ಮಂಗಳೂರು: ನಗರದ ಮರಕಡ ಜಂಕ್ಷನ್‌ನಲ್ಲಿ ಸಂಚರಿಸುತ್ತಿದ್ದ ಬಸ್‌ನಿಂದ ತಾಯಿ ಮತ್ತು ಮಗು ರಸ್ತೆಗೆ ಎಸೆಯಲ್ಪಟ್ಟ ಘಟನೆಗೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆಯ ಬಳಿಕ ಮತ್ತೊಂದು ಬಸ್‌ನ ಚಾಲಕ ಮತ್ತು ನಿರ್ವಾಹಕರು ತೋರಿದ ಮಾನವೀಯತೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಶುಕ್ರವಾರ ಮಧ್ಯಾಹ್ನ ಸುಮಾರು 2.24 ಗಂಟೆಗೆ ಬಜ್ಪೆ–ಮಂಗಳೂರು ನಡುವೆ ಸಂಚರಿಸುತ್ತಿದ್ದ ರೂಟ್ ನಂ. 47 ಬಸ್ ಮರಕಡ ಜಂಕ್ಷನ್ ತಿರುವಿನ ಬಳಿ ಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಬಸ್‌ನಲ್ಲಿದ್ದ ತಾಯಿ ಮತ್ತು ಮಗು ತಿರುವಿನ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿರುವುದು ವರದಿಯಾಗಿದೆ.
ಈ ದೃಶ್ಯವು ಹಿಂದಿನಿಂದ ಬರುತ್ತಿದ್ದ ರೂಟ್ ನಂ. 13ಬಿ ‘ಮಾಸ್ಟರ್’ ಬಸ್‌ನ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವೀಡಿಯೋದಲ್ಲಿ ತಾಯಿ ಮತ್ತು ಮಗು ರಸ್ತೆಗೆ ಬೀಳುವ ದೃಶ್ಯ ಸ್ಪಷ್ಟವಾಗಿ ದಾಖಲಾಗಿದೆ. ಘಟನೆ ನಡೆದ ತಕ್ಷಣ ಮಾಸ್ಟರ್ ಬಸ್‌ನ ಚಾಲಕ ಮತ್ತು ನಿರ್ವಾಹಕರು ಮಾನವೀಯತೆ ಮೆರೆದಿದ್ದಾರೆ. ತಮ್ಮ ಬಸ್‌ನ ಟ್ರಿಪ್ ಅಥವಾ ಸಮಯದ ಬಗ್ಗೆ ಚಿಂತಿಸದೇ, ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಇಳಿಸಿ ಗಾಯಗೊಂಡ ತಾಯಿ ಹಾಗೂ ಮಗುವನ್ನು ತಮ್ಮ ಬಸ್‌ನಲ್ಲೇ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಿದ್ದಾರೆ.
ಚಾಲಕ ಮತ್ತು ನಿರ್ವಾಹಕರ ಈ ತುರ್ತು ಸ್ಪಂದನೆ ಹಾಗೂ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಘಟನೆಯ ಸಂಪೂರ್ಣ ದೃಶ್ಯ ಬಸ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಾಯಿ ಮತ್ತು ಮಗುವಿನ ಆರೋಗ್ಯ ಸ್ಥಿತಿ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದ್ದು, ಘಟನೆಯ ಕುರಿತು ಸಂಬಂಧಿತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.


















