ್ಲಿ, ಆ ಹಸಿರು ಮನೆಯೊಳಗೆ ಸಿಲುಕಿದ್ದ ಕುಟುಂಬದ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿ ಸುರಕ್ಷಿತವಾಗಿದ್ದಾರೆ ಎಂಬ ಸಮಾಧಾನಕರ ಸುದ್ದಿ ಹೊರಬಿದ್ದಿದೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಕೋಟ್ಯಂತರ ವೀಕ್ಷಣೆ ಪಡೆದುಕೊಂಡಿದ್ದು, ನೆಟ್ಟಿಗರು ನಿಟ್ಟುಸಿರು ಬಿಟ್ಟಿದ್ದಾರೆ. ಪ್ರವಾಹದಂತಹ ನೈಸರ್ಗಿಕ ವಿಕೋಪವನ್ನು ತಡೆದು ನಿಂತ ಆ ಮನೆಯ ಗಟ್ಟಿಮುಟ್ಟಾದ ನಿರ್ಮಾಣದ ಬಗ್ಗೆ ಈಗ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದ್ದು, ಆ ಮನೆಯನ್ನು ಕಟ್ಟಿದ ಎಂಜಿನಿಯರ್ ಹಾಗೂ ಮೇಸ್ತ್ರಿಗೆ ಜನರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
ಜಾಲತಾಣಗಳಲ್ಲಿ ನೆಟ್ಟಿಗರ ಭಾವನಾತ್ಮಕ ಪ್ರತಿಕ್ರಿಯೆ
“ಪ್ರವಾಹದ ಭೀಕರತೆ ಕಂಡಾಗ ಆ ಮನೆಯೊಳಗಿದ್ದ ಕುಟುಂಬದ ಮನಸ್ಸಿನಲ್ಲಿ ಏನೆಲ್ಲಾ ಓಡುತ್ತಿರಬಹುದು? ಸಾವಿನಂಚಿನಲ್ಲಿದ್ದಾಗ ಅವರು ಹೆದರಿ ಕೂತಿದ್ದರೇ ಅಥವಾ ಜೀವ ಉಳಿಸಿಕೊಳ್ಳುವ ಪ್ಲಾನ್ ಮಾಡುತ್ತಿದ್ದರೇ? ಯಾರಾದರೂ ಆ ಕುಟುಂಬವನ್ನು ಸಂದರ್ಶನ ಮಾಡಬೇಕು” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. “ಇಷ್ಟೊಂದು ಭೀಕರ ಪ್ರವಾಹದ ರಭಸದಲ್ಲೂ ಮನೆ ಬಿದ್ದುಹೋಗದೆ ನಿಂತಿರುವುದು ಸರಿಯಾದ ಮತ್ತು ಬಲವಾದ ಕಟ್ಟಡ ನಿರ್ಮಾಣದ ಮಹತ್ವವನ್ನು ತೋರಿಸುತ್ತದೆ” ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ನೇಪಾಳ ಜಲಪ್ರಳಯ : ಟಿ-ಶರ್ಟ್ ಬೀಸಿ ಹೆಲಿಕಾಪ್ಟರ್ ಗಮನ ಸೆಳೆದು, ಕೊನೆಗೂ ಪಾರಾದ ಬಾಲಕ



















