ಬೆಂಗಳೂರು : ನೇರಳೆ ಮಾರ್ಗದ ಮೆಟ್ರೋ ಪ್ರಯಾಣಿಕರಿಗೆ ಭಾನುವಾರ ಬೆಳಗ್ಗೆ ತಾತ್ಕಾಲಿಕ ಸಂಚಾರ ವ್ಯತ್ಯಯ ಉಂಟಾಗಲಿದೆ. ತುರ್ತು ನಿರ್ವಹಣಾ ಕಾಮಗಾರಿಯ ಹಿನ್ನೆಲೆಯಲ್ಲಿ ದೀಪಾಂಜಲಿನಗರ ಮತ್ತು ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಗಳ ನಡುವಿನ ಸಂಚಾರವನ್ನು ಎರಡು ಗಂಟೆಗಳ ಕಾಲ ಸ್ಥಗಿತಗೊಳಿಸಲಾಗುತ್ತಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದರೆ.
ಭಾನುವಾರ ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ದೀಪಾಂಜಲಿನಗರ – ಕೆಎಸ್‌ಆರ್ ಮೆಜೆಸ್ಟಿಕ್ ಮಾರ್ಗದಲ್ಲಿ ಮೆಟ್ರೋ ರೈಲುಗಳ ಸಂಚಾರ ಇರುವುದಿಲ್ಲ. ಅತ್ತಿಗುಪ್ಪೆ ಮತ್ತು ವಿಜಯನಗರ ಮೆಟ್ರೋ ನಿಲ್ದಾಣಗಳ ಮಧ್ಯೆ ತುರ್ತು ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆದರೆ, ಚಾಲಘಟ್ಟ – ಮೈಸೂರು ರಸ್ತೆ ಹಾಗೂ ಮೆಜೆಸ್ಟಿಕ್ – ವೈಟ್‌ಫೀಲ್ಡ್ (ಕಾಡುಗೋಡಿ) ಮಾರ್ಗಗಳಲ್ಲಿ ಎಂದಿನಂತೆ ಮೆಟ್ರೋ ಸಂಚಾರ ಮುಂದುವರಿಯಲಿದೆ. ಹಸಿರು ಮಾರ್ಗ ಮತ್ತು ಹಳದಿ ಮಾರ್ಗ ಸೇವೆಯಲ್ಲಿಯೂ ಯಾವುದೇ ವ್ಯತ್ಯಯ ಇರುವುದಿಲ್ಲ ಎಂದು ತಿಳಿಸಿದರು.
ಕಾಮಗಾರಿ ಪೂರ್ಣಗೊಂಡ ಬಳಿಕ ಬೆಳಗ್ಗೆ 9 ಗಂಟೆಯಿಂದ ನೇರಳೆ ಮಾರ್ಗದಲ್ಲಿ ಸಂಪೂರ್ಣ ಮೆಟ್ರೋ ಸಂಚಾರ ಪುನರಾರಂಭವಾಗಲಿದೆ ಎಂದು BMRCL ಸ್ಪಷ್ಟಪಡಿಸಿದೆ.


















